ಭಾರತದ ಇಂಗ್ಲೆಂಡ್ ಪ್ರವಾಸ-2025 | ಐದು ಪಂದ್ಯಗಳ ಟೆಸ್ಟ್ ಸರಣಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟ

Update: 2024-08-22 15:12 GMT

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡವು 2025ರ ಜೂನ್ 20ರಿಂದ ಆಗಸ್ಟ್ 4ರ ತನಕ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗುರುವಾರ ತಿಳಿಸಿದೆ.

ಬಿಸಿಸಿಐ ಹಾಗೂ ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿಯು(ಇಸಿಬಿ) 2025ರ ಜೂನ್-ಆಗಸ್ಟ್ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿವೆ.

ಲೀಡ್ಸ್ ನಲ್ಲಿರುವ ಹೆಡ್ಡಿಂಗ್ಲೆ ಜೂನ್ 20ರಿಂದ 24ರ ತನಕ ಸರಣಿಯ ಮೊದಲ ಪಂದ್ಯದ ಆತಿಥ್ಯವಹಿಸಲಿದೆ. ಆ ನಂತರ ಎಜ್ಬಾಸ್ಟನ್(ಜುಲೈ 2-6), ಲಾರ್ಡ್ಸ್(ಜುಲೈ 10-14), ಓಲ್ಡ್ ಟ್ರಾಫೋರ್ಡ್(ಜುಲೈ 23-27) ಹಾಗೂ ದಿ ಓವಲ್ (ಜುಲೈ 31-ಆಗಸ್ಟ್ 4) ಉಳಿದ 4 ಟೆಸ್ಟ್ ಪಂದ್ಯಗಳನ್ನು ಆಯೋಜಿಸಲಿವೆ.

ಬಿಸಿಸಿಐ ಎಕ್ಸ್ ನಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. 

ಭಾರತವು 2021-22ರ ನಂತರ ಮೊದಲ ಬಾರಿ ಇಂಗ್ಲೆಂಡ್ಗೆ ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಆಡಲು ತೆರಳಲಿದೆ. 2021-22ರಲ್ಲಿ ಭಾರತವು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸರಣಿಯಲ್ಲಿ 2-1ರಿಂದ ಮುನ್ನಡೆಯಲ್ಲಿತ್ತು. ಆದರೆ ಕೋವಿಡ್-19ನಿಂದಾಗಿ ಜುಲೈ 2022ರಂದು ಕೊನೆಯ ಪಂದ್ಯವನ್ನು ಮರು ನಿಗದಿಪಡಿಸಲಾಗಿತ್ತು. ಆ ಪಂದ್ಯವನ್ನು ಭಾರತ ತಂಡವು ಜಸ್ಪ್ರಿತ್ ಬುಮ್ರಾ ನಾಯಕತ್ವದಲ್ಲಿ ಆಡಿತ್ತು. 5ನೇ ಪಂದ್ಯವನ್ನು 7 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದ್ದ ಇಂಗ್ಲೆಂಡ್ ತಂಡವು ಭಾರತಕ್ಕೆ ತಿರುಗೇಟು ನೀಡಿ ಸರಣಿಯನ್ನು 2-2ರಿಂದ ಡ್ರಾಗೊಳಿಸಿತ್ತು. ಟೆಸ್ಟ್ ಸರಣಿಯನ್ನು ಗೆಲ್ಲುವ ಉತ್ತಮ ಅವಕಾಶವನ್ನು ಭಾರತವು ಕಳೆದುಕೊಂಡಿತ್ತು.

ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ 2007ರಲ್ಲಿ ಆಂಗ್ಲರ ಪಡೆಯನ್ನು 1-0 ಅಂತರದಿಂದ ಸೋಲಿಸಿದ ನಂತರ ಭಾರತವು ಇಂಗ್ಲೆಂಡ್ ನೆಲದಲ್ಲಿ ಸರಣಿ ಜಯಿಸಿಲ್ಲ. ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನ 2025-27ರ ವೃತ್ತದಲ್ಲಿ ಬರುವ ಇದು ಬಹು ನಿರೀಕ್ಷಿತ ದ್ವಿಪಕ್ಷೀಯ ಸರಣಿಯಾಗಿದೆ.

ಭಾರತ ನೆಲದಲ್ಲಿ ಈ ವರ್ಷದ ಜನವರಿ-ಮಾರ್ಚ್ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ 1-4 ಅಂತರದಿಂದ ಸೋತಿತ್ತು. ನಾಯಕ ರೋಹಿತ್ ಶರ್ಮಾ, ಓಪನರ್ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ಗಳಾದ ರವೀಂದ್ರ ಜಡೇಜ ಹಾಗೂ ಆರ್.ಅಶ್ವಿನ್ ಅಮೋಘ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ನ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ಭಾರತವು ತವರು ನೆಲದ ಲಾಭ ಪಡೆಯುವುದನ್ನು ತಡೆಯಲು ಸಾಧ್ಯವಾಗಿಲ್ಲ.

ಇಂಗ್ಲೆಂಡ್ ಸ್ವಿಂಗ್ ಬೌಲರ್ಗಳು ಸ್ಪಷ್ಟ ಮೇಲುಗೈ ಸಾಧಿಸಬಲ್ಲ ಕ್ರೀಡಾಂಗಣದಲ್ಲಿಯೇ ಇಸಿಬಿ ಟೆಸ್ಟ್ ಪಂದ್ಯಗಳನ್ನು ಅಯೋಜಿಸಿದೆ. ಆಟಗಾರರಿಗೆ ಅನುಕೂಲವಾಗಲು ಮೊದಲ ಹಾಗೂ ಎರಡನೇ ಟೆಸ್ಟ್ಪಂದ್ಯದ ನಡುವೆ ಒಂದು ವಾರ ವಿರಾಮ, ಮೂರನೇ ಹಾಗೂ 4ನೇ ಟೆಸ್ಟ್ ಪಂದ್ಯದ ಮಧ್ಯೆ 8 ದಿನಗಳ ವಿರಾಮವನ್ನು ನೀಡಲಾಗಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಸಂಪೂರ್ಣ ವೇಳಾಪಟ್ಟಿ

ಮೊದಲ ಟೆಸ್ಟ್: ಜೂನ್ 20-24, 2025-ಹೆಡ್ಡಿಂಗ್ಲೆ, ಲೀಡ್ಸ್

ಎರಡನೇ ಟೆಸ್ಟ್: ಜುಲೈ 2-6,2025-ಎಜ್ಬಾಸ್ಟನ್,ಬರ್ಮಿಂಗ್ಹ್ಯಾಮ್

ಮೂರನೇ ಟೆಸ್ಟ್: ಜುಲೈ 10-14, 2025-ಲಾರ್ಡ್ಸ್, ಲಂಡನ್

ನಾಲ್ಕನೇ ಟೆಸ್ಟ್: ಜುಲೈ 23-27,2025-ಓಲ್ಡ್ ಟ್ರಾಫೋರ್ಡ್, ಮ್ಯಾಂಚೆಸ್ಟರ್

ಐದನೇ ಟೆಸ್ಟ್: ಜುಲೈ 31-ಆಗಸ್ಟ್ 4, 2025-ದಿ ಓವಲ್, ಲಂಡನ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News