ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ನಿಂದ ಮುಂಬೈ ಇಂಡಿಯನ್ಸ್ ನತ್ತ?

Update: 2023-11-25 16:47 GMT

Photo- PTI

ಮುಂಬೈ : ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಆಡಲು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಲಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೊ ವರದಿ ಮಾಡಿದೆ.

ಇದಕ್ಕೆ ಸಂಬಂಧಿಸಿ ಮುಂಬೈ ಇಂಡಿಯನ್ಸ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಗುಜರಾತ್ ಟೈಟಾನ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೊ ವರದಿಯೊಂದು ತಿಳಿಸಿದೆ. ಈ ಒಪ್ಪಂದಗಳ ಪ್ರಕಾರ, ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯಗೆ ವರ್ಷಕ್ಕೆ 15 ಕೋಟಿ ರೂಪಾಯಿ ವೇತನ ನೀಡಲಿದೆ ಮತ್ತು ಗುಜರಾತ್ ಟೈಟಾನ್ಸ್ ಗೆ ವರ್ಗಾವಣೆ ಶುಲ್ಕವನ್ನು ನೀಡಲಿದೆ. ಆದರೆ, ಈ ವರ್ಗಾವಣೆ ಶುಲ್ಕದ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ. ಈ ವರ್ಗಾವಣೆ ಶುಲ್ಕದ ಅರ್ಧದಷ್ಟನ್ನು ಹಾರ್ದಿಕ್ ಪಾಂಡ್ಯ ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ.

ಈ ಬೆಳವಣಿಗೆಗಳು ಯೋಜಿತ ರೀತಿಯಲ್ಲಿ ಸಾಗಿದರೆ, ಇದು ಐಪಿಎಲ್ ಇತಿಹಾಸದ ಅತಿ ದೊಡ್ಡ ಆಟಗಾರ ವರ್ಗಾವಣೆಯಾಗಲಿದೆ. ಈವರೆಗೆ, ಗುಜರಾತ್ ಟೈಟಾನ್ಸ್ ಆಗಲಿ, ಮುಂಬೈ ಇಂಡಿಯನ್ಸ್ ಆಗಲಿ ಈ ವಿಷಯವನ್ನು ಪ್ರಕಟಿಸಿಲ್ಲ.

ಐಪಿಎಲ್ 2022ರ ಋತುವಿನಲ್ಲಿ, ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಗೆದ್ದಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಗಿತ್ತು. ಅದು ಗುಜರಾತ್ ಟೈಟಾನ್ಸ್ ನ ಮೊದಲ ಐಪಿಎಲ್ ಋತುವಾಗಿತ್ತು.

ಐಪಿಎಲ್ 2023ರ ಋತುವಿನಲ್ಲಿ, ಸತತ ಎರಡನೇ ಬಾರಿಗೆ ಗುಜರಾತ್ ಟೈಟಾನ್ಸ್ ಫೈನಲ್ ತಲುಪಿತ್ತು. ಆದರೆ, ಫೈನಲ್ ನಲ್ಲಿ ಅದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತು.

ಹಾರ್ದಿಕ್ ಪಾಂಡ್ಯ 2015ರಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡಿದರು. ಈವರೆಗೆ ಅವರು ಐಪಿಎಲ್ ನಲ್ಲಿ 123 ಪಂದ್ಯಗಳನ್ನು ಆಡಿದ್ದಾರೆ. ಅವರು 53 ವಿಕೆಟ್ ಗಳನ್ನು ಗಳಿಸಿದ್ದಾರೆ ಮತ್ತು 139.89ರ ಸ್ಟ್ರೈಕ್ ರೇಟ್ನಲ್ಲಿ 2309 ರನ್ ಗಳನ್ನು ಮಾಡಿದ್ದಾರೆ.

ಐಪಿಎಲ್ನಲ್ಲಿ ವರ್ಗಾವಣೆಗೊಂಡ 3ನೇ ನಾಯಕ

ಈ ವರ್ಗಾವಣೆ ಸಂಭವಿಸಿದರೆ, ಪಾಂಡ್ಯ ಐಪಿಎಲ್ ಇತಿಹಾಸದಲ್ಲಿ ವರ್ಗಾವಣೆಗೊಂಡ ಮೂರನೇ ನಾಯಕರಾಗಲಿದ್ದಾರೆ. ವರ್ಗಾವಣೆಗೊಂಡ ಮೊದಲ ನಾಯಕ ರವಿಚಂದ್ರನ್ ಅಶ್ವಿನ್ ಆಗಿದ್ದರು. ಅವರು ಪಂಜಾಬ್ ಕಿಂಗ್ಸ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆ ಹೋಗಿದ್ದರು. ವರ್ಗಾವಣೆಗೊಂಡ ಎರಡನೇ ನಾಯಕ ಅಜಿಂಕ್ಯ ರಹಾನೆ. ಅವರು 2020ರಲ್ಲಿ ರಾಜಸ್ಥಾನ ರಾಯಲ್ಸ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆ ಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News