ಇಂಡಿಯಾ ಸಿ - ಇಂಡಿಯಾ ಡಿ ನಡುವಿನ ಪಂದ್ಯ ಡ್ರಾ

Update: 2024-09-15 16:08 GMT

PC : X/@BCCIDomestic

ಅನಂತಪುರ : ಅನಂತಪುರದ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್ ಬಿ ಯಲ್ಲಿ ನಡೆದ ಇಂಡಿಯಾ ಸಿ ಮತ್ತು ಇಂಡಿಯಾ ಬಿ ತಂಡಗಳ ನಡುವಿನ ಇನ್ನೊಂದು ದುಲೀಪ್ ಟ್ರೋಫಿ ಪಂದ್ಯವು ರವಿವಾರ ಡ್ರಾದಲ್ಲಿ ಮುಕ್ತಾಯಗೊಂಡಿದೆ.

ಮೊದಲ ಇನಿಂಗ್ಸ್ ಆಧಾರದಲ್ಲಿ ಇಂಡಿಯಾ ಸಿ ತಂಡವು ಮುನ್ನಡೆ ಪಡೆಯಿತು. ಇಂಡಿಯಾ ಸಿ ತಂಡದ ವೇಗಿ ಅನ್ಶುಲ್ ಕಾಂಬೋಜ್ ಇಂಡಿಯಾ ಬಿ ತಂಡದ ಮೊದಲ ಇನಿಂಗ್ಸ್‌ನಲ್ಲಿ ಎಂಟು ವಿಕೆಟ್‌ಗಳನ್ನು ಉರುಳಿಸಿದರು.

ನಾಲ್ಕನೇ ಮತ್ತು ಕೊನೆಯ ದಿನವಾದ ರವಿವಾರ ಇಂಡಿಯಾ ಬಿ ತಂಡವು ತನ್ನ ಮೊದಲ ಇನಿಂಗ್ಸನ್ನು 7 ವಿಕೆಟ್‌ಗಳ ನಷ್ಟಕ್ಕೆ 309 ರನ್ ಇದ್ದಲ್ಲಿಂದ ಮುಂದುವರಿಸಿತು. ಅಂತಿಮವಾಗಿ ಅದು 108 ಓವರ್‌ಗಳಲ್ಲಿ 332 ರನ್‌ಗಳಿಗೆ ಆಲೌಟಾಯಿತು.

ಆ ತಂಡದ ಬಾಲಂಗೋಚಿಗಳನ್ನು ಕಾಂಬೋಜ್ ಬೇಗನೇ ವಾಪಸ್ ಕಳುಹಿಸಿದರು. ಮುನ್ನಾ ದಿನ ಪಡೆದಿದ್ದ 5 ವಿಕೆಟ್‌ಗಳಿಗೆ ಅವರು ರವಿವಾರ ಇನ್ನೂ ಮೂರು ವಿಕೆಟ್‌ಗಳನ್ನು ಸೇರಿಸಿದರು.

ಇಂಡಿಯಾ ಬಿ ತಂಡದ ನಾಯಕ ಅಭಿಮನ್ಯು ಈಶ್ವರನ್ 286 ಎಸೆತಗಳಲ್ಲಿ 157 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು.

ಇಂಡಿಯಾ ಸಿ ತಂಡವು ಮೊದಲ ಇನಿಂಗ್ಸ್‌ನಲ್ಲಿ 525 ರನ್‌ಗಳನ್ನು ಪೇರಿಸಿತ್ತು. ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 128 ರನ್‌ಗಳನ್ನು ಗಳಿಸಿತು. ಆ ವೇಳೆಗೆ ಪಂದ್ಯ ಡ್ರಾಗೊಂಡಿತು ಮತ್ತು ಆಟಗಾರರು ಪರಸ್ಪರ ಕೈಕುಲುಕಿದರು.

ಮೊದಲ ಇನಿಂಗ್ಸ್ ಮುನ್ನಡೆಗಾಗಿ ಇಂಡಿಯಾ ಸಿ ತಂಡವು ಮೂರು ಅಂಕಗಳನ್ನು ಗಳಿಸಿತು. ಇದರೊಂದಿಗೆ ಅದು ಒಂಭತ್ತು ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಪಡೆಯಿತು. ಅದೇ ವೇಳೆ, ಡ್ರಾ ಸಾಧಿಸಿರುವುದಕ್ಕಾಗಿ ಇಂಡಿಯಾ ಬಿ ತಂಡಕ್ಕೆ ಒಂದು ಅಂಕ ಲಭಿಸಿತು.

ಇಂಡಿಯಾ ಸಿ ತಂಡದ ದ್ವಿತೀಯ ಇನಿಂಗ್ಸ್‌ನಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ (62) ಪಂದ್ಯದ ಎರಡನೇ ಅರ್ಧ ಶತಕವನ್ನು ಗಳಿಸಿದರು. ರಜತ್ ಪಾಟೀದಾರ್ 42 ರನ್‌ಗಳಿಗೆ ನಿರ್ಗಮಿಸಿದರು.

ಇನಿಂಗ್ಸ್ ಒಂದರಲ್ಲಿ ಎಂಟು ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಓರ್ವ ವೇಗಿ ಪಡೆದಿರುವುದು ದುಲೀಪ್ ಟ್ರೋಫಿಯ ಇತಿಹಾಸದಲ್ಲಿ ಇದು ಮೂರನೇ ಬಾರಿಯಾಗಿದೆ. ಎಂಟು ವಿಕೆಟ್‌ಗಳ ಸಾಧನೆಗಾಗಿ ಕಾಂಬೋಜ್‌ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. ತನ್ನ 15ನೇ ಪ್ರಥಮ ದರ್ಜೆ ಪಂದ್ಯವನ್ನು ಆಡಿರುವ ಹರ್ಯಾಣದ ಕ್ರಿಕೆಟಿಗ ಕಾಂಬೋಜ್ ಮೊದಲ ಬಾರಿಗೆ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಅವರು ಕಳೆದ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಡಿಯಾ ಸಿ ತಂಡದ ಇಶಾನ್ ಕಿಶನ್ 126 ಎಸೆತಗಳಲ್ಲಿ 111 ರನ್‌ಗಳನ್ನು ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News