ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ | ಕೆ.ಎಲ್. ರಾಹುಲ್ ಆಡಲು ಫಿಟ್, ಈಶ್ವರನ್, ನಿತಿಶ್ ಚೊಚ್ಚಲ ಪಂದ್ಯ ಆಡುವ ಸಾಧ್ಯತೆ

Update: 2024-11-19 15:24 GMT

ಕೆ.ಎಲ್. ರಾಹುಲ್ | PC  :PTI 

ಮೆಲ್ಬರ್ನ್ : ಪರ್ತ್‌ನ ಒಪ್ಟಸ್ ಕ್ರೀಡಾಂಗಣದಲ್ಲಿ ನವೆಂಬರ್ 22ರಿಂದ ಆರಂಭವಾಗಲಿರುವ ಮೊದಲ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯವನ್ನು ಎದುರಿಸಲಿದೆ.

ಗಾಯದ ಸಮಸ್ಯೆಗಳು ಹಾಗೂ ನಾಯಕ ರೋಹಿತ್ ಶರ್ಮಾರ ಅನುಪಸ್ಥಿತಿಯಿಂದಾಗಿ ಅಗ್ರ ಸರದಿಯಲ್ಲಿ ಪ್ರವಾಸಿ ತಂಡ ಹಲವು ಸ್ಥಾನ ತುಂಬಬೇಕಾದ ಒತ್ತಡದಲ್ಲಿದೆ. ರೋಹಿತ್ ಅವರು ಸರಣಿಯ ಆರಂಭಿಕ ಪಂದ್ಯದಲ್ಲಿ ಲಭ್ಯವಿರದ ಕಾರಣ ಜಸ್‌ಪ್ರಿತ್ ಬುಮ್ರಾ ನಾಯಕತ್ವವಹಿಸಿಕೊಳ್ಳಲಿದ್ದಾರೆ.

►ಜೈಸ್ವಾಲ್‌ರೊಂದಿಗೆ ಇನಿಂಗ್ಸ್ ಆರಂಭಿಸುವವರು ಯಾರು?

ರೋಹಿತ್ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಅವರು ಯಶಸ್ವಿ ಜೈಸ್ವಾಲ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇತ್ತು. ಆದರೆ, ಹೆಬ್ಬೆರಳು ಗಾಯದಿಂದಾಗಿ ಶುಭಮನ್ ಗಿಲ್ ಮೊದಲ ಪಂದ್ಯದಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ರಾಹುಲ್ ಅವರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.

ಅಂತಹ ಸನ್ನಿವೇಶದಲ್ಲಿ ಅಭಿಮನ್ಯು ಈಶ್ವರನ್ ಮೊದಲ ಬಾರಿ ಟೆಸ್ಟ್ ಕ್ಯಾಪ್ ಧರಿಸಿ ಇನಿಂಗ್ಸ್ ಆರಂಭಿಸಬಹುದು. ಆಸ್ಟ್ರೇಲಿಯ ಎ ವಿರುದ್ಧ ಭಾರತ ಎ ಪರ 4 ಇನಿಂಗ್ಸ್‌ಗಳಲ್ಲಿ ಕೇವಲ 36 ರನ್ ಗಳಿಸಿದ ಹೊರತಾಗಿಯೂ ಈಶ್ವರನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ.

►ಧ್ರುವ್ ಜುರೆಲ್ ಅಥವಾ ಸರ್ಫರಾಝ್ ಖಾನ್ ಯಾರಿಗೆ ಅವಕಾಶ?

ಆಸ್ಟ್ರೇಲಿಯ ವಿರುದ್ಧ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ನಂತರ ಧ್ರುವ್ ಜುರೆಲ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿಸಿಕೊಂಡಿದ್ದಾರೆ. 23ರ ಹರೆಯದ ಜುರೆಲ್ 2 ಇನಿಂಗ್ಸ್‌ಗಳಲ್ಲಿ 68 ರನ್ ಗಳಿಸಿದ್ದರು.

ಜುರೆಲ್ ಅವರು ಸರ್ಫರಾಝ್ ಖಾನ್ ಬದಲಿಗೆ ಆಡಬಹುದು. ಮುಂಬೈ ಬ್ಯಾಟರ್ ಖಾನ್ ನ್ಯೂಝಿಲ್ಯಾಂಡ್ ವಿರುದ್ಧ ಇತ್ತೀಚೆಗೆ ಶತಕವನ್ನು ಗಳಿಸಿದ್ದರೂ ಆ ನಂತರ ದೊಡ್ಡ ಮೊತ್ತ ಗಳಿಸಲಿಲ್ಲ. ಆಸ್ಟ್ರೇಲಿಯದ ವಾತಾವರಣದಲ್ಲಿ ಆಡಿದ ಅನುಭವದ ಕೊರತೆಯು ಅವರಿಗೆ ಮೈನಸ್ ಪಾಯಿಂಟ್ ಆಗಿದೆ.

►ಹರ್ಷಿತ್ ರಾಣಾ ಅಥವಾ ನಿತಿಶ್ ಕುಮರ್ ರೆಡ್ಡಿ ಯಾರಿಗೆ ಸಿಗಲಿದೆ ಚೊಚ್ಚಲ ಪಂದ್ಯ ಆಡುವ ಅವಕಾಶ

ಪರ್ತ್‌ನ ವೇಗ ಹಾಗೂ ಬೌನ್ಸ್ ಅನ್ನು ಪರಿಗಣಿಸಿ ಭಾರತವು ಓರ್ವ ವೇಗದ ಬೌಲಿಂಗ್ ಆಲ್‌ರೌಂಡರ್ ಅನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಕಳೆದ ವಾರ ವಾಕಾದಲ್ಲಿ ನಡೆದಿದ್ದ ಭಾರತದ ಇಂಟ್ರಾ-ಸ್ಕ್ವಾಡ್ ಪಂದ್ಯದ ವೇಳೆ ಹರ್ಷಿತ್ ರಾಣಾ ಹಾಗೂ ನಿತಿಶ್ ಕುಮಾರ್ ರೆಡ್ಡಿ ಇಬ್ಬರೂ ಉತ್ತಮ ಸ್ಪೆಲ್ ಎಸೆದಿದ್ದರು.

ಆದರೆ ವರದಿಗಳ ಪ್ರಕಾರ, ಚೊಚ್ಚಲ ಪಂದ್ಯ ಆಡುವ ವಿಚಾರದಲ್ಲಿ ಹರ್ಷಿತ್‌ಗಿಂತ ನಿತಿಶ್ ಅವರೇ ಫೇವರಿಟ್ ಆಗಿದ್ದಾರೆ. ಆರ್.ಅಶ್ವಿನ್ ಇಲ್ಲವೇ ರವೀಂದ್ರ ಜಡೇಜ ಮಾತ್ರ ಆಡುವ ನಿರೀಕ್ಷೆ ಇದೆ. ಗಮನಾರ್ಹ ಅಂಶವೆಂದರೆ 2018ರಲ್ಲಿ ಪರ್ತ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಭಾರ ತಂಡವು ಸ್ಪಿನ್ನರ್‌ನ್ನು ಕಣಕ್ಕಿಳಿಸಿರಲಿಲ್ಲ.

►ಯಾರಾಗಲಿದ್ದಾರೆ ಭಾರತದ ಮೂರನೇ ವೇಗಿ?

ಮುಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರಿತ್ ಬುಮ್ರಾ ಮೊದಲ ಟೆಸ್ಟ್‌ನಲ್ಲಿ ಸೇರಲು ಸಜ್ಜಾಗಿದ್ದಾರೆ. ಆದರೆ ಭಾರತವು ಮುಹಮ್ಮದ್ ಶಮಿ ಅವರ ಬದಲಿ ಬೌಲರ್ ಅನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ. ಪ್ರಸಿದ್ಧ ಕೃಷ್ಣ ಹಾಗೂ ಆಕಾಶ್ ದೀಪ್ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಭಾಗವಹಿಸಿದ್ದು, ಶಮಿ ಸ್ಥಾನವನ್ನು ತುಂಬಲು ಈ ಇಬ್ಬರು ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ.

ಆಕಾಶ್ ಅವರು ನ್ಯೂಝಿಲ್ಯಾಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಭಾರತ ತಂಡದ ಭಾಗವಾಗಿದ್ದು, ಅವರು ಅವಕಾಶ ಪಡೆಯುವ ನಿರೀಕ್ಷೆ ಇದೆ.

►ಭಾರತದ ಸಂಭಾವ್ಯ 11ರ ಬಳಗ

ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್‌ ಕೀಪರ್), ಧ್ರುವ್ ಜುರೆಲ್, ರವೀಂದ್ರ ಜಡೇಜ, ನಿತಿಶ್ ಕುಮಾರ್ ರೆಡ್ಡಿ, ಜಸ್‌ಪ್ರಿತ್ ಬುಮ್ರಾ(ನಾಯಕ), ಮುಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News