ಕ್ಲೀನ್‌ ಸ್ವೀಪ್‌ನತ್ತ ಭಾರತದ ಚಿತ್ತ | ನಾಳೆ ಭಾರತ-ಬಾಂಗ್ಲಾದೇಶ ಕೊನೆಯ ಟೆಸ್ಟ್

Update: 2024-09-26 15:50 GMT

PC : PTI 

ಕಾನ್ಪುರ: ಪ್ರವಾಸಿ ಬಾಂಗ್ಲಾದೇಶ ಮತ್ತು ಆತಿಥೇಯ ಭಾರತ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಶುಕ್ರವಾರ ಉತ್ತರಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಮ್‌ನಲ್ಲಿ ಆರಂಭಗೊಳ್ಳಲಿದೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯವನ್ನು 280 ರನ್‌ಗಳ ಬೃಹತ್ ಅಂತರದಿಂದ ಗೆದ್ದ ಬಳಿಕ, ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಲು ಮುಂದಾಗಿದೆ.

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಭಾರತವು ಅಗ್ರ ಕ್ರಮಾಂಕದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಬಾಂಗ್ಲಾದೇಶದ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ಭಾರತವು ಸರ್ವಸನ್ನದ್ಧವಾಗಿದೆ.

2022ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಸಣ್ಣ ಅಂತರದಿಂದ ಸೋತ ಬಳಿಕ, ಅಂದಿನ ಬಾಂಗ್ಲಾದೇಶ ತಂಡದ ನಾಯಕ ಶಾಕಿಬ್ ಅಲ್ ಹಸನ್ ಹೀಗೆ ಹೇಳಿದ್ದರು: ‘‘ನಾವು ಭಾರತದ ವಿರುದ್ಧ ಆಡುವಾಗ ಯಾವಾಗಲೂ ಇದೇ ಕತೆ. ನಾವು ಬಹುತೇಕ ಗೆಲುವಿನ ಸಮೀಪದಲ್ಲಿದ್ದೇವೆ, ಆದರೆ ಗೆಲುವಿನ ಗೆರೆಯನ್ನು ದಾಟುವುದಿಲ್ಲ’’.

ಜಗಮೋಹನ್ ದಾಲ್ಮಿಯ 2000ದಲ್ಲಿ ಐಸಿಸಿ ಅಧ್ಯಕ್ಷರಾಗಿದ್ದಾಗ ಬಾಂಗ್ಲಾದೇಶಕ್ಕೆ ಟೆಸ್ಟ್ ಸ್ಥಾನಮಾನವನ್ನು ನೀಡಲಾಗಿತ್ತು. ಬಾಂಗ್ಲಾದೇಶವು 2000ದಲ್ಲಿ ಭಾರತದ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಆಡಿದ ಬಳಿಕ, ಅದು ಭಾರತದ ವಿರುದ್ಧ 14 ಟೆಸ್ಟ್ ಪಂದ್ಯಗಳನ್ನು ಆಡಿದೆ ಮತ್ತು 13ರಲ್ಲಿ ಸೋಲನುಭವಿಸಿದೆ.

ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಸರಣಿ ವಿಜಯ ಗಳಿಸಿದ ಬಳಿಕ, ಜಗತ್ತಿನ ಯಾವುದೇ ಶ್ರೇಷ್ಠ ತಂಡವನ್ನು ಸೋಲಿಸಲು ಬೇಕಾದ ಕೌಶಲ್ಯ ತನ್ನಲ್ಲಿದೆ ಎಂದು ಬಾಂಗ್ಲಾದೇಶ ತೋರಿಸಿತ್ತು. ತಂಡದಲ್ಲಿ ಯಾವುದೇ ಪಿಚ್‌ನಲ್ಲಿ ವಿಕೆಟ್‌ಗಳನ್ನು ತೆಗೆಯಬಲ್ಲ ವೇಗದ ಬೌಲರ್‌ಗಳಿದ್ದಾರೆ. ಹಸನ್ ಮಹ್ಮೂದ್, ತಸ್ಕಿನ್ ಅಹ್ಮದ್ ಮತ್ತು ನಹೀದ್ ರಾಣಾ. ಸ್ಪಿನ್ ವಿಭಾಗದಲ್ಲಿ, ಶಾಕಿಬ್ ಅಲ್ ಹಸನ್ ಮತ್ತು ಮೆಹಿದಿ ಹಸನ್ ಮೀರಝ್ ಮುಂತಾದ ಶ್ರೇಷ್ಠ ಸ್ಪಿನರ್‌ಗಳಿದ್ದಾರೆ.

ಇಷ್ಟೆಲ್ಲಾ ಇದ್ದರೂ, ಭಾರತದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶವು ನಾಲ್ಕೇ ದಿನಗಳಲ್ಲಿ ಸೋಲೊಪ್ಪಿಕೊಂಡಿತು.

ಚೆನ್ನೈಯಲ್ಲಿ ಬಾಂಗ್ಲಾದೇಶವು ಮೊದಲ ಇನಿಂಗ್ಸ್‌ನಲ್ಲಿ ಭಾರತವನ್ನು ಮಣಿಸಿತು. ಭಾರತವು ಒಂದು ಹಂತದಲ್ಲಿ 144 ರನ್‌ಗಳನ್ನು ಗಳಿಸುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಬಳಿಕ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ನಡುವಿನ 199 ರನ್‌ಗಳ ಏಳನೇ ವಿಕೆಟ್ ಭಾಗೀದಾರಿಕೆಯು ಭಾರತದ ಸ್ಥಿತಿಯನ್ನು ಭದ್ರಗೊಳಿಸಿತು. ಅಂತಿಮವಾಗಿ ಭಾರತವು 280 ರನ್‌ಗಳಿಂದ ಪಂದ್ಯವನ್ನು ಗೆದ್ದಿತು.

►ಬಾಂಗ್ಲಾದೇಶದ ಬ್ಯಾಟಿಂಗ್ ವೈಫಲ್ಯ

ಮೊದಲ ಟೆಸ್ಟ್‌ನಲ್ಲಿ, ನಾಯಕ ನಜ್ಮುಲ್ ಶಂಟೊರನ್ನು ಹೊರತುಪಡಿಸಿ ಬಾಂಗ್ಲಾದೇಶದ ಇತರ ಯಾವುದೇ ಬ್ಯಾಟರ್‌ಗಳು ಅರ್ಧ ಶತಕ ಗಳಿಸಿಲ್ಲ. ಈ ಬಗ್ಗೆ ಪಂದ್ಯ ಮುಕ್ತಾಯದ ಬಳಿಕ, ಚೆನ್ನೈಯಲ್ಲಿ ಬಾಂಗ್ಲಾದೇಶ ತಂಡವು ಸಭೆಯೊಂದನ್ನೂ ನಡೆಸಿತ್ತು.

ಬ್ಯಾಟಿಂಗ್ ಸಮಸ್ಯೆಯನ್ನು ಬಾಂಗ್ಲಾದೇಶದ ಪ್ರಧಾನ ಕೊಚ್ ಚಂಡಿಕ ಹತುರುಸಿಂಘೆ ಒಪ್ಪಿಕೊಂಡಿದ್ದಾರೆ.

ಚೆನ್ನೈಯಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಬ್ಯಾಟರ್‌ಗಳು ಭಾರತಕ್ಕೆ ಸವಾಲೊಡ್ಡಿದ್ದರು. ‘‘ಚೆನ್ನೈನಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಬಂದಿತ್ತು. ನಾವು 350-400 ರನ್ ಗಳಿಸಿದರೆ ಅದು ಬೃಹತ್ ಸುಧಾರಣೆ ಎಂದು ನನಗನಿಸುತ್ತದೆ. ಮೊದಲ ಇನಿಂಗ್ಸ್‌ನಲ್ಲಿ 350-400 ರನ್ ಗಳಿಸಿದರೆ ತುಂಬಾ ಆತ್ಮವಿಶ್ವಾಸ ಲಭಿಸುತ್ತದೆ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ಶಾಂತಿ ಇರುತ್ತದೆ’’ ಎಂದು ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಹೇಳಿದ್ದಾರೆ.

►ಗ್ರೀನ್ ಪಾರ್ಕ್ ಪಿಚ್

ಲಕ್ನೋದ ಗ್ರೀನ್ ಪಾರ್ಕ್ ಸ್ಟೇಡಿಯಮ್‌ನ ಪಿಚ್ ನಿಧಾನ ಗತಿಯದ್ದಾಗಿದೆ. ಅದು ಸ್ಪಿನ್ನರ್‌ಗಳಿಗೆ ನೆರವು ನೀಡುತ್ತದೆ. ಭಾರತೀಯ ಸ್ಪಿನ್ನರ್‌ಗಳು ಇದರ ಪ್ರಯೋಜನವನ್ನು ಪಡೆಯಲು ಸಿದ್ಧರಾಗಿದ್ದಾರೆ. ಅದೇ ವೇಳೆ, ಪರಿಸ್ಥಿತಿಯ ಪ್ರಯೋಜನ ಪಡೆಯಲು ಬಾಂಗ್ಲಾದೇಶವು ಸ್ಪಿನ್ನರ್ ಶಾಕಿಬ್‌ರನ್ನು ಅವಲಂಬಿಸಿದೆ.

ತಂಡಗಳು

ಭಾರತ: ರೋಹಿತ್ ಶರ್ಮ (ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಸರ್ಫರಾಝ್ ಖಾನ್, ಯಶಸ್ವಿ ಜೈಸ್ವಾಲ್, ಶುಬ್‌ಮನ್ ಗಿಲ್, ರಿಶಭ್ ಪಂತ್ (ವಿಕೆಟ್‌ ಕೀಪರ್), ಧ್ರುವ್ ಜೂರೆಲ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಆಕಾಶ್ ದೀಪ್, ಯಶ್ ದಯಾಳ್.

ಬಾಂಗ್ಲಾದೇಶ: ನಜ್ಮುಲ್ ಶಾಂಟೊ (ನಾಯಕ), ಶಾಕಿಬ್ ಅಲ್ ಹಸನ್, ಮಹ್ಮೂದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮನ್ ಇಸ್ಲಾಮ್, ಮೆಹಿದಿ ಹಸನ್ ಮೀರಝ್, ಮೋಮಿನುಲ್ ಹಕ್, ಮುಶ್ಫೀಕುರ‌್ರಹೀಮ್ (ವಿಕೆಟ್‌ ಕೀಪರ್), ಲಿಟನ್ ಕುಮಾರ್ ದಾಸ್ (ವಿಕೆಟ್‌ ಕೀಪರ್), ತೈಜುಲ್ ಇಸ್ಲಾಮ್, ನಯೀಮ್ ಹಸನ್, ಹಸನ್ ಮಹ್ಮೂದ್, ತಸ್ಕಿನ್ ಅಹ್ಮದ್, ನಹೀದ್ ರಾಣಾ, ಸೈಯದ್ ಖಾಲಿದ್ ಅಹ್ಮದ್, ಜಾಕಿರ್ ಅಲಿ ಅನಿಕ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News