ನಾಳೆ ಐಪಿಎಲ್ ಫೈನಲ್ | ಸನ್‌ರೈಸರ್ಸ್ ಹೈದರಾಬಾದ್‌ಗೆ ಕೆಕೆಆರ್ ಸವಾಲು
ಚೆನ್ನೈ: ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ರವಿವಾರ ರಾತ್ರಿ 7:30ಕ್ಕೆ ಆರಂಭವಾಗಲಿುವ ಮೆಗಾ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್(ಎಸ್‌ಆರ್‌ಎಚ್)ತಂಡವನ್ನು ಎದುರಿಸಲಿದೆ.
17ನೇ ಆವೃತ್ತಿಯ ಟೂರ್ನಮೆಂಟ್‌ನ ಈ ಪಂದ್ಯದಲ್ಲಿ ಜಯಶಾಲಿಯಾಗುವ ತಂಡ ಮಿರುಗುವ ಐಪಿಎಲ್ ಟ್ರೋಫಿ ಎತ್ತಿಹಿಡಿಯಲಿದೆ. ಉಭಯ ತಂಡಗಳು ದೀರ್ಘ ಸಮಯದ ನಂತರ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿವೆ. ಕೆಕೆಆರ್ ತಂಡ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿದೆ. ಸನ್‌ರೈಸರ್ಸ್ ತಂಡ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡ ಪಂದ್ಯಾವಳಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಕ್ವಾಲಿಫೈಯರ್-1ರಲ್ಲಿ ಹೈದರಾಬಾದ್ ತಂಡವನ್ನು ಸುಲಭವಾಗಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಲೀಗ್ ಹಂತದ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ 4 ರನ್‌ನಿಂದ ರೋಚಕ ಜಯ ಸಾಧಿಸಿದೆ.
ಮತ್ತೊಂದೆಡೆ ಪ್ಯಾಟ್ ಕಮಿನ್ಸ್ ನಾಯಕತ್ವದ ಹೈದರಾಬಾದ್ ತಂಡ ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮೂರನೇ ಬಾರಿ ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಹೊರತಾಗಿಯೂ ಹೈದರಾಬಾದ್ ತಂಡ ಈ ಋತುವಿನಲ್ಲಿ ಏಕರೂಪದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಕೆಕೆಆರ್ ವಿರುದ್ಧ ಆಡಿರುವ ಹಿಂದಿನ 5 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಗೆದ್ದಿದೆ.
ಕೆಕೆಆರ್-ಎಸ್‌ಆರ್‌ಎಚ್ ಹೆಡ್-ಟು-ಹೆಡ್ ದಾಖಲೆ
ಕೋಲ್ಕತಾ ಹಾಗೂ ಹೈದರಾಬಾದ್ ತಂಡಗಳು ಈ ತನಕ 27 ಐಪಿಎಲ್ ಪಂದ್ಯಗಳನ್ನು ಆಡಿವೆ. ಈ ಪೈಕಿ ಕೆಕೆಆರ್ 18 ಪಂದ್ಯಗಳಲ್ಲಿ ಜಯಶಾಲಿಯಾಗಿದ್ದು, ಸನ್‌ರೈಸರ್ಸ್ 9 ಬಾರಿ ಜಯ ದಾಖಲಿಸಿದೆ. ಕೋಲ್ಕತಾ ತಂಡ ಹೈದರಾಬಾದ್ ವಿರುದ್ಧ ಗರಿಷ್ಠ 208 ರನ್ ಗಳಿಸಿದೆ. ಹೈದರಾಬಾದ್ ತಂಡ ಕೆಕೆಆರ್ ವಿರುದ್ಧ ಗರಿಷ್ಠ ಮೊತ್ತ 228 ರನ್ ಗಳಿಸಿದೆ.
ಈ ಋತುವಿನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಪ್ರಸಕ್ತ ಐಪಿಎಲ್‌ನಲ್ಲಿ ಹೈದರಾಬಾದ್ ತಂಡ ಕೆಕೆಆರ್ ಅನ್ನು ಇನ್ನಷ್ಟೇ ಮಣಿಸಬೇಕಾಗಿದೆ. ಕೆಕೆಆರ್ ವಿರುದ್ಧ ಲೀಗ್ ಪಂದ್ಯವನ್ನು 4 ರನ್‌ನಿಂದ ಸೋತಿದ್ದ ಹೈದರಾಬಾದ್ ತಂಡ ಕ್ವಾಲಿಫೈಯರ್-1 ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಸೋತಿತ್ತು.
ಶ್ರೇಯಸ್ ಅಯ್ಯರ್ ನಾಯಕನಾಗಿ 2ನೇ ಬಾರಿ ಐಪಿಎಲ್ ಫೈನಲ್ ಆಡಲಿದ್ದಾರೆ. ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಆರು ತಿಂಗಳಲ್ಲಿ ಆಸ್ಟ್ರೇಲಿಯದ ನಾಯಕನಾಗಿ ಆ್ಯಶಸ್ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಹೈದರಾಬಾದ್‌ಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಡುವ ವಿಶ್ವಾಸದಲ್ಲಿದ್ದಾರೆ.
ಪಿಚ್ ರಿಪೋರ್ಟ್
ಚಿಪಾಕ್ ಎಂದೇ ಕರೆಯಲ್ಪಡುವ ಚಿದಂಬರಂ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಸ್ಪಿನ್ ಹಾಗೂ ನಿಧಾನಗತಿಯ ಬೌಲರ್‌ಗಳ ಸ್ನೇಹಿಯಾಗಿದೆ. ವೇಗಿಗಳು ಹಾಗೂ ಸ್ಪಿನ್ನರ್‌ಗಳಿಗೆ ಸೂಕ್ತವಾಗಿದೆ. ಶುಕ್ರವಾರ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಹೈದರಾಬಾದ್ ಸ್ಪಿನ್ನರ್‌ಗಳಾದ ಶಹಬಾಝ್ ಅಹ್ಮದ್ ಹಾಗೂ ಅಭಿಷೇಕ್ ಶರ್ಮಾ ಮಧ್ಯಮ ಓವರ್‌ಗಳಲ್ಲಿ 7 ವಿಕೆಟ್‌ಗಳ ಪೈಕಿ 5 ವಿಕೆಟನ್ನು ಉರುಳಿಸಿ ರಾಜಸ್ಥಾನ ರಾಯಲ್ಸ್‌ಗೆ ಆಘಾತ ನೀಡಿದ್ದರು. ಕೆಕೆಆರ್ ಬೌಲರ್‌ಗಳಾದ ವರುಣ್(20 ವಿಕೆಟ್)ಹಾಗೂ ಸುನೀಲ್ ನರೇನ್(16 ವಿಕೆಟ್)ಬೌಲಿಂಗ್‌ಗೆ ಚೆನ್ನೈ ಪಿಚ್ ಚೆನ್ನಾಗಿ ಒಪ್ಪುತ್ತದೆ. ಈ ಕ್ರೀಡಾಂಗಣದಲ್ಲಿ ಕಳೆದ 20 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 159 ರನ್.
ಹವಾಮಾನ
ಪಂದ್ಯದ ವೇಳೆ ಚೆನ್ನೈನಲ್ಲಿ ತಾಪಮಾನವು 32 ಡಿಗ್ರಿಗಳಷ್ಟು ಇರುತ್ತದೆ. ಅಕ್ಯುವೆದರ್ ಪ್ರಕಾರ ಆರ್ದ್ರತೆಯು ಸುಮಾರು ಶೇ.66ರಷ್ಟು ಇರುತ್ತದೆ. ಶೇ.3ರಷ್ಟು ಮಳೆಯಾಗುವ ಸಾಧ್ಯತೆಯಿದೆ.
ಸ್ಟಾರ್ ಆಟಗಾರರು
ಸುನೀಲ್ ನರೇನ್: ಕೆಕೆಆರ್‌ನ ಹಿರಿಯ ಆಲ್‌ರೌಂಡರ್ ಸುನೀಲ್ ನರೇನ್ ಪ್ರಸಕ್ತ ಐಪಿಎಲ್‌ನಲ್ಲಿ ಬ್ಯಾಟ್ ಹಾಗೂ ಬಾಲ್‌ನಲ್ಲಿ ಎದುರಾಳಿ ತಂಡದ ಮೇಲೆ ಸವಾರಿ ಮಾಡಿದ್ದಾರೆ. ಆರಂಭಿಕ ಆಟಗಾರನಾಗಿ 13 ಪಂದ್ಯಗಳಲ್ಲಿ ಒಟ್ಟು 482 ರನ್ ಗಳಿಸಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ 16 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಟ್ರಾವಿಸ್ ಹೆಡ್: ಹೈದರಾಬಾದ್‌ನ ಅಗ್ರ ಸರದಿಯ ಬ್ಯಾಟರ್ ಟ್ರಾವಿಸ್ ಹೆಡ್ 14 ಪಂದ್ಯಗಳಲ್ಲಿ 43ರ ಸರಾಸರಿಯಲ್ಲಿ ಒಟ್ಟು 567 ರನ್ ಗಳಿಸಿದ್ದಾರೆ.
ಅಭಿಷೇಕ್ ಶರ್ಮಾ: ಹೈದರಾಬಾದ್‌ನ ಅಗ್ರ ಸರದಿಯ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ 15 ಪಂದ್ಯಗಳಲ್ಲಿ 34.4ರ ಸರಾಸರಿಯಲ್ಲಿ ಒಟ್ಟು 482 ರನ್ ಗಳಿಸಿದ್ದಾರೆ.
ಆಂಡ್ರೆ ರಸೆಲ್: ಕೆಕೆಆರ್‌ನ ಬಲಗೈ ಬ್ಯಾಟರ್ ರಸೆಲ್ 9 ಪಂದ್ಯಗಳಲ್ಲಿ 222 ರನ್ ಗಳಿಸಿದ್ದಾರೆ. ಬಲಗೈ ವೇಗದ ಬೌಲರ್ ರಸೆಲ್ ಒಟ್ಟು 16 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ವರುಣ್ ಚಕ್ರವರ್ತಿ: ಕೆಕೆಆರ್‌ನ ಲೆಗ್ ಬ್ರೇಕ್ ಗೂಗ್ಲಿ ಬೌಲರ್ ವರುಣ್ 13 ಪಂದ್ಯಗಳಲ್ಲಿ 19.7ರ ಸರಾಸರಿಯಲ್ಲಿ ಒಟ್ಟು 20 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪ್ಯಾಟ್ರಿಕ್ ಕಮಿನ್ಸ್: ಹೈದರಾಬಾದ್‌ನ ಬಲಗೈ ವೇಗದ ಬೌಲರ್ ಕಮಿನ್ಸ್ 15 ಪಂದ್ಯಗಳಲ್ಲಿ ಒಟ್ಟು 17 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮಿಚೆಲ್ ಸ್ಟಾರ್ಕ್: ಅಸ್ಥಿರ ಪ್ರದರ್ಶನ ನೀಡುತ್ತಿರುವ ಕೆಕೆಆರ್‌ನ ಎಡಗೈ ವೇಗದ ಬೌಲರ್ ಸ್ಟಾರ್ಕ್ 12 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ.
ಹೆನ್ರಿಕ್ ಕ್ಲಾಸೆನ್: ಹೈದರಾಬಾದ್‌ನ ಸ್ಟಾರ್ ಬಲಗೈ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಕ್ಲಾಸೆನ್ 14 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 463 ರನ್ ಗಳಿಸಿದ್ದಾರೆ. ರಾಜಸ್ಥಾನ ವಿರುದ್ಧ ಕ್ವಾಲಿಫೈಯರ್-2 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸಿದ್ದರು. ಕೆಕೆಆರ್ ವಿರುದ್ಧದ ಲೀಗ್ ಪಂದ್ಯದಲಿ ಕ್ಷಿಪ್ರವಾಗಿ ಅರ್ಧಶತಕ ಗಳಿಸಿದ್ದರು.
► ತಂಡಗಳು
ಸನ್‌ರೈಸರ್ಸ್ ಹೈದರಾಬಾದ್ (ಸಂಭಾವ್ಯರು): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತಿಶ್ ರೆಡ್ಡಿ, ಮರ್ಕ್ರಮ್, ಹೆನ್ರಿಕ್ ಕ್ಲಾಸೆನ್(ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ ಕುಮಾರ್, ಮಯಾಂಕ್ ಮರ್ಕಂಡೆ, ಟಿ.ನಟರಾಜನ್.
ಕೋಲ್ಕತಾ ನೈಟ್ ರೈಡರ್ಸ್(ಸಂಭಾವ್ಯರು):ರಹಮಾನುಲ್ಲಾ ಗುರ್ಬಾಝ್(ವಿಕೆಟ್ ಕೀಪರ್), ಸುನೀಲ್ ನರೇನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮನ್‌ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.