ದ್ವಿತೀಯ ಟೆಸ್ಟ್: ರಾಹುಲ್, ಜಡೇಜಗೆ ಗಾಯ, ಟೀಮ್ ಇಂಡಿಯಾಕ್ಕೆ ಆಯ್ಕೆಯ ಗೊಂದಲ

Update: 2024-01-30 15:28 GMT

ರಾಹುಲ್, ಜಡೇಜ | Photo: X 

ಹೊಸದಿಲ್ಲಿ : ಕೆ.ಎಲ್.ರಾಹುಲ್ ಹಾಗೂ ರವೀಂದ್ರ ಜಡೇಜ ದಿಢೀರನೆ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವು ಆಯ್ಕೆಯ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದೆ.

ಹೈದರಾಬಾದ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಘಾತಕಾರಿ ಸೋಲಿನಿಂದ ಚೇತರಿಸಿಕೊಳ್ಳಲು ಎದುರು ನೋಡುತ್ತಿರುವ ಭಾರತ ತಂಡ ಜಡೇಜ ಹಾಗೂ ರಾಹುಲ್ ಅಲಭ್ಯತೆಯಿಂದಾಗಿ ಇಕ್ಕಟ್ಟಿಗೆ ಸಿಲುಕಿದೆ. ಈ ಇಬ್ಬರು ಭಾರತದ ಪ್ರಮುಖ ಸದಸ್ಯರಾಗಿದ್ದಾರೆ.

ಹೈದರಾಬಾದ್ ಟೆಸ್ಟ್ ನಲ್ಲಿ ಕ್ಷಿಪ್ರವಾಗಿ ಒಂದು ರನ್ ಗಳಿಸಲು ಹೋಗಿ ಜಡೇಜ ಗಾಯಗೊಂಡಿದ್ದರು. ರಾಹುಲ್ ಕೂಡ ಪಂದ್ಯದ ವೇಳೆ ಗಾಯಗೊಂಡಿದ್ದಾರೆ.

ರಾಹುಲ್ ಹಾಗೂ ಜಡೇಜ ಎರಡನೇ ಟೆಸ್ಟ್ ನಿಂದ ಹೊರಗುಳಿದ ಕಾರಣ ಮುಂಬೈನ ಯುವ ಬ್ಯಾಟರ್ ಸರ್ಫರಾಝ್ ಖಾನ್ ಇದೇ ಮೊದಲ ಬಾರಿ ಟೀಮ್ ಇಂಡಿಯಾಕ್ಕೆ ಕರೆ ಪಡೆದಿದ್ದಾರೆ.

ಅಮೋಘ ಆಲ್ರೌಂಡ್ ಪ್ರದರ್ಶನ ನೀಡಬಲ್ಲ ಜಡೇಜರಿಂದ ತೆರವಾದ ಸ್ಥಾನ ತುಂಬುವುದು ಕಷ್ಟಕರವಾಗಿದೆ. ಸೆಪ್ಟಂಬರ್ ನಲ್ಲಿ ನಡೆದಿದ್ದ ಸರ್ಜರಿಯಿಂದ ಚೇತರಿಸಿಕೊಂಡಿರುವ ರಾಹುಲ್ ಏಕದಿನ ಹಾಗೂ ಟೆಸ್ಟ್ ಮಾದರಿಯ ಕ್ರಿಕೆಟ್ನಲ್ಲಿ ಭಾರತದ ಪ್ರಮುಖ ಹಿಟ್ಟರ್ ಆಗಿದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ತಂಡದಿಂದ ದೂರ ಉಳಿದಿದ್ದಾರೆ. ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋತಿರುವ ಭಾರತವು ಶುಕ್ರವಾರ ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಿಂದ ಕೊಹ್ಲಿಯ ಆಟದಿಂದ ವಂಚಿತವಾಗಲಿದೆ.

ಸರ್ಫರಾಝ್ ಖಾನ್, ಸೌರಭ್ ಕುಮಾರ್ ಹಾಗೂ ವಾಶಿಂಗ್ಟನ್ ಸುಂದರ್ ಭಾರತದ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ಗೆ ಆಯ್ಕೆ ಮಾಡಲು ಆಯ್ಕೆಗಾರರು ಸಾಕಷ್ಟು ಅವಕಾಶ ನೀಡಿದ್ದಾರೆ.

ಹೈದರಾಬಾದ್ ಟೆಸ್ಟ್ ಗೆ ಆಯ್ಕೆ ಮಾಡಿರುವ 15 ಸದಸ್ಯರ ತಂಡದಲ್ಲಿದ್ದ ರಜತ್ ಪಾಟಿದಾರ್ ಮಧ್ಯಮ ಸರದಿಯಲ್ಲಿ ರಾಹುಲ್ ಸ್ಥಾನವನ್ನು ತುಂಬುವ ನಿಟ್ಟಿನಲ್ಲಿ ಮೊದಲ ಆಯ್ಕೆಯಾಗಿದ್ದಾರೆ. ಜಡೇಜ ಬದಲಿಗೆ ಆರ್.ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ನಂತರ ಮೂರನೇ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆಯಬಹುದು.

ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮಾಡಿದಂತೆ ಓರ್ವ ವೇಗಿ ಹಾಗೂ ನಾಲ್ವರು ಸ್ಪಿನ್ನರ್ಗಳನ್ನು ಆಡಿಸುವ ಮತ್ತೊಂದು ಆಯ್ಕೆಯು ಭಾರತದ ಮುಂದಿದೆ. ಇಂತಹ ಸನ್ನಿವೇಶದಲ್ಲಿ ಕುಲದೀಪ್ ಅವರು ಮುಹಮ್ಮದ್ ಸಿರಾಜ್ ಬದಲಿಗೆ ಆಡಬಹುದು. ಮಧ್ಯಮ ಸರದಿಯನ್ನು ಬಲಿಷ್ಠಗೊಳಿಸಲು ಸರ್ಫರಾಝ್ ಖಾನ್ ಅಥವಾ ವಾಶಿಂಗ್ಟನ್ ಸುಂದರ್ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕೆಲವು ಶತಕಗಳನ್ನು ಗಳಿಸಿರುವ ಸೌರಭ್ ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಸಾಧ್ಯತೆಯಿದೆ. ಸೌರಭ್ ಅವರು ಜಡೇಜರಂತೆಯೇ ಎಡಗೈ ಸ್ಪಿನ್ ಬೌಲಿಂಗ್ ಮಾಡಬಲ್ಲರು.

ವಿಶಾಖಪಟ್ಟಣದ ಎಸಿಎ-ವಿಡಿಸಿಎ ಸ್ಟೇಡಿಯಮ್ನಲ್ಲಿ ಈ ತನಕ 2 ಟೆಸ್ಟ್ ಪಂದ್ಯಗಳನ್ನು ಆಡಲಾಗಿದ್ದು, ಪಿಚ್ ಕನಿಷ್ಠ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಸ್ನೇಹಿಯಾಗಬಹುದು. ಇದೇ ಮೈದಾನದಲ್ಲಿ 2019ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ನ ಮೊದಲ ಇನಿಂಗ್ಸ್ನಲ್ಲಿ ಭಾರತವು ಮಯಾಂಕ್ ಅಗರ್ವಾಲ್ ದ್ವಿಶತಕ ಹಾಗೂ ರೋಹಿತ್ ಶರ್ಮಾ 176 ರನ್ ನೆರವಿನಿಂದ 502 ರನ್ ಗಳಿಸಿತ್ತು.

ಆಡುವ ಬಳಗದಲ್ಲಿ ಸ್ಪಿನ್ನರ್ ಕುಲದೀಪ್ ಉಪಸ್ಥಿತಿಯು ನೆರವಾಗಬಹುದು ಎಂದು ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.

ಭಾರತವು ಒಬ್ಬ ವೇಗಿಯನ್ನು ಮಾತ್ರ ಆಡಿಸಲು ಮುಂದಾದರೆ ಕುಲದೀಪ್ ಖಂಡಿತವಾಗಿಯೂ ತಂಡಕ್ಕೆ ನೆರವಾಗಲಿದ್ದಾರೆ. ಅವರ ಬೌಲಿಂಗ್ ನಲ್ಲಿ ವೈವಿಧ್ಯತೆ ಇದೆ ಎಂದು ಕುಂಬ್ಳೆ ಹೇಳಿದ್ದಾರೆ.

ರಜತ್ ಪಾಟಿದಾರ್ ಅವರು ರಾಹುಲ್ ಬದಲಿಗೆ, ಕುಲದೀಪ್ ಅವರು ಜಡೇಜ ಬದಲಿಗೆ ಆಡಿದರೆ, ನಾಲ್ವರು ಸ್ಪಿನ್ನರ್ಗಳನ್ನು ಆಡಿಸಿ ಇಂಗ್ಲೆಂಡ್ ತಂಡವನ್ನು ನಕಲಿ ಮಾಡುವ ಅಗತ್ಯವಿರುವುದಿಲ್ಲ. ತವರು ನೆಲದಲ್ಲಿ ಇಬ್ಬರು ವೇಗಿಗಳು ಹಾಗೂ ಮೂವರು ಸ್ಪಿನ್ನರ್ಗಳೊಂದಿಗೆ ಆಡುವುದು ನಮ್ಮ ಶಕ್ತಿಯಾಗಿದೆ. ನಾವು ಅದಕ್ಕೆ ಅಂಟಿಕೊಂಡಿರಬೇಕು ಎಂದು ಭಾರತದ ಮಾಜಿ ಸ್ಪಿನ್ನರ್ ಸರನ್ದೀಪ್ ಸಿಂಗ್ ಹೇಳಿದ್ದಾರೆ.

ರೋಹಿತ್ ಮೂರನೇ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದು, ಶುಭಮನ್ ಗಿಲ್ ಅವರು ಯಶಸ್ವಿ ಜೈಸ್ವಾಲ್ ರೊಂದಿಗೆ ಇನಿಂಗ್ಸ್ ಆರಂಭಿಸಿದರೆ ತಂಡಕ್ಕೆ ಅನುಕೂಲಕರವಾಗಬಹುದು ಎಂದು ಸರನ್ದೀಪ್ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News