ತನ್ನನ್ನು ಉಳಿಸಿಕೊಳ್ಳದ ಡೆಲ್ಲಿ ಕ್ಯಾಪಿಟಲ್ ತಂಡದ ಬಗ್ಗೆ ಮೌನ ಮುರಿದ ರಿಷಭ್ ಪಂತ್

Update: 2024-11-19 20:59 IST
Photo of Rishabh Pant

ರಿಷಭ್ ಪಂತ್  | PC : PTI 

  • whatsapp icon

ಹೊಸದಿಲ್ಲಿ : ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನನ್ನು ಉಳಿಸಿಕೊಳ್ಳದೇ ಇರುವುದಕ್ಕೂ, ಹಣಕಾಸಿನ ವಿಚಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ರಿಷಭ್ ಪಂತ್ ಅವರು ಮಾಜಿ ಬ್ಯಾಟರ್ ಸುನೀಲ್ ಗವಾಸ್ಕರ್‌ಗೆ ತಿರುಗೇಟು ನೀಡಿದ್ದಾರೆ.

ಸೌದಿ ಅರೇಬಿಯದ ಜಿದ್ದಾದಲ್ಲಿ ನ.24 ಹಾಗೂ 25ರಂದು ನಡೆಯಲಿರುವ ಐಪಿಎಲ್ 2025ರ ಮೆಗಾ ಹರಾಜಿಗಿಂತ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಜಿ ಡೆಲ್ಲಿ ನಾಯಕ ಪಂತ್‌ರನ್ನು ತಂಡದಲ್ಲಿ ಉಳಿಸಿಕೊಂಡಿರಲಿಲ್ಲ.

ಐಪಿಎಲ್ ರಿಟೆನ್ಶನ್ ಹಾಗೂ ಮುಂಬರುವ ಹರಾಜಿನ ಕುರಿತು ಗವಾಸ್ಕರ್ ಮಾತನಾಡಿರುವ ವೀಡಿಯೊದ ಬಗ್ಗೆ ಪ್ರತಿಕ್ರಿಯಿಸಿರುವ ಪಂತ್, ನನ್ನನ್ನು ಡೆಲ್ಲಿ ತಂಡವು ಉಳಿಸಿಕೊಳ್ಳದೇ ಇರುವುದಕ್ಕೂ, ಹಣಕಾಸಿಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಹೇಳಬಲ್ಲೆ ಎಂದಿದ್ದಾರೆ.

ಹರಾಜಿನ ಡೈನಾಮಿಕ್ಸ್ ಸಂಪೂರ್ಣವಾಗಿ ವಿಭಿನ್ನವಾಗಿದೆ. ಹೀಗಾಗಿ ಅದು ಹೇಗಿರಲಿದೆ ಎಂದು ನಮಗೆ ಗೊತ್ತಿಲ್ಲ. ಆದರೆ ಡೆಲ್ಲಿ ತಂಡ ಖಂಡಿತವಾಗಿಯೂ ಪಂತ್‌ರನ್ನು ಮತ್ತೆ ಸೇರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಆ ತಂಡಕ್ಕೆ ನಾಯಕನ ಅಗತ್ಯವಿದೆ. ಒಂದು ವೇಳೆ ಪಂತ್, ಡೆಲ್ಲಿ ತಂಡದಲ್ಲಿ ಇರದಿದ್ದರೆ ಅದು ನಾಯಕನ ಸ್ಥಾನದತ್ತ ನೋಡಬೇಕಾಗುತ್ತದೆ. ರಿಷಭ್ ಪಂತ್‌ರತ್ತ ಡೆಲ್ಲಿ ಗಮನ ಹರಿಸಬೇಕಾಗಿದೆ. ಕೆಲವೊಮ್ಮೆ ಆಟಗಾರನನ್ನು ಉಳಿಸಿಕೊಳ್ಳಬೇಕಾದಾಗ ಆಟಗಾರ ಹಾಗೂ ಫ್ರಾಂಚೈಸಿ ನಡುವೆ ನಿರೀಕ್ಷಿತ ಶುಲ್ಕದ ಬಗ್ಗೆ ಮಾತುಕತೆ ನಡೆಯುತ್ತದೆ. ಫ್ರಾಂಚೈಸಿಗಳಿಂದ ಉಳಿಸಿಕೊಳ್ಳಲ್ಪಟ್ಟಿರುವ ಕೆಲವು ಆಟಗಾರರು ತಮ್ಮ ಕಡಿತದ ಶುಲ್ಕಕ್ಕಿಂತ ಹೆಚ್ಚಿನ ಬೆಲೆಗೆ ಹರಾಜಾಗಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಡೆಲ್ಲಿ ತಂಡವು ಐಪಿಎಲ್-2025ಕ್ಕೆ ನಾಲ್ವರು ಆಟಗಾರರಾದ ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಅಭಿಷೇಕ್ ಪೊರೆಲ್‌ರನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ಈ ನಾಲ್ವರ ಮೇಲೆ 43.75 ಕೋಟಿ ರೂ. ವ್ಯಯಿಸಿದೆ. ಪರಿಣಾಮವಾಗಿ 76.25 ಕೋಟಿ ರೂ.ನೊಂದಿಗೆ ಹರಾಜಿಗೆ ಪ್ರವೇಶಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News