ಟಿ20 | ಅರ್ಧ ಶತಗಳ “ಶತಕ'' ಬಾರಿಸಿದ ವಿರಾಟ್ ಕೊಹ್ಲಿ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಸೋಮವಾರ ಟ್ವೆಟಿ20 ಕ್ರಿಕೆಟ್ ನಲ್ಲಿ 100ನೇ ಬಾರಿಗೆ 50ಕ್ಕಿಂತ ಅಧಿಕ ರನ್ (ಶತಕ ಮತ್ತು ಅರ್ಧ ಶತಕಗಳು)ಗಳನ್ನು ಬಾರಿಸಿದ್ದಾರೆ. ಈ ಮೂಲಕ, ಅವರು ಈ ಸಾಧನೆಗೈದ ಮೊದಲ ಭಾರತೀಯ ಹಾಗೂ ಜಗತ್ತಿನ ಮೂರನೇ ಆಟಗಾರನಾಗಿ ದಾಖಲೆಗೆ ಸೇರಿದರು.
ಬೆಂಗಳೂರಿನ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಆರ್ಸಿಬಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೊಹ್ಲಿ ಈ ಮೈಲಿಗಲ್ಲನ್ನು ತಲುಪಿದರು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರ್ಸಿಬಿಯ ಈ ಋತುವಿನ ಆರಂಭಿಕ ಐಪಿಎಲ್ ಪಂದ್ಯದಲ್ಲಿ ನಿರಾಶಾದಾಯಕ ನಿರ್ವಹಣೆ ನೀಡಿದ ಬಳಿಕ, ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 35 ವರ್ಷದ ಕೊಹ್ಲಿ ತನ್ನ ಶ್ರೇಷ್ಠ ಫಾರ್ಮ್ಗೆ ಮರಳಿದರು. ಶ್ರೇಷ್ಠ ಇನಿಂಗ್ಸ್ ಒಂದನ್ನು ಆಡಿದ ಅವರು 49 ಎಸೆತಗಳಲ್ಲಿ 11 ಬೌಂಡರಿಗಳು ಮತ್ತು ಎರಡು ಸಿಕ್ಸರ್ಗಳನ್ನು ಒಳಗೊಂಡ 77 ರನ್ಗಳನ್ನು ಸಿಡಿಸಿದರು.
ಕೊಹ್ಲಿ 378 ಟ್ವೆಂಟಿ20 ಪಂದ್ಯಗಳಲ್ಲಿ 41.26ರ ಸರಾಸರಿಯಲ್ಲಿ 12,092 ರನ್ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 92 ಅರ್ಧ ಶತಕಗಳಿವೆ.
ಅವರು ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ಗಳನ್ನು ಕಲೆ ಹಾಕಿದ ಭಾರತೀಯ ಬ್ಯಾಟರ್ ಆಗಿದ್ದಾರೆ. ಜಗತ್ತಿನಲ್ಲಿ ಅವರು ಆರನೇ ಸ್ಥಾನದಲ್ಲಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅವರ ಗರಿಷ್ಠ ಸ್ಕೋರ್ 122 ಅಜೇಯ.
110 ಬಾರಿ 50ಕ್ಕಿಂತ ಅಧಿಕ ರನ್ಗಳನ್ನು ಗಳಿಸಿರುವ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 22 ಶತಕಗಳನ್ನು ಸಿಡಿಸಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಇದ್ದು, ಅವರು 109 ಬಾರಿ 50ಕ್ಕಿಂತ ಅಧಿಕ ರನ್ಗಳನ್ನು ಮಾಡಿದ್ದಾರೆ. ಅವರು ಎಂಟು ಬಾರಿ ಶತಕಗಳನ್ನು ಸಂಪಾದಿಸಿದ್ದಾರೆ.