ಡಬ್ಲ್ಯುಪಿಎಲ್ ಟ್ರೋಫಿ ಗೆದ್ದ ಆರ್ ಸಿ ಬಿ ಮಹಿಳಾ ತಂಡ: ವಿರಾಟ್ ಕೊಹ್ಲಿ ಸಹಿತ ಹಲವರಿಂದ ಅಭಿನಂದನಾ ಸಂದೇಶ
ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳೆಯರ ಕ್ರಿಕೆಟ್ ತಂಡ ರವಿವಾರ ರಾತ್ರಿ ಮಹಿಳೆಯರ ಪ್ರೀಮಿಯರ್ ಲೀಗ್(WPL)ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಜಯ ಸಾಧಿಸಿ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಸಹಿತ ಆರ್ ಸಿ ಬಿ ಪುರುಷರ ತಂಡದ ಹಲವು ಆಟಗಾರರು ಸಾಮಾಜಿಕ ಮಾಧ್ಯಮದ ಮೂಲಕ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದು, ಐತಿಹಾಸಿಕ ಗೆಲುವಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭಾರತದ ಬ್ಯಾಟಿಂಗ್ ಲೆಜೆಂಡ್ ಹಾಗೂ ಆರ್ ಸಿ ಬಿ ಪುರುಷರ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಆರ್ ಸಿ ಬಿ ಮಹಿಳೆಯರ ತಂಡದ ಸಾಧನೆಯನ್ನು ಕೊಂಡಾಡಿದರು. ವೀಡಿಯೊ ಕಾಲ್ ಮೂಲಕ ಕೊಹ್ಲಿ ಆರ್ ಸಿ ಬಿ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಮೋಘ ಸಾಧನೆ ಮಾಡಿರುವ ಆರ್ ಸಿ ಬಿಯ ಮಹಿಳಾ ತಂಡವನ್ನು ಹೊಗಳಿದರು.
ಪಂದ್ಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ ಸಿ ಬಿ ನಾಯಕಿ ಸ್ಮತಿ ಮಂಧಾನ ಅವರು ಕೊಹ್ಲಿ ಅವರು ತನ್ನೊಂದಿಗೆ ಮಾತನಾಡಿರುವ ವಿಚಾರವನ್ನು ಬಹಿರಂಗಪಡಿಸಿದರು.
ಭಾರೀ ಶಬ್ಬದ ಕಾರಣ ವೀಡಿಯೊ ಕಾಲ್ ಮೂಲಕ ಕೊಹ್ಲಿ ಅವರು ಹೇಳಿದ್ದ ಒಂದು ಶಬ್ದವೂ ನನಗೆ ಕೇಳಿಸಲಿಲ್ಲ. ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತನಾಡುವೆ. ಅವರು ಖುಷಿಯಾಗಿದ್ದಂತೆ ಕಂಡುಬಂದರು. ಕಳೆದ ವರ್ಷ ಅವರು ನಮ್ಮೊಂದಿಗೆ ಮಾತನಾಡಿದ್ದರು. ಇದು ನನಗೆ ವೈಯಕ್ತಿಕವಾಗಿ ಹಾಗೂ ಇಡೀ ತಂಡಕ್ಕೆ ನೆರವಾಗಿತ್ತು. ಅವರು ಈ ಫ್ರಾಂಚೈಸಿಯ ಭಾಗವಾಗಿದ್ದಾರೆ. ಕಳೆದ 15 ವರ್ಷಗಳಿಂದ ಇದ್ದಾರೆ ಎಂದು ಮಂಧಾನ ಹೇಳಿದರು.
ಮಹಿಳೆಯರ ತಂಡದ ಗೆಲುವಿಗೆ ಇನ್ಸ್ಟ್ರಾಗ್ರಾಮ್ ಮೂಲಕ ತನ್ನ ಖುಷಿಯನ್ನು ವ್ಯಕ್ತಪಡಿಸಿರುವ ಆರ್ ಸಿ ಬಿ ಪುರುಷರ ತಂಡದ ಹಾಲಿ ನಾಯಕ ಎಫ್ಡು ಪ್ಲೆಸಿಸ್, ಆರ್ ಸಿ ಬಿ ಫ್ರಾಂಚೈಸಿಯು ಒಗ್ಗಟ್ಟಿನಿಂದ ಆಡಿದೆ ಎಂದರು.
2022ರಿಂದ ಆರ್ ಸಿ ಬಿ ಪರ ಆಡುತ್ತಿರುವ ಸ್ಫೋಟಕ ಶೈಲಿಯ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಎಕ್ಸ್ ನಲ್ಲಿ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ಗೆಲುವು ಆರ್ ಸಿ ಬಿಗೆ ಸೌಂದರ್ಯ ತಂದಿದೆ ಎಂದು ಬಣ್ಣಿಸಿದರು.
2011ರಿಂದ 2017ರ ತನಕ ಆರ್ ಸಿ ಬಿಯನ್ನು ಪ್ರತಿನಿಧಿಸಿರುವ ವೆಸ್ಟ್ಇಂಡೀಸ್ ನ ಲೆಜೆಂಡರಿ ಬ್ಯಾಟರ್ ಕ್ರಿಸ್ ಗೇಲ್ ಕೂಡ ಅಭಿನಂದನಾ ಸಂದೇಶಕ್ಕೆ ಧ್ವನಿಗೂಡಿಸಿದರು.
ಆರ್ ಸಿ ಬಿಯ ಮಹಿಳಾ ತಂಡಕ್ಕೆ ತನ್ನ ಅಭಿನಂದನಾ ಸಂದೇಶ ಕಳುಹಿಸಿದ ಗೇಲ್, ಆರ್ ಸಿ ಬಿಯ ಪ್ರಸಿದ್ಧ ಘೋಷಣೆ, ಈ ಸಲ ಕಪ್ ನಮ್ದೇ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
2014ರಿಂದ 2021ರ ತನಕ ಆರ್ ಸಿ ಬಿ ತಂಡದ ಪರ ಆಡಿರುವ ಆರ್ ಸಿ ಬಿಯ ಮಾಜಿ ಆಟಗಾರ ಯಜುವೇಂದ್ರ ಚಹಾಲ್ ಕೂಡ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾರೆ. ಆರ್ ಸಿ ಬಿಯ ಮಾಜಿ ಹಾಗೂ ಹಾಲಿ ಆಟಗಾರರ ನಡುವಿನ ಬಲವಾದ ಸಂಬಂಧ ಹಾಗೂ ಬೆಂಬಲವನ್ನು ಉಲ್ಲೇಖಿಸಿದರು.
ಆರ್ ಸಿ ಬಿ ಅಮೋಘ ಆಲ್ರೌಂಡ್ ಪ್ರದರ್ಶನದ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎಲ್ಲಿಸ್ ಪೆರ್ರಿ ಅಜೇಯ 35 ರನ್ ಗಳಿಸಿದರೆ, ಕನ್ನಡತಿ ಶ್ರೇಯಾಂಕಾ ಪಾಟೀಲ್(4-12) ಹಾಗೂ ಸೋಫಿ ಮೊಲಿನೆಕ್ಸ್(3-20) ಅತ್ಯುತ್ತಮ ಬೌಲಿಂಗ್ ಮೂಲಕ ಆರ್ ಸಿ ಬಿ ಗೆಲುವಿಗೆ ನೆರವಾದರು.
ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಓವರ್ ತನಕ ಗೆಲುವಿಗಾಗಿ ಹೋರಾಟ ನೀಡಿದ್ದರೂ ಛಲ ಬಿಡದ ಆರ್ ಸಿ ಬಿ ಡಬ್ಲ್ಯುಪಿಎಲ್ ಹಾಗೂ ಐಪಿಎಲ್ ನಲ್ಲಿ ಇದೇ ಮೊದಲ ಬಾರಿ ಟಿ-20 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಇದರಿಂದಾಗಿ ಆರ್ ಸಿ ಬಿ ಫ್ರಾಂಚೈಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
VIRAT KOHLI ON VIDEO CALL...!!!
— King¹⁸ (@KohliXhunter18) March 17, 2024
- Congratulating all the RCB Players.#WPLFinal #RCBvDC #DCvRCB #ViratKohli #SmritiMandhana pic.twitter.com/1as7EYG6UK