ಬಾಂಗ್ಲಾದೇಶದ ಭದ್ರತಾ ಪರಿಸ್ಥಿತಿಯ ಮೇಲೆ ನಿಗಾ : ಐಸಿಸಿ

Update: 2024-07-20 15:45 GMT

PC : @ICC

ದುಬೈ : ಮಹಿಳೆಯರ ಟಿ20 ವಿಶ್ವಕಪ್ ನಡೆಯಲಿರುವ ಬಾಂಗ್ಲಾದೇಶದಲ್ಲಿನ ಭದ್ರತಾ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿರುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಪಂದ್ಯಾವಳಿಯು ನಡೆಯಲಿದೆ.

ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ಇತರ ನಗರಗಳಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದು, ಪೊಲೀಸರು ಶನಿವಾರ ಕರ್ಫ್ಯೂ ವಿಧಿಸಿದ್ದಾರೆ ಮತ್ತು ಸೇನಾ ಪೊಲೀಸರು ಢಾಕಾದಲ್ಲಿ ಗಸ್ತು ತಿರುಗುತ್ತಿದ್ದಾರೆ. ಸರಕಾರಿ ಉದ್ಯೋಗಗಳ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿ ಹಿಂಸೆಗೆ ತಿರುಗಿದೆ.

‘‘ಜಗತ್ತಿನಾದ್ಯಂತದ ಭದ್ರತಾ ಪರಿಸ್ಥಿತಿಯ ಮೇಲೆ ಸ್ವತಂತ್ರ ನಿಗಾ ಇಡುವ ವ್ಯವಸ್ಥೆ ನಮ್ಮಲ್ಲಿದೆ. ಹಾಗಾಗಿ, ನಾವು ಬಾಂಗ್ಲಾದೇಶದ ಭದ್ರತಾ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ’’ ಎಂದು ಐಸಿಸಿಯ ಆಡಳಿತ ಮಂಡಳಿಯ ಸದಸ್ಯರೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ತಂಡವು ಅತ್ಯಂತ ಯಶಸ್ವಿ ತಂಡವಾಗಿದೆ. ಅದು ಒಟ್ಟು ಆರು ಬಾರಿ- 2010, 2012, 2014, 2018, 2020 ಮತ್ತು 2023ರಲ್ಲಿ- ಪ್ರಶಸ್ತಿಗಳನ್ನು ಗೆದ್ದಿದೆ.

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತವು ತನ್ನ ಚೊಚ್ಚಲ ಪ್ರಶಸ್ತಿಯನ್ನು ಎತ್ತುವುದನ್ನು ಎದುರು ನೋಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News