2025ರ ಪುರುಷರ ಏಶ್ಯಕಪ್ ಟೂರ್ನಿಗೆ ಭಾರತ ಆತಿಥ್ಯ?

Update: 2024-07-29 15:16 GMT

PC : PTI 

ಮುಂಬೈ : ಭಾರತವು 2025ರಲ್ಲಿ ಪುರುಷರ ಏಶ್ಯಕಪ್ ಟೂರ್ನಿಯ ಆತಿಥ್ಯವಹಿಸುವ ಸಾಧ್ಯತೆಯಿದ್ದು, ಈ ಟೂರ್ನಿಯನ್ನು ಟಿ-20 ಮಾದರಿಯಲ್ಲಿ ಆಡಲಾಗುತ್ತದೆ ಎಂದು ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಶನಿವಾರ ಬಿಡುಗಡೆ ಮಾಡಿರುವ ದಾಖಲೆಯೊಂದರಲ್ಲಿ ತಿಳಿಸಿದೆ.

2024ರಿಂದ 2027ರ ತನಕ ಎಸಿಸಿ ಪ್ರಾಯೋಜಕತ್ವ ಹಕ್ಕುಗಳಿಗಾಗಿಆಸಕ್ತರು ತಮ್ಮ ಐಇಒಐ ಅನ್ನು ಸಲ್ಲಿಸಲು ಈ ದಾಖಲೆಯಲ್ಲಿ ಆಹ್ವಾನಿಸಲಾಗಿದೆ.

2023ರ ಪುರುಷರ ಏಶ್ಯಕಪ್‌ಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಆತಿಥ್ಯವಹಿಸಿದ್ದವು. ಈ ಟೂರ್ನಿಯನ್ನು 50 ಓವರ್ ಮಾದರಿಯಲ್ಲಿ ಆಡಲಾಗಿತ್ತು.

2027ರ ಆವೃತ್ತಿಯ ಪುರುಷರ ಏಶ್ಯಕಪ್ ಟೂರ್ನಿಯಲ್ಲಿ ಏಕದಿನ ಮಾದರಿಯಲ್ಲಿ ಆಡಲಾಗುತ್ತದೆ ಹಾಗೂ ಟೂರ್ನಿಗೆ ಬಾಂಗ್ಲಾದೇಶ ಆತಿಥ್ಯವಹಿಸಲಿದೆ. ಈ ಎರಡು ಪ್ರಕಾರದ ಪಂದ್ಯಾವಳಿಗಳಲ್ಲಿ ಆರು ತಂಡಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ,ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಭಾಗವಹಿಸಲಿವೆ. ಆರನೇ ತಂಡವನ್ನು ಅರ್ಹತಾ ಸ್ಪರ್ಧೆಯ ಮೂಲಕ ನಿರ್ಧರಿಸಲಾಗುತ್ತದೆ. ಪ್ರತಿ ಆವೃತ್ತಿಯ ಟೂರ್ನಿಯು 13 ಪಂದ್ಯಗಳನ್ನು ಒಳಗೊಂಡಿದೆ.

ಏಶ್ಯಕಪ್ ದಿನಾಂಕ ಇನ್ನಷ್ಟೇ ಅಂತಿಮಗೊಳ್ಳಬೇಕಾಗಿದೆ. ಸೆಪ್ಟಂಬರ್‌ನಲ್ಲಿ ಇದು ಘೋಷಣೆಯಾಗುವ ಸಾಧ್ಯತೆಯಿದೆ. ಐಸಿಸಿಯ ಭವಿಷ್ಯದ ಕಾರ್ಯಕ್ರಮ ಪಟ್ಟಿಯ ಪ್ರಕಾರ ಭಾರತವು ಮುಂದಿನ ವರ್ಷ ಬಿಡುವಿಲ್ಲದ ಕ್ರಿಕೆಟ್ ಆಡಲಿದೆ. ಜನವರಿ-ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ ಸರಣಿ ಆಡಲಿರುವ ಭಾರತವು ಫೆಬ್ರವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದೆ. ಐಪಿಎಲ್ ಮುಗಿದ ನಂತರ ಜೂನ್‌ನಿಂದ ಆಗಸ್ಟ್ ತನಕ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆ ನಂತರ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿಯನ್ನಾಡಲು ಬಾಂಗ್ಲಾದೇಶಕ್ಕೆ ತೆರಳಲಿದೆ. ಬಾಂಗ್ಲಾದೇಶ ಸರಣಿಯ ನಂತರ ಅಕ್ಟೋಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುವ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲು ಏಶ್ಯಕಪ್ ನಡೆಯುವ ನಿರೀಕ್ಷೆ ಇದೆ. ಸಂಭಾವ್ಯ ಸ್ಥಳಗಳ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮುಂದಿನ ಆವೃತ್ತಿಯ ಮಹಿಳೆಯರ ಏಶ್ಯಕಪ್(15 ಪಂದ್ಯಗಳು)ಅನ್ನು ಟಿ-20 ಮಾದರಿಯಲ್ಲಿ 2026ರಲ್ಲಿ ನಡೆಯಲಿದೆ. 2024ರ ಮಹಿಳೆಯರ ಏಶ್ಯಕಪ್ ಡಾಂಬುಲ್ಲಾದಲ್ಲಿ ರವಿವಾರ ಅಂತ್ಯಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿದ್ದ ಆತಿಥೇಯ ಶ್ರೀಲಂಕಾ ತಂಡ ಚೊಚ್ಚಲ ಪ್ರಶಸ್ತಿ ಜಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News