ಟಿ20 ಕ್ರಿಕೆಟ್ |ವಿರಾಟ್ ಕೊಹ್ಲಿ ದಾಖಲೆ ಮುರಿದ ಬಾಬರ್ ಆಝಮ್

Update: 2024-05-15 15:36 GMT

 ಬಾಬರ್ ಆಝಮ್ , ವಿರಾಟ್ ಕೊಹ್ಲಿ | PC : X 

ಡಬ್ಲಿನ್: ಐರ್ಲ್ಯಾಂಡ್ ವಿರುದ್ಧ ಪಾಕಿಸ್ತಾನ ಆಡಿರುವ ಮೂರನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಹಲವು ದಾಖಲೆಗಳು ಪತನಗೊಂಡಿದ್ದು, ನಾಯಕ ಬಾಬರ್ ಆಝಮ್ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಐರ್ಲ್ಯಾಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲಿನಿಂದ ಚೇತರಿಸಿಕೊಂಡ ಪಾಕಿಸ್ತಾನ ಆ ನಂತರದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಸರಣಿಯನ್ನು ಜಯಿಸಿದೆ. ಮಂಗಳವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಆತಿಥೇಯ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿತ್ತು.

75 ರನ್( 42 ಎಸೆತ, 5 ಸಿಕ್ಸರ್, 6 ಬೌಂಡರಿ)ಗಳಿಸಿದ ಬಾಬರ್ ಅವರು ಪಾಕ್ ಪರ ಬ್ಯಾಟಿಂಗ್ ನಲ್ಲಿ ಮಿಂಚಿದ್ದಾರೆ. ಟಿ20 ಮಾದರಿ ಕ್ರಿಕೆಟ್ ನಲ್ಲಿ 39ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿರುವ ಬಾಬರ್ ಅವರು ಕೊಹ್ಲಿ ದಾಖಲೆಯನ್ನು ಮುರಿದರು. ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ 38 ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 34 ಅರ್ಧಶತಕಗಳನ್ನು ಗಳಿಸಿದ್ದಾರೆ.

ಬಾಬರ್ ಒಂದೇ ಓವರ್ನಲ್ಲಿ 25 ರನ್ ಸಿಡಿಸಿದ ಪಾಕಿಸ್ತಾನದ ಮೊದಲ ಬ್ಯಾಟರ್ ಆಗಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿ ಬೆಂಜಮಿನ್ ವೈಟ್ ಅವರ ಓವರ್ನಲ್ಲಿ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಬಾಬರ್ ಒಂದೇ ಓವರ್ನಲ್ಲಿ ಒಟ್ಟು 25 ರನ್ ಕಲೆ ಹಾಕಿದರು.

3ನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಾಬರ್ ಹಾಗೂ ಮುಹಮ್ಮದ್ ರಿಝ್ವಾನ್(56 ರನ್)ಎರಡನೇ ವಿಕೆಟ್ಗೆ 139 ರನ್ ಜೊತೆಯಾಟ ನಡೆಸಿದರು. ಪಾಕಿಸ್ತಾನದ ಇಬ್ಬರು ಸ್ಟಾರ್ ಬ್ಯಾಟರ್ಗಳು 10ನೇ ಬಾರಿ ಶತಕದ ಜೊತೆಯಾಟ ನಡೆಸಿದರು. ಈ ಸಾಧನೆ ಮಾಡಿದ ಮೊದಲ ಜೋಡಿ ಎನಿಸಿಕೊಂಡರು. ಇದರ ಜೊತೆಗೆ 3,000 ರನ್ ಜೊತೆಯಾಟ ನಡೆಸಿದ ಮೊದಲ ಜೋಡಿಯಾಗಿದೆ.

ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ ಭಾರತದ ಆರಂಭಿಕ ಜೋಡಿ ರೋಹಿತ್ ಹಾಗೂ ಕೆ.ಎಲ್.ರಾಹುಲ್ ಐದು ಬಾರಿ ಶತಕದ ಜೊತೆಯಾಟ ನಡೆಸಿದ್ದಾರೆ. ಐರ್ಲ್ಯಾಂಡ್ ಜೋಡಿ ಪೌಲ್ ಸ್ಟಿರ್ಲಿಂಗ್ ಹಾಗೂ ಆ್ಯಂಡ್ರೂ ಬಲ್ಬಿರ್ನಿ 2,043 ರನ್ ಗಳಿಸಿದ್ದಾರೆ.

ಪಾಕಿಸ್ತಾನವು ಐರ್ಲ್ಯಾಂಡ್ ವಿರುದ್ಧ 3 ಪಂದ್ಯಗಳ ಸರಣಿಯ ನಂತರ ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ. ಇದು ವಿಶ್ವಕಪ್ಗಿಂತ ಮೊದಲು ಪಾಕಿಸ್ತಾನಕ್ಕೆ ಸಿಗುವ ಕೊನೆಯ ಅವಕಾಶವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News