ಟಿ20 ವಿಶ್ವಕಪ್ | ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ ವಿರಾಟ್ ಕೊಹ್ಲಿ
ಹೊಸದಿಲ್ಲಿ : ಯಾವುದೇ ಐಸಿಸಿ ಟೂರ್ನಮೆಂಟ್ ಗಳಲ್ಲಿ ಸಾಧನೆಗಳು ಅಥವಾ ಪ್ರಶಸ್ತಿಗಳ ಕುರಿತು ಮಾತನಾಡುವಾಗ ವಿರಾಟ್ ಕೊಹ್ಲಿ ಹೆಸರು ಇದ್ದೇ ಇರುತ್ತದೆ. ಭಾರತದ ಸ್ಟಾರ್ ಬ್ಯಾಟರ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದ ಏಕೈಕ ಆಟಗಾರನಾಗಿದ್ದಾರೆ. 2014 ಹಾಗೂ 2016ರ ಆವೃತ್ತಿಯ ವಿಶ್ವಕಪ್ ಟೂರ್ನಿಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
ಅಪಾರ ಒತ್ತಡದಲ್ಲಿ ಸತತವಾಗಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡುವ ಕೊಹ್ಲಿ ಅವರ ಸಾಮರ್ಥ್ಯವು ನಿಜವಾಗಿಯೂ ವಿಸ್ಮಯಕಾರಿಯಾಗಿದೆ. ಕೊಹ್ಲಿಯ ಯಶಸ್ಸಿನ ಹಸಿವು, ತಂತ್ರಗಾರಿಕೆ ಹಾಗೂ ಮಾನಸಿಕ ಸ್ಥೈರ್ಯವು ಅವರನ್ನು ಕ್ರಿಕೆಟ್ ದಿಗ್ಗಜರಲ್ಲಿ ಸ್ಥಾನ ಪಡೆಯಲು ನೆರವಾಗಿದೆ.
ಪಾಕಿಸ್ತಾನದ ಆಲ್ರೌಂಡರ್ ಶಾಹಿದ್ ಅಫ್ರಿದಿ 2007ರಲ್ಲಿ ನಡೆದ ಮೊದಲ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸಿ ತನ್ನ ಹೆಸರನ್ನು ಇತಿಹಾಸದ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಹಾಗೂ ಲೆಗ್ ಸ್ಪಿನ್ ಬೌಲಿಂಗ್ ಮೂಲಕ ಮೈದಾನದಲ್ಲಿ ಬಲಿಷ್ಠ ಶಕ್ತಿಯಾಗಿದ್ದ ಅಫ್ರಿದಿಗೆ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನು ಬದಲಿಸುವ ಸಾಮರ್ಥ್ಯವಿತ್ತು.
ಶ್ರೀಲಂಕಾದ ಬ್ಯಾಟಿಂಗ್ ಮಾಂತ್ರಿಕ ತಿಲಕರತ್ನೆ ದಿಲ್ಶನ್ 2009ರಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದರು. ಅವರೇ ಶೋಧಿಸಿರುವ ದಿಲ್ಸ್ಕೂಪ್ ಹೊಡೆತ ಹಾಗೂ ಆಕ್ರಮಣಕಾರಿಶೈಲಿಯ ಬ್ಯಾಟಿಂಗ್ ಬೌಲರ್ಗಳನ್ನು ಕಂಗೆಡಿಸುತ್ತಿತ್ತು. ಹಾಗೂ ಪ್ರೇಕ್ಷಕರಿಗೆ ರಂಜನೆ ನೀಡುತ್ತಿತ್ತು. ದಿಲ್ಶಾನ್ ಗೆ ವಿವಿಧ ವಾತಾವರಣಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವಿತ್ತು ಹಾಗೂ ಅಗ್ರ ಸರದಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾದ ಯಶಸ್ಸಿನಲ್ಲಿ ಮುಖ್ಯ ಪಾತ್ರವಹಿಸಿದ್ದರು.
ಇಂಗ್ಲೆಂಡ್ನ ಪ್ರಮುಖ ಬ್ಯಾಟರ್ ಆಗಿದ್ದ ಕೆವಿನ್ ಪೀಟರ್ಸನ್ 2010ರಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಯಾವುದೇ ಬೌಲಿಂಗ್ ದಾಳಿಯ ಎದುರು ಪ್ರಾಬಲ್ಯ ಸಾಧಿಸುವ ಅವರ ಸಾಮರ್ಥ್ಯವು, ಅವರ ದಿಟ್ಟ ಹೊಡೆತಗಳು ಎದುರಾಳಿ ತಂಡಗಳಿಗೆ ದುಸ್ವಪ್ನವಾಗಿ ಕಾಡುತ್ತಿತ್ತು. ಪೀಟರ್ಸನ್ ಅವರ ನಿರ್ಭೀತ ಬ್ಯಾಟಿಂಗ್ ಹಾಗೂ ಸಂದರ್ಭಕ್ಕೆ ತಕ್ಕಂತೆ ಆಡುವ ಅವರ ಸಾಮರ್ಥ್ಯವು ಸಮಕಾಲೀನ ಆಟಗಾರರಲ್ಲಿ ಭಿನ್ನವಾಗಿ ಕಂಡುಬರುವಂತೆ ಮಾಡಿತ್ತು.
ಆಸ್ಟ್ರೇಲಿಯದ ಆಲ್ರೌಂಡರ್ ಶೇನ್ ವಾಟ್ಸನ್ 2012ರಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಬ್ಯಾಟ್ ಹಾಗೂ ಚೆಂಡು ಎರಡರಲ್ಲೂ ಕೊಡುಗೆ ನೀಡುವ ಅವರ ಸಾಮರ್ಥ್ಯವು ಅವರನ್ನು ಅವರ ತಂಡಕ್ಕೆ ಅಮೂಲ್ಯ ಆಸ್ತಿಯನ್ನಾಗಿ ಮಾಡಿತು. ವಾಟ್ಸನ್ ಅವರ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಹಾಗೂ ತೀಕ್ಷ್ಣವಾದ ಬೌಲಿಂಗ್ ಸ್ಪೆಲ್ಗಳು ಪಂದ್ಯವು ಆಸ್ಟ್ರೇಲಿಯದತ್ತ ವಾಲುವಂತೆ ಮಾಡಿದ್ದವು. ಇವುಗಳು ಅವರನ್ನು ನೈಜ ಮ್ಯಾಚ್ ವಿನ್ನರ್ ಆಗಿ ಮಾಡಿದ್ದವು.
ಆಸ್ಟ್ರೇಲಿಯದ ಸ್ಫೋಟಕ ಶೈಲಿಯ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 2021ರಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಹೆಸರನ್ನು ನೋಂದಾಯಿಸಿದರು. ವಾರ್ನರ್ ಅವರ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಹಾಗೂ ವಿಕೆಟ್ ಗಳ ನಡುವೆ ಅವರ ಅಸಾಧಾರಣ ಓಟ ಅವರನ್ನು ತಂಡದ ಪ್ರಬಲ ಶಕ್ತಿಯನ್ನಾಗಿಸಿತ್ತು.
ಇಂಗ್ಲೆಂಡ್ನ ಯುವ ಆಲ್ರೌಂಡರ್ ಸ್ಯಾಮ್ ಕರನ್ 2022ರಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ವಿಜೇತರಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಬ್ಯಾಟ್ ಹಾಗೂ ಚೆಂಡು ಎರಡರಲ್ಲೂ ಕೊಡುಗೆ ನೀಡುವ ಸಾಮರ್ಥ್ಯ ಹಾಗೂ ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡುವ ಅವರ ಶಕ್ತಿ ಅವರನ್ನು ಸರಣಿಶ್ರೇಷ್ಠ ಆಟಗಾರನನ್ನಾಗಿ ರೂಪಿಸಿತು.