ಏಕದಿನ ವಿಶ್ವಕಪ್ ಟೂರ್ನಿಗೆ ಭಾರತದ ಕ್ರಿಕೆಟ್ ತಂಡ ಪ್ರಕಟ

ಭಾರತ ಏಕದಿನ ವಿಶ್ವಕಪ್ ಗೆ ಏಳು ಬ್ಯಾಟರ್ಗಳು, ನಾಲ್ವರು ಬೌಲರ್ ಗಳು ಮತ್ತು ನಾಲ್ವರು ಆಲ್ ರೌಂಡರ್ ಗಳನ್ನು ಆಯ್ಕೆ ಮಾಡಿದೆ. ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ಇಬ್ಬರೂ ಏಕದಿನ ವಿಶ್ವಕಪ್ ಗಾಗಿ ಭಾರತದ 15 ಮಂದಿಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Update: 2023-09-05 15:04 GMT

Photo: Twitter

ಹೊಸದಿಲ್ಲಿ: ಮುಂಬರುವ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಆಯ್ಕೆಗಾರರು 15 ಸದಸ್ಯರುಗಳನ್ನು ಒಳಗೊಂಡ ತಂಡವನ್ನು ಮಂಗಳವಾರ ಪ್ರಕಟಿಸಿದ್ದಾರೆ. ನಿರೀಕ್ಷೆಯಂತೆಯೇ ಕೆ.ಎಲ್.ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದು, ಸಂಜು ಸ್ಯಾಮ್ಸನ್‌ಗೆ ಅವಕಾಶ ನಿರಾಕರಿಸಲಾಗಿದೆ.

ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಹಾರ್ದಿಕ್ ಪಾಂಡ್ಯ ಉಪ ನಾಯಕನಾಗಿದ್ದಾರೆ. ರಾಹುಲ್ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪಿಂಗ್ ಹೊಣೆ ಹೊತ್ತಿರುವ ಇಶಾನ್ ಕಿಶನ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತವು 7 ಬ್ಯಾಟರ್‌ಗಳು, ನಾಲ್ವರು ಬೌಲರ್‌ಗಳು ಹಾಗೂ ನಾಲ್ವರು ಆಲ್‌ರೌಂಡರ್‌ಗಳನ್ನು ಆಯ್ಕೆ ಮಾಡಿದೆ.

ಕ್ಯಾಂಡಿಯಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ರೋಹಿತ್ ಶರ್ಮಾ ವಿಶ್ವಕಪ್ ತಂಡವನ್ನು ಪ್ರಕಟಿಸಿದರು. ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ವಿಶ್ವಕಪ್‌ನಲ್ಲಿ ನಮಗೆ ನೆರವಾಗಲಿದೆ. ಮುಂದಿನ ಅವಕಾಶಕ್ಕಾಗಿ ಸಜ್ಜಾಗಿರಿ ಎಂದು ಅವಕಾಶವಂಚಿತರಿಗೆ ಸಲಹೆ ನೀಡಿದರು.

ಗಾಯದ ಸಮಸ್ಯೆಯ ಕಾರಣಕ್ಕೆ ರಾಹುಲ್ ಹಲವು ತಿಂಗಳುಗಳಿಂದ ಸಕ್ರಿಯ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಈಗ ನಡೆಯುತ್ತಿರುವ ಏಶ್ಯಕಪ್‌ಗೆ ರಾಹುಲ್ ಆಯ್ಕೆಯಾಗಿದ್ದಾರೆ. ಆದರೆ ಅವರು ಮೊದಲೆರಡು ಪಂದ್ಯಗಳಲ್ಲಿ ಲಭ್ಯವಿರಲಿಲ್ಲ.

ಇಶಾನ್ ಕಿಶನ್ ಎರಡನೇ ವಿಕೆಟ್‌ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದು, ಪಾಕಿಸ್ತಾನ ವಿರುದ್ಧ 81 ರನ್ ಗಳಿಸಿರುವ ಕಾರಣ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಇನ್ನೋರ್ವ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದಾರೆ. ಸ್ಯಾಮ್ಸನ್ ಮೀಸಲು ಆಟಗಾರನಾಗಿ ಏಶ್ಯಕಪ್ ತಂಡಕ್ಕೆ ಆಯ್ಕೆಯಾಗಿದ್ದರು.

ವೇಗದ ಬೌಲರ್ ಶಾರ್ದೂಲ್ ಠಾಕೂರ್ ಕೂಡ ವಿಶ್ವಕಪ್ ತಂಡದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ತೃಪ್ತಿಕರ ಪ್ರದರ್ಶನ ನೀಡದೇ ಇದ್ದರೂ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಆಡುವ ಅವಕಾಶ ಪಡೆದಿದ್ದಾರೆ.

ಬ್ಯಾಟಿಂಗ್‌ನಲಿ ನಾಯಕ ರೋಹಿತ್‌ ಅಲ್ಲದೆ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರು ಸಹಜ ಆಯ್ಕೆಯಾಗಿದ್ದಾರೆ. ತಿಲಕ್ ವರ್ಮಾ ವಿಶ್ವಕಪ್ ತಂಡಕ್ಕೆ ಪರಿಗಣಿಸಲ್ಪಟ್ಟಿಲ್ಲ.

ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್ ಹಾಗೂ ಮುಹಮ್ಮದ್ ಶಮಿ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಜೊತೆಗೂಡಿ ವೇಗದ ದಾಳಿಯನ್ನು ನಿಭಾಯಿಸಲಿದ್ದಾರೆ. ಏಶ್ಯಕಪ್‌ನಲ್ಲಿ ಭಾರತ ತಂಡದಲ್ಲಿರುವ ಪ್ರಸಿದ್ಧ ಕೃಷ್ಣ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಸ್ಪಿನ್ ವಿಭಾಗವನ್ನು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಮುನ್ನಡೆಸಲಿದ್ದಾರೆ. ಈ ವರ್ಷ ಯಾದವ್ ಉತ್ತಮ ಲಯದಲ್ಲಿದ್ದಾರೆ. ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿಶ್ವಕಪ್ ಆಡುವ ಅವಕಾಶ ವಂಚಿತರಾಗಿದ್ದಾರೆ.

ವಿಶ್ವಕಪ್‌ಗೆ ಭಾರತದ ಕ್ರಿಕೆಟ್ ತಂಡ

ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ(ಉಪ ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ಮುಹಮ್ಮದ್ ಶಮಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News