ಈಶ್ವರನ್ ಶತಕ, ಅನ್ಶುಲ್‌ಗೆ ಐದು ವಿಕೆಟ್ ಗೊಂಚಲು | ಇಂಡಿಯಾ ಸಿ ವಿರುದ್ಧ ಇಂಡಿಯಾ ಬಿ 309/7

Update: 2024-09-14 15:56 GMT

ಅಭಿಮನ್ಯು ಈಶ್ವರನ್

ಅನಂತಪುರ : ದುಲೀಪ್ ಟ್ರೋಫಿ ಪಂದ್ಯದಲ್ಲಿ ಶನಿವಾರ ಭಾರತ ಬಿ ತಂಡವು ಅಭಿಮನ್ಯು ಈಶ್ವರನ್(ಔಟಾಗದೆ 143 ರನ್)ಶತಕದ ನೆರವಿನಿಂದ ಇಂಡಿಯಾ ಸಿ ತಂಡದ ವಿರುದ್ಧ 7 ವಿಕೆಟ್‌ಗಳ ನಷ್ಟಕ್ಕೆ 309 ರನ್ ಗಳಿಸಿದೆ.

ಈಶ್ವರನ್ ಅವರ ಶತಕದ ಹೊರತಾಗಿಯೂ ಇಂಡಿಯಾ ಬಿ ತಂಡ ಈಗಲೂ 216 ರನ್ ಹಿನ್ನಡೆಯಲ್ಲಿದೆ. ಕೇವಲ ಮೂರು ವಿಕೆಟ್ ಕೈಯ್ಯಲಿರುವ ಇಂಡಿಯಾ ಬಿ ತಂಡಕ್ಕೆ ಫಾಲೋ ಆನ್‌ನಿಂದ ಪಾರಾಗಲು ಇನ್ನೂ 66 ರನ್ ಅಗತ್ಯವಿದೆ.

ಇಂಡಿಯಾ ಸಿ ತಂಡವು ಇಶಾನ್ ಕಿಶನ್ ಶತಕದ ಸಹಾಯದಿಂದ ತನ್ನ ಮೊದಲ ಇನಿಂಗ್ಸ್‌ ನಲ್ಲಿ 525 ರನ್ ಗಳಿಸಿದೆ.

3ನೇ ದಿನವಾದ ಶನಿವಾರ ನಾಯಕ ಈಶ್ವರನ್ 262 ಎಸೆತಗಳ ಇನಿಂಗ್ಸ್ ಆಡಿ ಗಮನ ಸೆಳೆದರು. ಐದು ವಿಕೆಟ್ ಗೊಂಚಲು ಪಡೆದಿರುವ ಇಂಡಿಯಾ ಸಿ ತಂಡದ ವೇಗದ ಬೌಲರ್ ಅನ್ಶುಲ್ ಕಾಂಬೊಜ್‌ಗೆ(5-66) ವಿಕೆಟ್ ಒಪ್ಪಿಸಿದರು.

ವಿಕೆಟ್ ನಷ್ಟವಿಲ್ಲದೆ 124 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಡಿಯಾ ಬಿ ತಂಡದ ಪರ ಈಶ್ವರನ್ ಔಟಾಗದೆ 51 ಹಾಗೂ ಜಗದೀಶನ್ ಔಟಾಗದೆ 67 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದರು. ಜಗದೀಶನ್(70ರನ್) ವಿಕೆಟ್ ಪಡೆದ ಅನ್ಶುಲ್ 129 ರನ್ ಜೊತೆಯಾಟವನ್ನು ಮುರಿದರು.

ಅನ್ಶುಲ್ ಅವರು ಮುಶೀರ್ ಖಾನ್(1 ರನ್), ಸರ್ಫರಾಝ್ ಖಾನ್(16 ರನ್), ರಿಂಕು ಸಿಂಗ್(6 ರನ್) ಹಾಗೂ ನಿತಿಶ್ ಕುಮಾರ್(2 ರನ್)ಅವರನ್ನು ಅಲ್ಪ ಮೊತ್ತಕ್ಕೆ ಔಟ್ ಮಾಡಿ ಇಂಡಿಯಾ ಬಿ ತಂಡ 194 ರನ್‌ಗೆ 5 ವಿಕೆಟ್ ಕಳೆದುಕೊಳ್ಳಲು ಕಾರಣರಾದರು.

ವಾಶಿಂಗ್ಟನ್ ಸುಂದರ್ ಜೊತೆ 43 ರನ್ ಹಾಗೂ ಸಾಯಿ ಕಿಶೋರ್ ಜೊತೆ 46 ರನ್ ಸೇರಿಸಿದ ಈಶ್ವರನ್ ಇಂಡಿಯಾ ಬಿ ತಂಡದ ಇನಿಂಗ್ಸ್ ಆಧರಿಸಲು ಯತ್ನಿಸಿದರು. ದಿನದಾಟದಂತ್ಯಕ್ಕೆ ರಾಹುಲ್ ಚಹಾರ್(ಔಟಾಗದೆ 18)ಈಶ್ವರನ್ ಜೊತೆ ಕ್ರೀಸ್‌ನಲ್ಲಿದ್ದಾರೆ.

ಇಂಡಿಯಾ ಸಿ ನಾಯಕ ಋತುರಾಜ್ ಗಾಯಕ್ವಾಡ್ ಕೊನೆಯ ದಿನವಾದ ರವಿವಾರ ಫಾಲೋ ಆನ್ ವಿಧಿಸುವ ಸಾಧ್ಯತೆ ಇಲ್ಲ. ಇಂಡಿಯಾ ಸಿ ತಂಡ ಈಗಾಗಲೇ ಮೊದಲ ಇನಿಂಗ್ಸ್‌ನಲ್ಲಿ ಗಮನಾರ್ಹ ಮುನ್ನಡೆಯಲ್ಲಿದೆ. ಮುನ್ನಡೆಯು ಮೂರಂಕವನ್ನು ಖಚಿತಪಡಿಸಿದೆ. ಒಂದೊಮ್ಮೆ ಗಾಯಕ್ವಾಡ್ ಅವರು ಫಾಲೋ ಆನ್ ಹೇರಿ ಜಯ ಸಾಧಿಸಿದರೆ ಇಂಡಿಯಾ ಸಿ ತಂಡ 6 ಅಂಕ ಗಳಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News