ರಣಜಿ ಕ್ರಿಕೆಟ್ ಗೆ ಮನೋಜ್ ತಿವಾರಿ ವಿದಾಯ

Update: 2024-02-19 16:07 GMT

ಮನೋಜ್ ತಿವಾರಿ| Photo: PTI 

ಹೊಸದಿಲ್ಲಿ: ಬಂಗಾಳ ಕ್ರಿಕೆಟ್ ತಂಡದ ಓರ್ವ ಲೆಜೆಂಡ್ ಆಟಗಾರನಾಗಿರುವ ಮನೋಜ್ ತಿವಾರಿ ತನ್ನ ತಂಡದ ಪರ ಕೊನೆಯ ರಣಜಿ ಟ್ರೋಫಿ ಪಂದ್ಯವನ್ನಾಡಿದರು. ಬಿಹಾರ ವಿರುದ್ಧ ತನ್ನ ರಾಜ್ಯ ಬಂಗಾಳವು ಜಯ ಸಾಧಿಸಲು ತಿವಾರಿ ನಾಯಕತ್ವ ವಹಿಸಿದರು.

38ರ ಹರೆಯದ ತಿವಾರಿಗೆ ಇದು ಭಾವನಾತ್ಮಕ ಕ್ಷಣವಾಗಿತ್ತು. ಅವರು 19 ವರ್ಷಗಳಿಗೂ ಅಧಿಕ ಕಾಲ ಬಂಗಾಳದ ಪರ ಆಡಿದ್ದಾರೆ. ಪಂದ್ಯದ ನಂತರ ಪಿಚ್ನಲ್ಲಿ ಮಂಡಿಯೂರಿ ಕುಳಿತ ತಿವಾರಿ ಆಟಕ್ಕೆ ಕೃತಜ್ಞತೆ ಸಲ್ಲಿಸಿದರು. ತನ್ನ ಸಹ ಆಟಗಾರರೊಂದಿಗೆ ಛಾಯಾಚಿತ್ರಕ್ಕೆ ಪೋಸ್ ನೀಡಿದರು. ಸಹ ಆಟಗಾರರು ಹಸ್ತಾಕ್ಷರವುಳ್ಳ ಟೀ-ಶರ್ಟ್ ನೀಡಿದರು.

ಪಶ್ಚಿಮಬಂಗಾಳದ ಜೂನಿಯರ್ ಕ್ರೀಡಾ ಸಚಿವರೂ ಆಗಿರುವ ತಿವಾರಿಗೆ ಬಂಗಾಳದ ಕ್ರಿಕೆಟ್ ಸಂಸ್ಥೆ(ಸಿಎಬಿ) ಗೌರವಿಸಿತು. ಈ ವರ್ಷಾರಂಭದಲ್ಲಿ 10,000 ಪ್ರಥಮ ದರ್ಜೆ ರನ್ ಗಳ ಮೈಲಿಗಲ್ಲು ತಲುಪಿದ ಬಂಗಾಳದ ನಾಲ್ಕನೇ ಬ್ಯಾಟರ್ ಆಗಿರುವ ತಿವಾರಿಗೆ ಚಿನ್ನದ ಬ್ಯಾಟನ್ನು ಉಡುಗೊರೆಯಾಗಿ ನೀಡಲಾಯಿತು.

ನನ್ನ ನೆಚ್ಚಿನ ಮೈದಾನ ಈಡನ್ ಗಾರ್ಡನ್ಸ್ ನಲ್ಲಿ ನಿವೃತ್ತಿಯಾಗಿರುವುದಕ್ಕೆ ನನಗೆ ಖುಷಿಯಾಗಿದೆ. ಬಂಗಾಳದ ಪರ ರಣಜಿ ಟ್ರೋಫಿ ಗೆಲ್ಲದಿರುವುದಕ್ಕೆ ನಾನು ಪಶ್ಚಾತ್ತಾಪ ಪಡುವೆ ಎಂದು ತಿವಾರಿ ಹೇಳಿದರು.

ನಿಮ್ಮೊಂದಿಗೆ ಆಡಿದ ನಂತರ ನಿಮ್ಮ ಉತ್ಸಾಹ ಹಾಗೂ ಸಮರ್ಪಣಾಭಾವ ನನಗೆ ತಿಳಿದಿದೆ. ಯುವಕರು ನಿಮ್ಮ ಸಾಧನೆಗಳನ್ನು ಅನುಕರಿಸುತ್ತಾರೆ ಎಂದ ಭಾವಿಸುತ್ತೇನೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಹೇಳಿದ್ದಾರೆ.

ಕಳೆದ ವರ್ಷ ಬಂಗಾಳ ತಂಡವನ್ನು ನಾಯಕನಾಗಿ ರಣಜಿ ಟ್ರೋಫಿ ಫೈನಲ್ ತನಕ ಮುನ್ನಡೆಸಿದ್ದ ತಿವಾರಿ ಈ ಋತು ಆರಂಭವಾಗುವ ಮೊದಲೇ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಸಿಎಬಿ ಅಧ್ಯಕ್ಷ ಸ್ನೇಹಶೀಶ್ ಗಂಗುಲಿ ಅವರು ಇನ್ನೂ ಒಂದು ವರ್ಷ ಬಂಗಾಳ ತಂಡವನ್ನು ನಾಯಕನಾಗಿ ಮುನ್ನಡೆಸುವಂತೆ ಕೋರಿದ ನಂತರ ಮಂಡಿನೋವಿನ ಹೊರತಾಗಿಯೂ ತಿವಾರಿ ನಿವೃತ್ತಿ ನಿರ್ಧಾರ ಮುಂದೂಡಿದ್ದರು.

ತಿವಾರಿ 148 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 47.86ರ ಸರಾಸರಿಯಲ್ಲಿ 10,195 ರನ್ ಗಳಿಸಿದ್ದಾರೆ. ಇದರಲ್ಲಿ ಒಟ್ಟು 30 ಶತಕಗಳಿವೆ. ಔಟಾಗದೆ 303 ಜೀವನಶ್ರೇಷ್ಠ ಸಾಧನೆಯಾಗಿದೆ. ಲಿಸ್ಟ್ ಎ ಪಂದ್ಯಗಳಲ್ಲಿ 5,581 ರನ್ ಹಾಗೂ ಟಿ20 ಕ್ರಿಕೆಟ್ ನಲ್ಲಿ 3,436 ರನ್ ಗಳಿಸಿದ್ದರು.

ತಿವಾರಿ ಭಾರತದ ಪರ 12 ಏಕದಿನ ಪಂದ್ಯಗಳನ್ನು ಆಡಿದ್ದು 2011ರಲ್ಲಿ ಚೆನ್ನೈನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಔಟಾಗದೆ 104 ಸಹಿತ ಒಟ್ಟು 287 ರನ್ ಗಳಿಸಿದ್ದಾರೆ. 3 ಟಿ20 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಮಧ್ಯಮ ಸರದಿಯ ಬ್ಯಾಟರ್ ಹಾಗೂ ಲೆಗ್ ಬ್ರೇಕ್ ಬೌಲರ್ ಆಗಿರುವ ತಿವಾರಿ ಐಪಿಎಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್, ಡೆಲ್ಲಿ ಡೆರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರೈಸಿಂಗ್ ಪುಣೆ ಸೂಪರ್ಜಯಂಟ್ ಅನ್ನು ಪ್ರತಿನಿಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News