ಬಾರ್ಬಡೋಸ್ ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ ಟಿ20 ಚಾಂಪಿಯನ್ ಟೀಮ್ ಇಂಡಿಯಾ
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡ ಕೊನೆಗೂ ಬಾರ್ಬಡೋಸ್ನ ಗ್ರ್ಯಾಂಟ್ಲಿ ಆಡಮ್ಸ್ ಇಂಟರ್ನ್ಯಾಶನಲ್ ಏರ್ಪೋರ್ಟ್ನ ಚಾರ್ಟರ್ಡ್ ವಿಮಾನದಲ್ಲಿ ಬುಧವಾರ ನಿರ್ಗಮಿಸುವ ಮೂಲಕ ತಾಯ್ನಾಡಿನತ್ತ ತನ್ನ ಪ್ರಯಾಣ ಆರಂಭಿಸಿದೆ.
ಬಾರ್ಬಡೋಸ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟಿ20 ವಿಶ್ವಕಪ್ ಜಯಿಸಿದ ನಂತರ ಚಂಡಮಾರುತದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡವು ಮೂರು ದಿನಗಳಿಂದ ವೆಸ್ಟ್ಇಂಡೀಸ್ನಲ್ಲೇ ಸಿಕ್ಕಿಹಾಕಿಕೊಂಡಿತ್ತು.
ವಿಶ್ವಕಪ್ ವಿಜೇತ ಭಾರತೀಯ ತಂಡಕ್ಕೆ ನಿಯೋಜಿಸಲಾಗಿರುವ ವಿಶೇಷ ಏರ್ ಇಂಡಿಯಾ ಚಾರ್ಟರ್ಡ್ ವಿಮಾನ ಸ್ಥಳೀಯ ಸಮಯ ಬೆಳಗ್ಗೆ 4:50ರ ಸುಮಾರಿಗೆ ತನ್ನ ಹಾರಾಟ ಆರಂಭಿಸಿದ್ದು, ಗುರುವಾರ ಬೆಳಗ್ಗೆ 6:20ಕ್ಕೆ(ಭಾರತದ ಕಾಲಮಾನ)ಹೊಸದಿಲ್ಲಿಗೆ ತಲುಪುವ ನಿರೀಕ್ಷೆ ಇದೆ.
ನಾಯಕ ರೋಹಿತ್ ಶರ್ಮಾ ಇನ್ಸ್ಟಾಗ್ರಾಮ್ನಲ್ಲಿ ಫೋಟೊವನ್ನು ಹಂಚಿಕೊಂಡಿದ್ದು, ವಿಮಾನದೊಳಗೆ ಟ್ರೋಫಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ತಾಯ್ನಾಡಿಗೆ ಬರುತ್ತಿದ್ದೇವೆ ಎಂದು ಫೋಟೊದೊಟ್ಟಿಗೆ ಬರೆದಿದ್ದಾರೆ.
ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಮಾನದಲ್ಲಿ ಭಾರತೀಯ ತಂಡ, ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬಸ್ಥರು, ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಹಾಗೂ ಮಾಧ್ಯಮ ಸದಸ್ಯರುಗಳು ಇದ್ದಾರೆ.
ಭಾರತೀಯ ಕ್ರಿಕೆಟ್ ತಂಡವು ಜುಲೈ 2ರಂದು ಸ್ಥಳೀಯ ಕಾಲಮಾನ ಬೆಳಗ್ಗೆ 6ರ ಸುಮಾರಿಗೆ ವಿಮಾನದಲ್ಲಿ ಹೊರಟು ಬುಧವಾರ ರಾತ್ರಿ 7:45ಕ್ಕೆ(ಭಾರತದ ಕಾಲಮಾನ)ಭಾರತಕ್ಕೆ ಆಗಮಿಸಬೇಕಾಗಿತ್ತು. ಆದರೆ, ವಿಮಾನ ವಿಳಂಬವಾಗಿ ಆಗಮಿಸಿದ ಕಾರಣ ನಿರ್ಗಮನವು ತಡವಾಗಿದೆ.
ಭಾರತವು ಸೋಮವಾರ ಬೆಳಗ್ಗೆ 11 ಗಂಟೆಗೆ(ಭಾರತದ ಕಾಲಮಾನ ರಾತ್ರಿ 8:30)ಬಾರ್ಬಡೋಸ್ನಿಂದ ಹೊರಡಬೇಕಾಗಿತ್ತು. ಆದರೆ ಚಂಡಮಾರುತ ಬೀಸಿದ ನಂತರ ತಂಡದ ಪ್ರಯಾಣದ ಯೋಜನೆ ಅಸ್ತವ್ಯಸ್ತವಾಯಿತು. ಪ್ರಬಲ ಚಂಡಮಾರುತದಿಂದಾಗಿ ಏರ್ಪೋಟ್ಗಳು ಹಾಗೂ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲಾಗಿತ್ತು. ಭಾರತ ತಂಡವು ಕಳೆದ ಎರಡು ದಿನಗಳಿಂದ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡಿತ್ತು.
Indian Cricket team boarding Air India flight for Delhi from #Barbados Airport.#T20WorldCup @tapasjournalist pic.twitter.com/MlroWqlPGt
— DD India (@DDIndialive) July 3, 2024
ಆಟಗಾರರು ತಾಯ್ನಾಡಿಗೆ ವಾಪಸಾದ ಕೆಲವೇ ಗಂಟೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಗೌರವಿಸಲಿದ್ದಾರೆ.
ವಿಶ್ವಕಪ್ ವಿಜಯೋತ್ಸವವನ್ನು ಆಚರಿಸಲು ಮುಂಬೈನಲ್ಲಿ ರೋಡ್ ಶೋ ನಡೆಸಲು ಯೋಜಿಸಲಾಗಿದೆ.