ಒಂದೇ ಒಲಿಂಪಿಕ್ಸ್‌ನಲ್ಲಿ 3 ಪದಕ ಜಯಿಸಿ ಮಹತ್ವದ ಮೈಲಿಗಲ್ಲು ತಲುಪಿದ ಶೂಟರ್‌ಗಳು

Update: 2024-08-01 16:26 GMT

PC : PTI ( ಸ್ವಪ್ನಿಲ್ ಕುಸಾಲೆ , ಮನು ಭಾಕರ್ , ಸರಬ್ಜೋತ್ ಸಿಂಗ್)

ಪ್ಯಾರಿಸ್ : ಭಾರತದ ಶೂಟರ್‌ಗಳು ಒಂದೇ ಒಲಿಂಪಿಕ್ಸ್‌ನಲ್ಲಿ ಮೂರು ಪದಕಗಳನ್ನು ಜಯಿಸಿ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಭಾರತದ 124 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಂದೇ ಕ್ರೀಡೆಯಲ್ಲಿ 3 ಪದಕಗಳನ್ನು ಬಾಚಿಕೊಂಡಿದೆ.

ಮನು ಭಾಕರ್ ಮಹಿಳೆಯರ ವೈಯಕ್ತಿಕ 10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸಿ ಈ ಮೈಲಿಗಲ್ಲಿಗೆ ಬುನಾದಿ ಹಾಕಿಕೊಟ್ಟರು. ಸರಬ್ಜೋತ್ ಸಿಂಗ್ ಜೊತೆಗೂಡಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ಮಿಶ್ರ ಟೀಮ್ ವಿಭಾಗದಲ್ಲಿ ಮತ್ತೊಂದು ಕಂಚು ಜಯಿಸಿದರು. ಪ್ಯಾರಿಸ್ ಗೇಮ್ಸ್‌ನ 6ನೇ ದಿನವಾದ ಗುರುವಾರ ಸ್ವಪ್ನಿಲ್ ಕುಸಾಲೆ ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸಿ ಭಾರತದ ಖಾತೆಗೆ 3ನೇ ಪದಕ ಜಮೆ ಮಾಡಿದರು. ಈ ವೇಳೆ 2024ರ ಆವೃತ್ತಿಯ ಒಲಿಂಪಿಕ್ ಗೇಮ್ಸ್‌ನಲ್ಲಿ ಶೂಟರ್‌ಗಳು ಅಭೂತಪೂರ್ವ ಸಾಧನೆ ಮಾಡಿದರು.

ಸ್ಪರ್ಧೆಯ ಒಂದು ಹಂತದಲ್ಲಿ 6ನೇ ಸ್ಥಾನದಲ್ಲಿದ್ದ ಕುಸಾಲೆ ಅಂತಿಮವಾಗಿ 3ನೇ ಸ್ಥಾನಕ್ಕೇರಿ ಕಂಚಿನ ಪದಕ ಗೆದ್ದುಕೊಂಡರು. 

1900ರಲ್ಲಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಆರಂಭಿಸಿದ ನಂತರ ಭಾರತ ಇದೇ ಮೊದಲ ಬಾರಿ ಒಂದೇ ಆವೃತ್ತಿಯಲ್ಲಿ ಒಂದೇ ಕ್ರೀಡೆಯಲ್ಲಿ ಮೂರು ಪದಕಗಳನ್ನು ಗೆದ್ದುಕೊಂಡಿದೆ. ಭಾರತವು ಒಲಿಂಪಿಕ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಒಂದೇ ಕ್ರೀಡೆಯಲ್ಲಿ ಎರಡು ಪದಕಗಳನ್ನು ಗೆದ್ದ ನಿದರ್ಶನವಿದೆ. ಆದರೆ ಈ ಹಿಂದೆ ಮೂರು ಪದಕಗಳನ್ನು ಗೆದ್ದಿರಲಿಲ್ಲ.

ಭಾರತವು ಈ ಹಿಂದೆ ಒಲಿಂಪಿಕ್ ಗೇಮ್ಸ್‌ನಲ್ಲಿ ಶೂಟಿಂಗ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಗಗನ್ ನಾರಂಗ್ ಹಾಗೂ ವಿಜಯಕುಮಾರ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವು ಬಾಕ್ಸಿಂಗ್‌ನಲ್ಲಿ ಎರಡು ಪದಕಗಳನ್ನು ಜಯಿಸಿತ್ತು. ಬಜರಂಗ್ ಪುನಿಯಾ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಹಾಗೂ 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ರವಿ ಕುಮಾರ್ ದಹಿಯಾ ಬೆಳ್ಳಿ ಪದಕ ಜಯಿಸಿದ್ದರು.

ಇದಕ್ಕೂ ಮೊದಲು 1900ರಲ್ಲಿ ನಡೆದಿದ್ದ ಗೇಮ್ಸ್‌ನಲ್ಲಿ ಬ್ರಿಟಿಷ್ ಆಡಳಿತದಲ್ಲಿ ಭಾರತದ ಪರ ನಾರ್ಮನ್ ಪ್ರಿಚರ್ಡ್ ಪುರುಷರ 200 ಮೀ. ಓಟ ಹಾಗೂ ಪುರುಷರ 200 ಮೀ.ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಭಾರತವು ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಇನ್ನೂ ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದು, ಶೂಟಿಂಗ್ ಕ್ರೀಡೆಯಿಂದ ಅದರಲ್ಲೂ ಮುಖ್ಯವಾಗಿ ಮನು ಭಾಕರ್‌ರಿಂದ ಮತ್ತೊಂದು ಪದಕ ನಿರೀಕ್ಷಿಸಲಾಗುತ್ತಿದೆ. ಭಾಕರ್ ಮಹಿಳೆಯರ 25 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News