ಪ್ಯಾರಿಸ್ ಒಲಿಂಪಿಕ್ಸ್ | ಸಾಮಾಜಿಕ ಮಾಧ್ಯಮ ಚರ್ಚೆಗೆ ನಾಂದಿ ಹಾಡಿದ ಸ್ಪೇನ್ ಮತ್ತು ಈಜಿಪ್ಟ್ ನಡುವಿನ ಬೀಚ್ ವಾಲಿಬಾಲ್ ಪಂದ್ಯ

Update: 2024-08-04 15:27 GMT

PC  : NDTV 

ಪ್ಯಾರಿಸ್ : ಆಟದ ವೈಖರಿಗಿಂತ, ಆಟಗಾರರು ತೊಟ್ಟು ವಸ್ತ್ರಗಳು ಚರ್ಚೆಗೆ ಗ್ರಾಸವಾಗಿರುವ ಘಟನೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಡೆದಿದೆ.

ಬೀಚ್ ವಾಲಿಬಾಲ್ ನ ಪೂಲ್ ಹಂತದ ಪಂದ್ಯಗಳಲ್ಲಿ ಸ್ಪೇನ್ ಮತ್ತು ಈಜಿಪ್ಟ್ ಮಹಿಳಾ ತಂಡಗಳ ನಡುವೆ ನಡೆದ ಪಂದ್ಯವೊಂದು ಇಂತಹ ಚರ್ಚೆಗೆ ಕಾರಣವಾಗಿದೆ. ಸ್ಪೇನ್ ತಂಡದ ಮಹಿಳಾ ಆಟಗಾರರು ಬಿಕಿನಿಯಲ್ಲಿ ಪಂದ್ಯದಲ್ಲಿ ಪಾಲ್ಗೊಂಡರೆ, ಈಜಿಪ್ಟ್ ಮಹಿಳಾ ಆಟಗಾರರು ಹಿಜಾಬ್ ತೊಟ್ಟು ಪಂದ್ಯದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ಈ ಪಂದ್ಯದಲ್ಲಿ ಸ್ಪೇನ್ ತಂಡವು ನೇರ ಸೆಟ್ ಗಳಲ್ಲಿ ಈಜಿಪ್ಟ್ ತಂಡವನ್ನು ಮಣಿಸಿದರೂ, ಚರ್ಚೆಯ ವಿಷಯವಾಗಿ ಬದಲಾಗಿದ್ದು ಮಾತ್ರ ಅವರು ಪರಸ್ಪರ ತೊಟ್ಟಿದ್ದ ವಸ್ತ್ರಗಳು. ಈ ಪಂದ್ಯದಲ್ಲಿ ಸ್ಪೇನ್ ತಂಡದ ತಾರಾ ಆಟಗಾರ್ತಿಯರಾದ ಲಿಲಿಯಾನ ಫರ್ನಾಂಡೀಸ್ ಹಾಗೂ ಪೌಲಾ ಸೋರಿಯ ಗುಟೆರೆಸ್ ಅತ್ಯುತ್ತಮ ಪ್ರದರ್ಶನ ತೋರಿದರೂ, ಈ ಕುರಿತ ಚರ್ಚೆಯಿಂದಾಗಿ ಅದು ಗೌಣವಾಯಿತು. ಒಂದು ವೇಳೆ ಈಜಿಪ್ಟ್ ಆಟಗಾರ್ತಿಯರೇನಾದರೂ ಫ್ರಾನ್ಸ್ ತಂಡವನ್ನು ಪ್ರತಿನಿಧಿಸಿದ್ದಿದ್ದರೆ, ಅವರಿಗೆ ಹಿಜಾಬ್ ತೊಡಲು ಅವಕಾಶ ದೊರೆಯುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಈಜಿಪ್ಟ್ ತಂಡದ ಆಟಗಾರ್ತಿ ದೋವಾ ಎಲ್ಗೊಬಾಶಿ, “ನಾನು ಹಿಜಾಬ್ ನಲ್ಲಿ ಆಡಲು ಬಯಸುತ್ತೇನೆ. ಆಕೆ ಬಿಕಿನಿಯಲ್ಲಿ ಆಡಲು ಬಯಸುತ್ತಾಳೆ. ನೀವು ಬೆತ್ತಲೆಯಾಗಿರಲು ಅಥವಾ ಹಿಜಾಬ್ ಧರಿಸಲು ಬಯಸಿದರೆ, ಅದೆಲ್ಲವೂ ಸರಿ. ಎಲ್ಲ ಸಂಸ್ಕೃತಿ ಮತ್ತು ಧರ್ಮಗಳನ್ನು ಗೌರವಿಸುವುದನ್ನು ಮಾತ್ರ ಕಲಿಯಿರಿ” ಎಂದು ಹೇಳಿದ್ದಾರೆ ಎಂದು Expressen ಸುದ್ದಿ ಸಂಸ್ಥೆ ವರದಿ ಮಾಡಿದೆ.

“ನಾನು ನಿಮಗೆ ಹಿಜಾಬ್ ತೊಡುವಂತೆ ಹೇಳುವುದಿಲ್ಲ ಹಾಗೂ ನೀವು ನನಗೆ ಬಿಕಿನಿ ತೊಡುವಂತೆ ಹೇಳಬೇಡಿ. ಯಾವ ರೀತಿ ಬಟ್ಟೆ ಧರಿಸಬೇಕು ಎಂದು ನನಗೆ ಯಾರ ಹೇಳುವಂತಿಲ್ಲ. ಇದು ಮುಕ್ತ ದೇಶವಾಗಿದ್ದು, ಎಲ್ಲರೂ ತಮಗೆ ಬೇಕಾದ್ದನ್ನು ಮಾಡಲು ಅವಕಾಶವಿದೆ” ಎಂದೂ ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಜೂನ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಪತ್ರ ಬರೆದಿದ್ದ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಹಾಗೂ ಇನ್ನಿತರ 10 ಸಂಘಟನೆಗಳು, ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆಯಬೇಕು. ಇಂತಹ ನಿಯಮಗಳು ಮುಸ್ಲಿಮ್ ಕ್ರೀಡಾಪಟುಗಳ ವಿರುದ್ಧ ತಾರತಮ್ಯವೆಸಗುತ್ತವೆ ಎಂದು ಆಗ್ರಹಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News