1932ರ ನಂತರ ಇದೇ ಮೊದಲು! ; ಐತಿಹಾಸಿಕ ಮೈಲಿಗಲ್ಲು ತಲುಪಿದ ಭಾರತ

Update: 2024-09-22 15:03 GMT

PC : PTI 

ಚೆನ್ನೈ: ನಿರೀಕ್ಷೆಯಂತೆಯೇ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ 280 ರನ್ ಅಂತರದಿಂದ ಭರ್ಜರಿಯಾಗಿ ಮಣಿಸಿರುವ ಭಾರತದ ಪುರುಷರ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ಮೈಲಿಗಲ್ಲು ತಲುಪಿದೆ.

ಈ ಗೆಲುವಿನ ಮೂಲಕ ಭಾರತ ತನ್ನ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೋಲುಗಳಿಗಿಂತ ಗೆಲುವುಗಳನ್ನು ಹೆಚ್ಚು ಸಂಪಾದಿಸಿದಂತಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 581 ಪಂದ್ಯಗಳನ್ನು ಆಡಿರುವ ಭಾರತ ಈಗ 179ನೇ ಗೆಲುವಿನೊಂದಿಗೆ ಈ ಮಹತ್ವದ ಮೈಲಿಗಲ್ಲು ತಲುಪಿದ್ದು, ಟೆಸ್ಟ್ ಪಂದ್ಯಗಳಲ್ಲಿ ಈ ತನಕ 178 ಪಂದ್ಯಗಳಲ್ಲಿ ಸೋಲುಂಡಿದೆ.

ಭಾರತವು 1932ರಲ್ಲಿ ಸಿ.ಕೆ. ನಾಯ್ಡು ನಾಯಕತ್ವದಲ್ಲಿ ಮೊತ್ತ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲಿ 152 ರನ್‌ನಿಂದ ಸೋತಿತ್ತು. ಮೊದಲ ಟೆಸ್ಟ್ ಪಂದ್ಯದ ನಂತರ ಭಾರತವು ಗೆಲುವಿಗಿಂತ ಸೋಲನ್ನೇ ಹೆಚ್ಚು ಕಂಡಿದೆ.

179ನೇ ಗೆಲುವನ್ನು ಪಡೆದಿರುವ ಭಾರತವು ವಿಶ್ವದ ಕೆಲವೇ ಪ್ರಮುಖ ತಂಡಗಳೊಂದಿಗೆ ಸ್ಥಾನ ಪಡೆದಿದೆ.

147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 7 ತಂಡಗಳು ಒಂದು ಹಂತದಲ್ಲಿ ಸೋಲಿಗಿಂತ ಗೆಲುವನ್ನೇ ಹೆಚ್ಚು ಪಡೆದಿವೆೆ. ಪ್ರಸ್ತುತ ಕೇವಲ ಐದು ತಂಡಗಳು ಈ ದಾಖಲೆ ಹೊಂದಿವೆ.

ಭಾರತವಲ್ಲದೆ, ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳು ಈ ಸಾಧನೆ ಮಾಡಿವೆ. ಆಸ್ಟ್ರೇಲಿಯವು 414 ಪಂದ್ಯಗಳಲ್ಲಿ ಜಯ ಹಾಗೂ 232 ಪಂದ್ಯಗಳಲ್ಲಿ ಸೋಲುಂಡಿದೆ. ಆನಂತರ ಇಂಗ್ಲೆಂಡ್ ತಂಡವು ದಾಖಲೆಯ 397 ಗೆಲುವು ಹಾಗೂ 325ರಲ್ಲಿ ಸೋತಿದೆ. ದಕ್ಷಿಣ ಆಫ್ರಿಕಾವು 179 ರಲ್ಲಿ ಜಯ ಹಾಗೂ 161ರಲ್ಲಿ ಸೋಲುಂಡಿದೆ. ಪಾಕಿಸ್ತಾನ ತಂಡವು 148 ಪಂದ್ಯಗಳಲ್ಲಿ ಜಯ ಹಾಗೂ 144ರಲ್ಲಿ ಸೋತಿದೆ.

ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಗಿಂತ ಗೆಲುವು ಹೆಚ್ಚು ಸಂಪಾದಿಸಲು ದೀರ್ಘ ಸಮಯ ತೆಗೆದುಕೊಂಡಿದೆ. ಭಾರತವು ಈ ವಿಶಿಷ್ಟ ದಾಖಲೆ ನಿರ್ಮಿಸಲು 580 ಪಂದ್ಯಗಳನ್ನು ಆಡಿದೆ. ಕನಿಷ್ಠ ಒಂದು ಬಾರಿ ಈ ಸಾಧನೆ ಮಾಡಿರುವ 7 ತಂಡಗಳ ಪೈಕಿ ಭಾರತವು ನಿಧಾನವಾಗಿ ಈ ಸಾಧನೆ ಮಾಡಿದೆ. ಭಾರತಕ್ಕೆ ವ್ಯತಿರಿಕ್ತವಾಗಿ ಆಸ್ಟ್ರೇಲಿಯವು ಅತ್ಯುತ್ತಮ ದಾಖಲೆ ನಿರ್ಮಿಸಿದ್ದು 1877ರಲ್ಲಿ ಇಂಗ್ಲೆಂಡ್ ವಿರುದ್ಧ ಮೊತ್ತ ಮೊದಲ ಗೆಲುವು ದಾಖಲಿಸಿದ ನಂತರ ವೇಗವಾಗಿ ಈ ಮೈಲಿಗಲ್ಲು ತಲುಪಿದೆ.

ಒಂದು ಹಂತದಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡು ತಂಡಗಳಾದ ಅಫ್ಘಾನಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ಸೋಲಿಗಿಂತ ಹೆಚ್ಚು ಗೆಲುವನ್ನು ಪಡೆದಿದ್ದವು.

ಐದು ಟೆಸ್ಟ್ ಆಡುವ ದೇಶಗಳು ಸೋಲಿಗಿಂತ ಹೆಚ್ಚು ಗೆಲುವನ್ನು ಇನ್ನಷ್ಟೇ ದಾಖಲಿಸಬೇಕಾಗಿದೆ. ಆ ದೇಶಗಳೆಂದರೆ: ನ್ಯೂಝಿಲ್ಯಾಂಡ್, ಶ್ರೀಲಂಕಾ, ಝಿಂಬಾಬ್ವೆ, ಬಾಂಗ್ಲಾದೇಶ ಹಾಗೂ ಐರ್‌ಲ್ಯಾಂಡ್.

ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು ಪಡೆದಿರುವ ತಂಡಗಳು:

ಆಸ್ಟ್ರೇಲಿಯ: ಗೆಲುವು 414; ಸೋಲು 232

ಇಂಗ್ಲೆಂಡ್: ಗೆಲುವು 397; ಸೋಲು 325

ದಕ್ಷಿಣ ಆಫ್ರಿಕಾ: ಗೆಲುವು 179; ಸೋಲು 161

ಭಾರತ: ಗೆಲುವು 179; ಸೋಲು 178

ಪಾಕಿಸ್ತಾನ: ಗೆಲುವು 148; ಸೋಲು 144

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ

ಪಂದ್ಯಗಳು: 580

ಗೆಲುವು: 179

ಸೋಲು: 178

ಡ್ರಾ: 222

ಟೈ: 1

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News