ರಾಜಸ್ಥಾನದ ವಿರುದ್ಧ ಹೈದರಾಬಾದ್‍ಗೆ ರೋಮಾಂಚಕ 1 ರನ್ ಜಯ

Update: 2024-05-02 18:27 GMT

PC:  BCCI/IPL

ಹೈದರಾಬಾದ್, ಮೇ 2: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಗುರುವಾರ ಸನ್‍ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಕೊನೆಯ ಎಸೆತದಲ್ಲಿ ಒಂದು ರನ್‍ನಿಂದ ರೋಮಾಂಚಕಾರಿಯಾಗಿ ಸೋಲಿಸಿದೆ.

ಗೆಲ್ಲಲು 202 ರನ್‍ಗಳ ಗುರಿಯನ್ನು ಪಡೆದ ರಾಜಸ್ಥಾನ ರಾಯಲ್ಸ್‍ಗೆ ನಿಗದಿತ 20 ಓವರ್‍ಗಳಲ್ಲಿ 200 ರನ್‍ಗಳನ್ನು ಗಳಿಸಲು ಸಾಧ್ಯವಾಯಿತು. ಅದು ಒಂದು ರನ್‍ನಿಂದ ಸೋಲೊಪ್ಪಿಕೊಂಡಿತು.

ರಾಜಸ್ಥಾನ ರಾಯಲ್ಸ್‍ಗೆ ಯಶಸ್ವಿ ಜೈಸ್ವಾಲ್ (67) ಉತ್ತಮ ಆರಂಭ ಒದಗಿಸಿದರು ಹಾಗೂ ಬಳಿಕ ರಿಯಾನ್ ಪರಾಗ್ 49 ಎಸೆತಗಳಲ್ಲಿ 77 ರನ್‍ಗಳನ್ನು ಸಿಡಿಸಿದರು. ಆದರೆ, ಕೊನೆಯಲ್ಲಿ ವಿಕೆಟ್‍ಗಳನ್ನು ಕಳೆದುಕೊಂಡ ರಾಜಸ್ಥಾನ ರಾಯಲ್ಸ್‍ಗೆ ಸುಲಭವಾಗಿ ದಕ್ಕಬಹುದಾಗಿದ್ದ ಗೆಲುವೊಂದು ಮರೀಚಿಕೆಯಾಯಿತು.

ರೋವ್‍ಮನ್ ಪವೆಲ್ 27 ರನ್‍ಗಳನ್ನು ಗಳಿಸಿದರೆ, ಶಿಮ್ರಾನ್ ಹೆಟ್ಮಯರ್ 13 ರನ್ ಗಳಿಸಿದರು.

ಭುವನೇಶ್ವರ್ ಕುಮಾರ್ 3 ವಿಕೆಟ್‍ಗಳನ್ನು ಉರುಳಿಸಿದರೆ, ಪ್ಯಾಟ್ ಕಮಿನ್ಸ್ ಮತ್ತು ಟಿ. ನಟರಾಜನ್ ತಲಾ 2 ವಿಕೆಟ್‍ಗಳನ್ನು ಪಡದರು.

ಇದಕ್ಕೂ ಮೊದಲು, ಹೈದರಾಬಾದ್‍ನ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರ್‍ರಾಷ್ಟ್ರೀಯ ಸ್ಟೇಡಿಯಮ್‍ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‍ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ಈ ಋತುವಿನ ಐಪಿಎಲ್‍ನಲ್ಲಿ ನಿರಂತರವಾಗಿ ರನ್‍ಗಳ ಹೊಳೆಯನ್ನು ಹರಿಸುತ್ತಾ ಬಂದಿರುವ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಈ ಬಾರಿ ರಾಜಸ್ಥಾನ ರಾಯಲ್ಸ್ ಬೌಲರ್‍ಗಳಾದ ಆವೇಶ್ ಖಾನ್ ಮತ್ತು ಸಂದೀಪ್ ಶರ್ಮ ಕಡಿವಾಣ ಹಾಕಿದರು. ಹಾಗಾಗಿ, ಸನ್‍ರೈಸರ್ಸ್ ತಂಡವು ಈ ಋತುವಿನ ತನ್ನ ಕನಿಷ್ಠ ಪವರ್‍ಪ್ಲೇ ಸ್ಕೋರನ್ನು ದಾಖಲಿಸಿತು. ಅದು ಮೊದಲ ಆರು ಓವರ್‍ಗಳಲ್ಲಿ ಕೇವಲ 37 ರನ್‍ಗಳನ್ನು ಗಳಿಸಿತು.

ಕಳಪೆ ಪವರ್‍ಪ್ಲೇ ಸ್ಕೋರ್‍ನ ಹಿನ್ನೆಲೆಯಲ್ಲಿ, ಅಗಾಧ ಮೊತ್ತವನ್ನು ಪೇರಿಸುವಂತೆ ಸನ್‍ರೈಸರ್ಸ್ ಹೈದರಾಬಾದ್ ಕಂಡುಬರಲಿಲ್ಲ. ಆದರೆ, ಟ್ರಾವಿಸ್ ಹೆಡ್ ಮತ್ತು ನಿತೀಶ್ ರೆಡ್ಡಿಯ ಅರ್ಧ ಶತಕಗಳು ಸವಾಲಿನ ಮೊತ್ತವನ್ನು ದಾಖಲಿಸಲು ಬೇಕಾದ ಅಡಿಪಾಯವನ್ನು ಹಾಕಿದವು.

ಆರಂಭಿಕ ಬ್ಯಾಟರ್ 44 ಎಸೆತಗಳಲ್ಲಿ 58 ರನ್‍ಗಳನ್ನು ಗಳಿಸಿದರೆ, ಆಲ್‍ರೌಂಡರ್ ರೆಡ್ಡಿ 42 ಎಸೆತಗಳಲ್ಲಿ 76 ರನ್‍ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು. ಇದು 20 ಓವರ್‍ಗಳ ಪಂದ್ಯವೊಂದರಲ್ಲಿ ಅವರ ಜೀವನಶ್ರೇಷ್ಠ ಸ್ಕೋರ್ ಆಗಿದೆ.

ಹೆನ್ರಿಕ್ ಕ್ಲಾಸೆನ್ 19 ಎಸೆತಗಳಲ್ಲಿ 42 ರನ್‍ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು.

ಇನ್ನೋರ್ವ ಆರಂಭಿಕ ಬ್ಯಾಟರ್ ಅಭಿಶೇಕ್ ಶರ್ಮ 10 ಎಸೆತಗಳಲ್ಲಿ 12 ರನ್ ಗಳಿಸಿ ನಿರ್ಗಮಿಸಿದರು.

ಸನ್‍ರೈಸರ್ಸ್ ಹೈದರಾಬಾದ್ 35 ರನ್‍ಗಳನ್ನು ಗಳಿಸುವಷ್ಟರಲ್ಲಿ 2 ವಿಕೆಟ್‍ಗಳನ್ನು ಕಳೆದುಕೊಂಡರೂ ಬಳಿಕ ಅಮೋಘವಾಗಿ ಚೇತರಿಸಿಕೊಂಡಿತು. ಟ್ರಾವಿಸ್ ಹೆಡ್ ಮತ್ತು ರೆಡ್ಡಿ 3ನೇ ವಿಕೆಟ್‍ಗೆ 96 ರನ್‍ಗಳನ್ನು ಸೇರಿಸಿದರು.

ಸಂಕ್ಷಿಪ್ತ ಸ್ಕೋರ್

ಸನ್‍ರೈಸರ್ಸ್ ಹೈದರಾಬಾದ್ (20 ಓವರ್‍ಗಳಲ್ಲಿ) 201-3

ಟ್ರಾವಿಸ್ ಹೆಡ್ 58, ಅಭಿಶೇಕ್ ಶರ್ಮ 12, ನಿತೀಶ್ ಕುಮಾರ್ ರೆಡ್ಡಿ (ಅಜೇಯ) 76, ಹೆನ್ರಿಕ್ ಕ್ಲಾಸೆನ್ 42

ಆವೇಶ್ ಖಾನ್ 2-39, ಸಂದೀಪ್ ಶರ್ಮ 1-31

ರಾಜಸ್ಥಾನ ರಾಯಲ್ಸ್ (20 ಓವರ್‍ಗಳಲ್ಲಿ) 200-7

ಯಶಸ್ವಿ ಜೈಸ್ವಾಲ್ 67, ರಿಯಾನ್ ಪರಾಗ್ 77, ಶಿಮ್ರಾನ್ ಹೆಟ್ಮಯರ್ 13, ರೋವ್‍ಮನ್ ಪವೆಲ್ 27

ಭುವನೇಶ್ ಕುಮಾರ್ 3-41, ಪ್ಯಾಟ್ ಕಮಿನ್ಸ್ 2-34, ಟಿ. ನಟರಾಜನ್ 2-35

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News