ಇತಿಹಾಸ ನಿರ್ಮಿಸಿ, 2024ರ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದ ಉಗಾಂಡ

Update: 2023-11-30 14:47 GMT

Photo: icc-cricket.com

ಹೊಸದಿಲ್ಲಿ: ಆಫ್ರಿಕಾ ಪ್ರಾಂತ್ಯದ ಕೊನೆಯ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ರುವಾಂಡ ತಂಡವನ್ನು ಪರಾಭವಗೊಳಿಸಿ, 2024ರ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಗೆ ಅರ್ಹತೆ ಪಡೆಯುವ ಮೂಲಕ ಉಗಾಂಡ ತಂಡವು ಇತಿಹಾಸ ನಿರ್ಮಿಸಿದೆ. ಆ ಮೂಲಕ ನಮೀಬಿಯಾದೊಂದಿಗೆ ಟಿ-20 ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆದ ಎರಡನೆ ಆಫ್ರಿಕಾ ತಂಡವಾಗಿ ಉಗಾಂಡ ಹೊರಹೊಮ್ಮಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾನಾಡಿದ ಆರು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗಮನಾರ್ಹ ಗೆಲುವು ಸಾಧಿಸುವ ಮೂಲಕ, ಆಫ್ರಿಕಾ ಪ್ರಾಂತ್ಯದಿಂದ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯಲಿರುವ ಎರಡು ತಂಡಗಳ ಪೈಕಿ ಉಗಾಂಡವು ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಂಡಿತು. ಇದರಿಂದಾಗಿ, 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ಆಯೋಜನೆಗೊಳ್ಳಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಈ ಸಾಧನೆಯಿಂದ ಐಸಿಸಿ ವಿಶ್ವಕಪ್ ಕ್ರೀಡಾಕೂಟದಲ್ಲಿ ಚೊಚ್ಚಲ ಬಾರಿಗೆ ಉಗಾಂಡ ತಂಡವು ಕಾಣಿಸಿಕೊಳ್ಳಲಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯುವ ಮೂಲಕ, ಈ ಮಾದರಿಯ ಕ್ರಿಕೆಟ್ ನಲ್ಲಿ ಆಡುತ್ತಿರುವ ಐದನೆಯ ಆಫ್ರಿಕಾ ದೇಶವಾಗಿ ಉಗಾಂಡ ಹೊರಹೊಮ್ಮಿದೆ.

ಮತ್ತೊಂದೆಡೆ, ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯುವ ನೆಚ್ಚಿನ ತಂಡವಾಗಿದ್ದ ಝಿಂಬಾಬ್ವೆಯು, ಆ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ತಾನಾಡಿರುವ ಐದು ಪಂದ್ಯಗಳ ಪೈಕಿ ಮೂರು ಪಂದ್ಯಗಳ ಗೆಲುವಿನ ಮೂಲಕ ಆರು ಅಂಕಗಳನ್ನು ಸಂಪಾದಿಸಿರುವ ಝಿಂಬಾಬ್ವೆ ತಂಡವು, ಸದ್ಯ ಮೂರನೆಯ ಸ್ಥಾನದಲ್ಲಿದೆ.

ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿರುವ ಓಮನ್, ನೇಪಾಳ, ಪಪುವ ನ್ಯೂ ಗಿನಿಯ ಹಾಗೂ ಕೆನಡಾ ತಂಡಗಳೊಂದಿಗೆ ಮತ್ತೊಂದು ಆಫ್ರಿಕಾ ತಂಡವಾಗಿ ನಮೀಬಿಯಾ ಕೂಡಾ ಅರ್ಹತೆ ಗಿಟ್ಟಿಸಿದೆ. ಅತಿಥಿ ದೇಶ ಎಂಬ ಕಾರಣಕ್ಕೆ ಅಮೆರಿಕಾ ಕೂಡಾ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿದೆ.

1998ರಿಂದ ಉಗಾಂಡವು ಐಸಿಸಿಯ ಸಹ ಸದಸ್ಯ ದೇಶವಾಗಿದ್ದರೂ, ಈವರೆಗೆ ಅದಕ್ಕೆ ಟೆಸ್ಟ್ ಅಥವಾ ಏಕದಿನ ತಂಡದ ಸ್ಥಾನಮಾನ ದೊರೆತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News