ಹಾಕಿ | ಐರ್‌ಲ್ಯಾಂಡನ್ನು 2-0 ಗೋಲಿನಿಂದ ಸೋಲಿಸಿದ ಭಾರತ
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಂಗಳವಾರ, ಭಾರತೀಯ ಪುರುಷರ ಹಾಕಿ ತಂಡವು ತನ್ನ ‘ಬಿ’ ಬಣದ ಮೂರನೇ ಪಂದ್ಯದಲ್ಲಿ ಐರ್‌ಲ್ಯಾಂಡ್ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿದೆ. ಇದರೊಂದಿಗೆ, ಭಾರತವು ಗುಂಪಿನಲ್ಲಿ ತನ್ನ ಸ್ಥಿತಿಯನ್ನು ಬಲಪಡಿಸಿಕೊಂಡಿದೆ.
ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಒಂದು ಪೆನಾಲ್ಟಿ ಸ್ಟ್ರೋಕ್ ಮತ್ತು ಒಂದು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸುವ ಮೂಲಕ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ತನ್ನ ಮೊದಲ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 3-2 ಗೋಲುಗಳಿಂದ ಮಣಿಸಿತ್ತು. ಆದರೆ, ಅರ್ಜೆಂಟೀನ ವಿರುದ್ಧದ ಎರಡನೇ ಪಂದ್ಯವನ್ನು 1-1ರಿಂದ ಡ್ರಾಗೊಳಿಸಿತ್ತು.
ಹಿಂದಿನ ಪಂದ್ಯಗಳಂತಲ್ಲದೆ, ಐರ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತವು ಆರಂಭದಿಂದಲೇ ಆಕ್ರಮಣಕಾರಿ ಧೋರಣೆಯನ್ನು ಅನುಸರಿಸಿತು. ಮೊದಲ ಎರಡು ನಿಮಿಷಗಳಲ್ಲೇ ಅದಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿತು. ಆದರೆ, ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಹರ್ಮನ್‌ಪ್ರೀತ್ ಯಶಸ್ವಿಯಾಗಲಿಲ್ಲ. ಆದರೆ, ಎದುರಾಳಿಯ ಮೇಲೆ ಒತ್ತಡ ಹೇರುವಲ್ಲಿ ಅದು ಯಶಸ್ವಿಯಾಯಿತು.
ಭಾರತಕ್ಕೆ 11ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಮುನ್ನಡೆ ಲಭಿಸಿತು. ಆ ಪೆನಾಲ್ಟಿ ಸ್ಟ್ರೋಕನ್ನು ಗೋಲಾಗಿ ಪರಿವರ್ತಿಸುವಲ್ಲಿ ಹರ್ಮನ್‌ಪ್ರೀತ್ ಯಶಸ್ವಿಯಾದರು. ಅದರೊಂದಿಗೆ ಭಾರತವು ಪಂದ್ಯದಲ್ಲಿ 1-0 ಮುನ್ನಡೆ ಗಳಿಸಿತು.
ಭಾರತದ ಪ್ರಾಬಲ್ಯವು ಮುಂದುವರಿಯಿತು. 19ನೇ ನಿಮಿಷದಲ್ಲಿ ಬೆನ್ನು ಬೆನ್ನಿಗೆ ಎರಡು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಎರಡನೇ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸುವಲ್ಲಿ ಇನ್ನೊಮ್ಮೆ ಹರ್ಮನ್‌ಪ್ರೀತ್ ಯಶಸ್ವಿಯಾದರು. ಅದರೊಂದಿಗೆ ಭಾರತವು ಪಂದ್ಯದಲ್ಲಿ 2-0 ಮುನ್ನಡೆ ಪಡೆಯಿತು.
ಐರ್‌ಲ್ಯಾಂಡ್‌ನ ಆಕ್ರಮಣಗಳನ್ನು ಭಾರತದ ಅನುಭವವಿ ರಕ್ಷಣಾ ಆಟಗಾರರು ವಿಫಲಗೊಳಿಸಿದರು.
ಇನ್ನು ಭಾರತವು ಗುರುವಾರ ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಮ್‌ನ್ನು ಎದುರಿಸಲಿದೆ. ಬಳಿಕ ಶುಕ್ರವಾರ ಹಾಕಿ ದಿಗ್ಗಜ ಆಸ್ಟ್ರೇಲಿಯವನ್ನು ಎದುರಿಸಲಿದೆ.