ಐಪಿಎಲ್ ಗುತ್ತಿಗೆ ಪಡೆದ ಬಳಿಕ ಆಟಗಾರರು ರಣಜಿ ಟ್ರೋಫಿಯಲ್ಲಿ ಗಾಯಗೊಂಡಂತೆ ನಟಿಸುತ್ತಾರೆ : ಮನೋಜ್ ತಿವಾರಿ

Update: 2024-03-03 17:15 GMT

ಮನೋಜ್ ತಿವಾರಿ | Photo: @BCCI  

ಮುಂಬೈ: ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಡುವ ಕ್ರಿಕೆಟಿಗರು ದೇಶಿ ಕ್ರಿಕೆಟ್ನಲ್ಲಿ ಆಡುವುದನ್ನು ಕಡ್ಡಾಯಗೊಳಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನಿರ್ಧಾರವನ್ನು ಮಾಜಿ ಆಟಗಾರ ಮನೋಜ್ ತಿವಾರಿ ಸ್ವಾಗತಿಸಿದ್ದಾರೆ.

ರಾಷ್ಟ್ರೀಯ ತಂಡದಿಂದ ಹೊರಗಿರುವ ಹಾಗೂ ದೈಹಿಕವಾಗಿ ಸಮರ್ಥರಾಗಿರುವ ಆಟಗಾರರು ತಮ್ಮ ತಂಡಗಳ ಪರವಾಗಿ ದೇಶಿ ಕ್ರಿಕೆಟ್ನಲ್ಲಿ ಆಡಬೇಕು ಎಂದು 2023-24ರ ಕೇಂದ್ರೀಯ ಗುತ್ತಿಗೆಗಳನ್ನು ಪ್ರಕಟಿಸಿದ ವೇಳೆ ಬಿಸಿಸಿಐ ಪುನರುಚ್ಚರಿಸಿದೆ.

ರಣಜಿ ಟ್ರೋಫಿ ಮುಂತಾದ ಪಂದ್ಯಾವಳಿಗಳನ್ನು ಉಳಿಸುವ ಏಕೈಕ ವಿಧಾನ ಇದು ಎಂದು ಕಳೆದ ತಿಂಗಳು ನಿವೃತ್ತಿ ಘೋಷಿಸಿರುವ ತಿವಾರಿ ಹೇಳಿದರು.

“ಎಳೆಯ ಮತ್ತು ಅನುಭವಿ ಆಟಗಾರರು ದೇಶಿ ಕ್ರಿಕೆಟ್ ವೇಳೆ ಕೇವಲ ಐಪಿಎಲ್ ಬಗ್ಗೆ ಮಾತನಾಡುವುದನ್ನು ನಾನು ನೋಡಿದ್ದೇನೆ. ವಲಯ ಮಟ್ಟದ ಪಂದ್ಯಗಳಲ್ಲೂ ಅವರ ಮಾತುಕತೆಗಳು ಐಪಿಎಲ್ ಬಗ್ಗೆ ಮಾತ್ರ ಕೇಂದ್ರಿತವಾಗಿರುತ್ತವೆ’’ ಎಂದು ‘ಸ್ಪೋಟ್ರ್ಸ್ ನೌ’ ಜೊತೆಗೆ ಮಾತನಾಡಿದ ತಿವಾರಿ ನುಡಿದರು.

“ರಣಜಿ ಪಂದ್ಯಗಳಲ್ಲಿ ಬೌಂಡರಿಗಳನ್ನು ತಡೆಯಲು ಅವರು ಪ್ರಯತ್ನಗಳನ್ನೇ ಮಾಡುವುದಿಲ್ಲ. ಬಳಿಕ ಅವರು ಅದಕ್ಕೆ ಗಾಯದ ಕಾರಣಗಳನ್ನು ಕೊಡುತ್ತಾರೆ. ಮೊದಲು ಗಾಯವಿದ್ದರೂ ತಮ್ಮ ತಂಡಗಳ ಪರವಾಗಿ ರಣಜಿ ಆಡಲು ಆಟಗಾರರು ಹೋಗುತ್ತಿದ್ದರು. ಆದರೆ ಈಗ ಅವುಗಳಿಂದ ತಪ್ಪಿಸಿಕೊಳ್ಳಲು ಕೊನೆಯವರೆಗೂ ಪ್ರಯತ್ನಿಸುತ್ತಾರೆ” ಎಂದು ಅವರು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News