ಒಂದೇ ಐಪಿಎಲ್ ತಂಡದ ಪರ 250 ಪಂದ್ಯ ಆಡಿದ ಮೊದಲ ಆಟಗಾರ ವಿರಾಟ್ ಕೊಹ್ಲಿ
ಹೊಸದಿಲ್ಲಿ: ಐಪಿಎಲ್‌ನಲ್ಲಿ ಒಂದೇ ತಂಡದ ಪರ 250 ಪಂದ್ಯಗಳನ್ನು ಆಡಿದ ಮೊತ್ತ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಿರುವ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಬೆಂಗಳೂರಿನಲ್ಲಿ ರವಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನಾಡುವ ಮೂಲಕ ಕೊಹ್ಲಿ ಈ ಮೈಲಿಗಲ್ಲು ತಲುಪಿದರು.
ಎಂ.ಎಸ್. ಧೋನಿ(263 ಪಂದ್ಯಗಳು), ರೋಹಿತ್ ಶರ್ಮಾ(256 ಪಂದ್ಯಗಳು) ಹಾಗೂ ದಿನೇಶ್ ಕಾರ್ತಿಕ್ (254 ಪಂದ್ಯಗಳು) ಐಪಿಎಲ್ ಟೂರ್ನಿಯಲ್ಲಿ 250ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದಾರೆ. ಆದರೆ ಇವರೆಲ್ಲರೂ ತಮ್ಮ ವೃತ್ತಿಬದುಕಿನಲ್ಲಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಆರ್‌ಸಿಬಿ ಪರ 249 ಪಂದ್ಯಗಳನ್ನು ಆಡಿರುವ ವಿರಾಟ್ 38.71ರ ಸರಾಸರಿಯಲ್ಲಿ, 131.64ರ ಸ್ಟ್ರೈಕ್‌ರೇಟ್‌ನಲ್ಲಿ 8 ಶತಕ ಹಾಗೂ 55 ಅರ್ಧಶತಕಗಳ ಸಹಿತ ಒಟ್ಟು 7,897 ರನ್ ಕಲೆ ಹಾಕಿದ್ದಾರೆ, ಔಟಾಗದೆ 113 ರನ್ ಕೊಹ್ಲಿ ಅವರ ಶ್ರೇಷ್ಠ ಸ್ಕೋರಾಗಿದೆ. ಕೊಹ್ಲಿ 2009, 2011 ಹಾಗೂ 2016ರಲ್ಲಿ ಐಪಿಎಲ್ ಫೈನಲ್‌ಗೆ ತಲುಪಿದ್ದರು. ಆದರೆ ಅವರು ಇನ್ನಷ್ಟೇ ಐಪಿಎಲ್ ಟ್ರೋಫಿ ಗೆಲ್ಲಬೇಕಾಗಿದೆ. ಕೊಹ್ಲಿ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ರನ್ ಸ್ಕೋರರ್ ಹಾಗೂ ಗರಿಷ್ಠ ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ.
ಟೂರ್ನಿಯ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಕೊಹ್ಲಿ ಹೆಸರಲ್ಲಿದೆ. 2016ರಲ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಇದರಲ್ಲಿ 4 ಅರ್ಧಶತಕ ಹಾಗೂ 7 ಶತಕಗಳಿದ್ದವು.
ಪ್ರಸಕ್ತ ಐಪಿಎಲ್‌ನಲ್ಲಿ 13 ಪಂದ್ಯಗಳಲ್ಲಿ 661 ರನ್ ಗಳಿಸಿರುವ ಕೊಹ್ಲಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ.1 ಶತಕ ಹಾಗೂ 5 ಅರ್ಧಶತಕಗಳನ್ನು ಗಳಿಸಿದ್ದಾರೆ.