ಒಲಿಂಪಿಕ್ ಕಂಚಿನ ಪದಕದೊಂದಿಗೆ ತಮ್ಮ ಹಾಕಿ ಪಯಣವನ್ನು ಮುಗಿಸಿದ ಭಾರತದ ಗೋಡೆ ಪಿ.ಆರ್.ಶ್ರಿಜೇಶ್ !

Update: 2024-08-08 15:17 GMT

PC : PTI

ಪ್ಯಾರಿಸ್: ಭಾರತ ಕ್ರಿಕೆಟ್ ತಂಡದ ಪಾಲಿಗೆ ಗೋಡೆಯಂತಿದ್ದವರು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್. ಬೌಲರ್ ಯಾರೇ ಆಗಿದ್ದರೂ, ಸಮರ್ಥವಾಗಿ ಎದುರಿಸುತ್ತಿದ್ದ ಅವರು, ಕ್ರೀಸಿನಲ್ಲಿರುವವರೆಗೂ ಎದುರಾಳಿ ತಂಡಕ್ಕೆ ಗೆಲುವಿನ ಖಾತರಿ ಇರುತ್ತಿರಲಿಲ್ಲ. ಭಾರತ ಹಾಕಿ ತಂಡದಲ್ಲೂ ಕಳೆದ 18 ವರ್ಷಗಳಿಂದ ಇದ್ದ ಅಂತಹ ಓರ್ವ ಗೋಡೆ ಪಿ.ಆರ್.ಶ್ರಿಜೇಶ್. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವು ಕಂಚಿನ ಪದಕಕ್ಕೆ ಮುತ್ತಿಡುವಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರೊಂದಿಗೆ ಶ್ರಿಜೇಶ್ ಅವರ ಮಹತ್ವದ ಕಾಣಿಕೆಯೂ ಇದೆ.

1998ರ ಮೇ 8ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಕಿಳಕ್ಕಂಬಾಲಂ ಗ್ರಾಮದಲ್ಲಿ ಜನಿಸಿದ ಶ್ರಿಜೇಶ್, ರೈತ ದಂಪತಿ ಪಿ.ವಿ.ರವೀಂದ್ರನ್ ಹಾಗೂ ಉಷಾ ಅವರ ಪುತ್ರರು. ಕಿಳಕ್ಕಂಬಾಲಂನ ಸೇಂಟ್ ಆ್ಯಂಟೋನಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು, ಅಲ್ಲಿನ ಸೇಂಟ್ ಜೋಸೆಫ್ಸ್ ಪ್ರೌಢಶಾಲೆಯಲ್ಲಿ ಆರನೆಯ ತರಗತಿವರೆಗೆ ವ್ಯಾಸಂಗ ಮಾಡಿದರು.

ಸಣ್ಣವರಿರುವಾಗಲೇ ಓಟಗಾರನಾಗಿ ತರಬೇತಿ ಪಡೆದಿದ್ದ ಶ್ರಿಜೇಶ್, ನಂತರ ಲಾಂಗ್ ಜಂಪ್ ಹಾಗೂ ವಾಲ್ ಬಾಲ್ ನತ್ತ ಆಕರ್ಷಿತರಾದರು. ತಮಗೆ 12ನೇ ವಯಸ್ಸಾಗಿದ್ದಾಗ ತಿರುವನಂತಪುರಂನ ಜಿ.ವಿ.ರಾಜ ಸ್ಪೋರ್ಟ್ಸ್ ಶಾಲೆಗೆ ಸೇರ್ಪಡೆಯಾದರು. ಅಲ್ಲಿ ಅವರ ತರಬೇತುದಾರರು ಗೋಲ್ ಕೀಪಿಂಗ್ ಕಲಿಯುವಂತೆ ಅವರಿಗೆ ಸಲಹೆ ನೀಡಿದರು. ಶಾಲೆಯ ಹಾಕಿ ತರಬೇತುದಾರ ಜಯಕುಮಾರ್ ಅವರು ಶ್ರಿಜೇಶ್ ಅವರನ್ನು ವೃತ್ತಿಪರ ಗೋಲ್ ಕೀಪಿಂಗ್ ಗೆ ಆಯ್ದುಕೊಂಡರು. ಇದಾದ ನಂತರ, ಅವರು ನೆಹರೂ ಕಪ್ ನಲ್ಲಿ ಆಡುವುದಕ್ಕೂ ಮುನ್ನ, ಶಾಲೆಯ ತಂಡಕ್ಕಾಗಿ ಆಡಿದ್ದರು. ಕೇರಳದ ಕೊಲ್ಲಂನ ಶ್ರೀ ನಾರಾಯಣ ಕಾಲೇಜಿನಲ್ಲಿ ಅವರು ಇತಿಹಾಸದಲ್ಲಿ ಪದವಿ ಪೂರೈಸಿದರು.

2004ರಲ್ಲಿ ಪರ್ತ್ ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಆಡುವ ಮೂಲಕ ಅವರು ಭಾರತೀಯ ಕಿರಿಯರ ತಂಡವನ್ನು ಪ್ರತಿನಿಧಿಸಿದರು. ಇದಾದ ನಂತರ, 2006ರಲ್ಲಿ ಕೊಲೊಂಬೊದಲ್ಲಿ ನಡೆದ ದಕ್ಷಿಣ ಏಸ್ಯಾ ಕ್ರೀಡಾಕೂಟದಲ್ಲಿ ಆಡುವ ಮೂಲಕ ರಾಷ್ಟ್ರೀಯ ಹಿರಿಯರ ತಂಡವನ್ನು ಪ್ರತಿನಿಧಿಸಿದರು. 2014ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್ ನಲ್ಲಿ ನಡೆದ ಏಶ್ಯನ್ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಎದುರಿನ ಫೈನಲ್ ಪಂದ್ಯದಲ್ಲಿ ಎರಡು ಪೆನಾಲ್ಟಿ ಸ್ಟ್ರೋಕ್ ಅನ್ನು ತಡೆಯುವ ಮೂಲಕ ಭಾರತ ತಂಡವು ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ಬೆನ್ನಿಗೇ ಜುಲೈ 13, 2016ರಂದು ಸರ್ದಾರ್ ಸಿಂಗ್ ಅವರಿಂದ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ಶ್ರಿಜೇಶ್, 2016ರಲ್ಲಿ ರಿಯೊದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಕ್ವಾರ್ಟರ್ ಫೈನಲ್ ವರೆಗೂ ಮುನ್ನಡೆಸಿದ್ದರು.

ಆಗಸ್ಟ್ 5, 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಮಣಿಸುವ ಮೂಲಕ ಭಾರತ ತಂಡವು ಕಂಚಿನ ಪದಕವನ್ನು 41 ವರ್ಷಗಳ ನಂತರ ಜಯಿಸುವಲ್ಲಿ ಶ್ರಿಜೇಶ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಭಾರತದ ಗೋಲು ಕೀಪರ್ ಅನ್ನು ತಯಾರು ಮಾಡಲು ಶ್ರಿಜೇಶ್ ಅವರ ತವರು ರಾಜ್ಯವಾದ ಕೇರಳ ಕೊಂಚ ಸಮಯ ತೆಗೆದುಕೊಂಡಿತು. ಇದು ಅವರಿಗೂ ಅರ್ಥವಾಗಿದ್ದ ಸಂಗತಿಯಾಗಿತ್ತು. ಸದಾ ವಿವಾದಗಳಿಂದ ದೂರ ಉಳಿದ ಶ್ರಿಜೇಶ್, ತಮ್ಮ ವೃತ್ತಿಜೀವನದುದ್ದಕ್ಕೂ ತಂಡಕ್ಕಾಗಿ ಸಮರ್ಪಣಾ ಮನೋಭಾವದಿಂದ ಆಡಿ ಎಲ್ಲರ ಮನಗೆದ್ದರು.

2020ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ತಂಡಕ್ಕೆ ಕಂಚಿನ ಪದಕದ ಶ್ರೇಯ ತಂದುಕೊಟ್ಟರೆ, 2022ರಲ್ಲಿ ಚೀನಾದಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಭಾರತ ತಂಡವು ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ರಜತ ಹಾಗೂ 2023ರಲ್ಲಿ ನಡೆದ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನ ಜಯಿಸುವಲ್ಲೂ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಇದಲ್ಲದೆ, 2014ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, 2018ರಲ್ಲಿ ಜಕಾರ್ತಾ-ಪಲೆಂಬಂಗ್ ನಲ್ಲಿ ನಡೆದಿದ್ದ ಏಶಿಯಾಡ್ ನಲ್ಲಿ ಕಂಚಿನ ಪದಕ ಗೆಲ್ಲುವಲ್ಲೂ ತಮ್ಮ ಕಾಣಿಕೆ ನೀಡಿದ್ದರು. 2018ರಲ್ಲಿ ನಡೆದ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ಹಾಗೂ 2019ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಎಫ್ಐಎಚ್ ಪುರುಷರ ಸರಣಿ ಫೈನಲ್ಸ್ ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದ ತಂಡದ ಭಾಗವಾಗಿ ಶ್ರಿಜೇಶ್ ಗಮನ ಸೆಳೆದಿದ್ದಾರೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News