ಡೇವಿಸ್ ಕಪ್ ನಲ್ಲಿ ಆಡಲು ಸುಮಿತ್ ನಗಾಲ್‌ ರಿಂದ ವಾರ್ಷಿಕ 50,000 ಡಾಲರ್ ಸಂಭಾವನೆಗೆ ಬೇಡಿಕೆ : ಎಐಟಿಎ

Update: 2024-09-19 16:17 GMT

ಸುಮಿತ್ ನಗಾಲ್‌ | PC : PTI 

ಹೊಸದಿಲ್ಲಿ: ಡೇವಿಸ್ ಕಪ್ ನಲ್ಲಿ ಭಾರತ ತಂಡದ ಪರವಾಗಿ ಆಡಲು ತಾರಾ ಟೆನಿಸ್ ಆಟಗಾರ ಸುಮಿತ್ ನಗಾಲ್‌ 50,000 ಡಾಲರ್ ಸಂಭಾವನೆಗೆ ಬೇಡಿಕೆಯಿರಿಸಿದ್ದರು ಎಂದು ಗುರುವಾರ ಅಖಿಲ ಭಾರತ ಟೆನಿಸ್ ಒಕ್ಕೂಟ ಹೇಳಿದೆ. ಆದರೆ, ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಸುಮಿತ್ ನಗಾಲ್‌, ಅಥ್ಲೀಟ್ ಗಳಿಗೆ ಅವರ ಸೇವೆಗಾಗಿ ನೀಡಬೇಕಾದ ಪ್ರಮಾಣೀಕೃತ ಸಂಭಾವನೆಯದು ಎಂದು ಪ್ರತಿಪಾದಿಸಿದ್ದಾರೆ.

ಬೆನ್ನು ನೋವಿನ ಕಾರಣ ನೀಡಿ ಸುಮಿತ್ ನಗಾಲ್‌ ಡೇವಿಸ್ ಕಪ್ ನಿಂದ ಹಿಂದೆ ಸರಿದಿದ್ದರು. ಕಳೆದ ತಿಂಗಳು ನಡೆದ ಅಮೆರಿಕ ಓಪನ್ ಡಬಲ್ಸ್ ಸ್ಪರ್ಧೆಯಲ್ಲೂ ಬೆನ್ನು ನೋವಿನ ಕಾರಣಕ್ಕೆ ಅವರು ಆ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ.

ಡೇವಿಸ್ ಕಪ್ ನಲ್ಲಿ ಸ್ವೀಡನ್ ತಂಡವನ್ನು ತವರು ನೆಲದಲ್ಲೇ ಮಣಿಸುವ ಸುವರ್ಣಾವಕಾಶ ಭಾರತ ತಂಡಕ್ಕೆ ದೊರೆತಿತ್ತು. ಆದರೆ, ಡೇವಿಸ್ ಕಪ್ ತಂಡದಲ್ಲಿ ಯಾವುದೇ ಸಿಂಗಲ್ಸ್ ಸ್ಪೆಷಲಿಸ್ಟ್ ಆಟಗಾರರಿಲ್ಲದೆ, ಕೇವಲ ಡಬಲ್ಸ್ ಮತ್ತು ಪದಾರ್ಪಣೆ ಆಟಗಾರರೇ ತುಂಬಿದ್ದುದರಿಂದ ಭಾರತ ಟೆನಿಸ್ ತಂಡವು ವರ್ಲ್ಸ್ ಗ್ರೂಪ್ 1ನಲ್ಲಿ ಸ್ವೀಡನ್ ಎದುರು 0-4 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತ್ತು.

ನಗಾಲ್‌, ಯೂಕಿ ಭಾಂಬ್ರಿ ಹಾಗೂ ಶಶಿಕುಮಾರ್ ಮುಕುಂದ್ ಸೇರಿದಂತೆ ಭಾರತದ ಮುಂಚೂಣಿ ಟೆನಿಸ್ ಆಟಗಾರರು ರಾಷ್ಟ್ರೀಯ ತಂಡದ ಪರವಾಗಿ ಆಡಲು ನಿರಾಕರಿಸಿದ ಕುರಿತು ಮಂಗಳವಾರ ಅಖಿಲ ಭಾರತ ಟೆನಿಸ್ ಒಕ್ಕೂಟ ಸ್ಪಷ್ಟವಾಗಿ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ನಡುವೆ, ಎಟಿಪಿ 250 ಹ್ಯಾಂಗ್ ಝೌ ಮುಕ್ತ ಟೆನಿಸ್ ಕ್ರೀಡಾಕೂಟವನ್ನು ಪ್ರವೇಶಿಸಿದ್ದ ನಗಾಲ್‌, ಮತ್ತದೆ ಬೆನ್ನು ನೋವಿನ ಕಾರಣಕ್ಕೆ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.

ಅಖಿಲ ಭಾರತ ಟೆನಿಸ್ ಒಕ್ಕೂಟದ ಮುಖ್ಯಸ್ಥ ಧೂಪರ್ ಪ್ರಕಾರ, ಅಂತಾರಾಷ್ಟ್ರೀಯ ಟೆನಿಸ್ ಮಹಾ ಒಕ್ಕೂಟದಿಂದ ಅಖಿಲ ಭಾರತ ಟೆನಿಸ್ ಒಕ್ಕೂಟವು ವಿಶ್ವ ಗುಂಪು 1 ಪಂದ್ಯಾವಳಿಗೆ ರೂ. 30 ಲಕ್ಷ ಹಣವನ್ನು ಸ್ವೀಕರಿಸುತ್ತದೆ. ಈ ಪೈಕಿ ಶೇ. 70ರಷ್ಟನ್ನು ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರಿಗೆ ಹಂಚಲಾಗುತ್ತದೆ. ಉಳಿದ ಶೇ. 30ರಷ್ಟು ಹಣವನ್ನು ಒಕ್ಕೂಟದ ಆಡಳಿತಾತ್ಮಕ ನಿರ್ವಹಣೆಗಾಗಿ ಬಳಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.

ಅಲ್ಲದೆ, ಪ್ರಶಸ್ತಿ ಮೊತ್ತವು ಕೆಳ ಹಂತದ ಪಂದ್ಯಗಳಿಗೆ ವಿನಿಯೋಗಿಸಲ್ಪಡುತ್ತದೆ.

“ಯಾವುದೇ ಆಟಗಾರ ಕೂಡಾ ಅಂತಾರಾಷ್ಟ್ರೀಯ ಟೆನಿಸ್ ಮಹಾ ಒಕ್ಕೂಟದ ಪ್ರಶಸ್ತಿ ಮೊತ್ತದಲ್ಲಿನ ತನ್ನ ಪಾಲಿಗಿಂತ ಹೆಚ್ಚಿನ ಸಂಭಾವನೆಯನ್ನು ಇದುವರೆಗೂ ಕೇಳಿಲ್ಲ” ಎಂದು ಡೇವಿಸ್ ಕಪ್ ಆಟಗಾರರೊಬ್ಬರು ದೃಢಪಡಿಸಿದ್ದಾರೆ.

ನಗಾಲ್‌ ಕೂಡಾ ಅಖಿಲ ಭಾರತ ಟೆನಿಸ್ ಒಕ್ಕೂಟದ ಹೇಳಿಕೆಯನ್ನು ಅಲ್ಲಗಳೆದಿಲ್ಲ; ಬದಲಿಗೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

“ಸಂಭಾವನೆ ಕುರಿತಂತೆ ಹೇಳುವುದಾದರೆ, ವೃತ್ತಿಪರ ಆಟಗಾರರು ತಮ್ಮ ದೇಶವನ್ನು ಪ್ರತಿನಿಧಿಸುವಾಗಲೂ ಪ್ರಮಾಣೀಕೃತ ಸಂಭಾವಣೆಯನ್ನು ನೀಡಬೇಕು” ಎಂದು ವಾದಿಸಿದ್ದಾರೆ.

“ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಒಂದು ಹಕ್ಕು ಮತ್ತು ಗೌರವ. ಅದರ ಬಗ್ಗೆ ನನಗೆ ಅತೀವವಾದ ಆದರವಿದೆ. ಡೇವಿಸ್ ಕಪ್ ನಿಂದ ಹಿಂದೆ ಸರಿಯುವುದು ತುಂಬಾ ಕಠಿಣ ನಿರ್ಧಾರವಾಗಿತ್ತು. ಆದರೆ ನನ್ನ ವೈದ್ಯಕೀಯ ತಂಡವನ್ನು ಸಂಪರ್ಕಿಸಿದಾಗ, ಗಾಯಗೊಂಡಿರುವಾಗ ಆಟವಾಡುವುದು ನನ್ನ ಆರೋಗ್ಯಕ್ಕೆ ಮಾತ್ರ ಹಾನಿಯನ್ನುಂಟು ಮಾಡುವುದಿಲ್ಲ ಬದಲಿಗೆ ತಂಡದ ಅವಕಾಶದ ಮೇಲೂ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎಂಬುದು ಅರ್ಥವಾಯಿತು” ಎಂದು ಹೇಳಿಕೊಂಡಿದ್ದಾರೆ.

ಆರಂಭಿಕ ಹಿಂಜರಿಕೆಯ ನಂತರ, ಸುಮಿತ್ ನಗಾಲ್‌ ಬಯಸಿದಷ್ಟು ಸಂಭಾವನೆಯನ್ನು ನೀಡಲು ಅಖಿಲ ಭಾರತ ಟೆನಿಸ್ ಒಕ್ಕೂಟ ಸಮ್ಮತಿಸಿತ್ತಾದರೂ, ಈ ಕುರಿತು ಮತ್ತೊಮ್ಮೆ ಸಂಧಾನ ನಡೆಸುವಂತೆ ಡೇವಿಸ್ ಕಪ್ ತಂಡದ ನಾಯಕ ರೋಹಿತ್ ರಾಜ್ ಪಾಲ್ ಅವರಿಗೆ ಸೂಚಿಸಿತ್ತು. ಆದರೆ, ಈ ಕುರಿತು ಒಪ್ಪಂದವೇರ್ಪಡುವ ಮುನ್ನವೇ ಸುಮಿತ್ ನಗಾಲ್‌ ಡೇವಿಸ್ ಕಪ್ ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದರಿಂದ ಆ ಸಂಧಾನ ಮುರಿದು ಬಿದ್ದಿತ್ತು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News