ನಾಳೆ ಅಫ್ಘಾನಿಸ್ತಾನ ವಿರುದ್ಧ ಮೊದಲ ಟ್ವೆಂಟಿ-20; ವಿರಾಟ್ ಕೊಹ್ಲಿ ಅಲಭ್ಯ
ಹೊಸದಿಲ್ಲಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಗಾಗಿ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಕೋಚ್ ರಾಹುಲ್ ದ್ರಾವಿಡ್ ಬುಧವಾರ ದೃಢಪಡಿಸಿದ್ದಾರೆ.
ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಂದು ವರ್ಷಕ್ಕೂ ಅಧಿಕ ಸಮಯದ ನಂತರ ಟ್ವೆಂಟಿ-20 ತಂಡಕ್ಕೆ ವಾಪಸಾಗಿದ್ದಾರೆ. ಮೊಹಾಲಿಯಲ್ಲಿ ಗುರುವಾರ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಯು ಈ ಇಬ್ಬರ ಪುನರಾಗಮನಕ್ಕೆ ವೇದಿಕೆಯಾಗಿತ್ತು. ಜೂನ್‌ನಲ್ಲಿ ನಿಗದಿಯಾಗಿರುವ ಟಿ-20 ವಿಶ್ವಕಪ್ ತಯಾರಿಗಾಗಿ ಟೀಮ್ ಇಂಡಿಯಾ ಈ ಹೆಜ್ಜೆ ಇಟ್ಟಿದೆ.
ವೈಯಕ್ತಿಕ ಕಾರಣಗಳಿಗಾಗಿ ವಿರಾಟ್ ಕೊಹ್ಲಿ ಮೊದಲ ಪಂದ್ಯದಿಂದ ವಂಚಿತರಾಗಲಿದ್ದಾರೆ. ಅವರು ಎರಡನೇ ಹಾಗೂ ಮೂರನೇ ಟ್ವೆಂಟಿ-20 ಪಂದ್ಯಕ್ಕೆ ಲಭ್ಯವಿರುತ್ತಾರೆ ಎಂದು ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊಹ್ಲಿ ಹಾಗೂ ರೋಹಿತ್ 2022ರ ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಟಿ-20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಒಟ್ಟಿಗೆ ಆಡಿದ್ದರು. ದುರದೃಷ್ಟವಶಾತ್ ಆ ಟೂರ್ನಮೆಂಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್‌ನಲ್ಲಿ ಭಾರತವು ಸೋಲು ಎದುರಿಸಿತ್ತು.
ಎರಡನೇ ಟ್ವೆಂಟಿ-20 ಪಂದ್ಯವು ರವಿವಾರ ಇಂದೋರ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯವು ಜನವರಿ 17ರಂದು ಬೆಂಗಳೂರಿನಲ್ಲಿ ನಡೆಯಲಿದೆ.
2024ರ ಟಿ-20 ವಿಶ್ವಕಪ್‌ಗಿಂತ ಮೊದಲು ಭಾರತ ಕೇವಲ ಒಂದೇ ಟಿ-20 ಸರಣಿಯನ್ನು ಆಡಲಿದೆ ಎಂದು ಬಹಿರಂಗಪಡಿಸಿರುವ ದ್ರಾವಿಡ್, ಐಪಿಎಲ್‌ನಲ್ಲಿ ಆಟಗಾರರ ಪ್ರದರ್ಶನ ಹಾಗೂ ಯಶಸ್ಸು ವಿಶ್ವಕಪ್ ಟೂರ್ನಿಯಲ್ಲಿ ತಂಡದ ಆಯ್ಕೆಯ ಮೇಲೆ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಒತ್ತಿ ಹೇಳಿದರು.
ಕಳೆದ ವಾರ ದಕ್ಷಿಣ ಆಫ್ರಿಕಾದಿಂದ ವಾಪಸಾಗಿರುವ ಟೀಮ್ ಇಂಡಿಯಾವು ಬುಧವಾರ ಸಂಜೆಯಷ್ಟೇ ಗುರುವಾರ ಸಂಜೆ ನಡೆಯುವ ಮೊದಲ ಟಿ-20 ಪಂದ್ಯಕ್ಕೆ ಒಟ್ಟು ಸೇರಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಡ್ರಾಗೊಂಡ ಸರಣಿಯಲ್ಲಿ ಅಗ್ರ ಸರದಿಯಲ್ಲಿ ಆಡಿದ್ದ ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಶುಭಮನ್ ಗಿಲ್ ಅವರು ರೋಹಿತ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಗಿಲ್ ದಕ್ಷಿಣ ಆಫ್ರಿಕಾದಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಸರಾಗವಾಗಿ ರನ್ ಗಳಿಸಿಲ್ಲ. ಇದೀಗ ಅಫ್ಘಾನಿಸ್ತಾನದ ವಿರುದ್ಧ ಸರಣಿಯಲ್ಲಿ ರನ್ ಹೊಳೆ ಹರಿಸುವತ್ತ ದೃಷ್ಟಿಹರಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಾತಾವರಣದಲ್ಲಿ ರಿಂಕು ಸಿಂಗ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಮಧ್ಯಮ ಸರದಿಯಲ್ಲಿ ರಿಂಕು ಸಿಂಗ್ ಭಾರತದ ಪ್ರಮುಖ ಆಟಗಾರನಾಗುವ ಸಾಧ್ಯತೆ ಇದೆ. ಇಶಾನ್ ಕಿಶನ್ ತಂಡದಿಂದ ಹೊರಗುಳಿದಿದ್ದಾರೆ. ಜಿತೇಶ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಇಬ್ಬರು ವಿಕೆಟ್‌ಕೀಪರ್‌ಗಳಾಗಿದ್ದಾರೆ.
ಹಿಂದಿನ ಎರಡು ಸರಣಿಗಳಲ್ಲಿ ವಿಕೆಟ್‌ಕೀಪಿಂಗ್ ಮಾಡಿದ್ದ ಜಿತೇಶ್ ಅವರು ಕೇರಳದ ಬ್ಯಾಟರ್ ಸ್ಯಾಮ್ಸನ್‌ರನ್ನು ಹಿಂದಿಕ್ಕಿ ಮತ್ತೊಮ್ಮೆ ಅವಕಾಶ ಪಡೆಯುವ ಸಾಧ್ಯತೆಯಿದೆ. ವೇಗದ ಬೌಲಿಂಗ್ ಆಲ್‌ರೌಂಡರ್ ಶಿವಂ ದುಬೆ ಟಿ-20 ತಂಡಕ್ಕೆ ವಾಪಸಾಗಿದ್ದಾರೆ. ಆಡುವ 11ರ ಬಳಗವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ವೇಗದ ವಿಭಾಗದಲ್ಲಿ ಅರ್ಷದೀಪ್ ಸಿಂಗ್, ಅವೇಶ್ ಖಾನ್ ಹಾಗೂ ಮುಕೇಶ್ ಕುಮಾರ್ ಮೂರು ಸ್ಪೆಷಲಿಸ್ಟ್ ಬೌಲರ್‌ಗಳಾಗಿದ್ದಾರೆ. ಕುಲದೀಪ್ ಯಾದವ್ ಸ್ಪಿನ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆ ಇದೆ. ರವಿ ಬಿಷ್ಣೋಯ್, ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಭಾರತವು ತನ್ನ ತವರು ನೆಲದಲ್ಲಿ ಸುಲಭವಾಗಿ ಸರಣಿ ಗೆಲ್ಲುವ ನಿರೀಕ್ಷೆ ಇದೆ. ಆದರೆ ಅಫ್ಘಾನಿಸ್ತಾನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಭಾರತದಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ನಿರೀಕ್ಷೆಗಳನ್ನು ಮೀರಿ ಆಡಿದ್ದ ಅಫ್ಘಾನಿಸ್ತಾನ ಜಯಂಟ್ ಕಿಲ್ಲರ್(ದೈತ್ಯ ಸಂಹಾರಿ)ಎನಿಸಿಕೊಂಡಿತ್ತು. ತನಗೆ ಒಪ್ಪುವ ಟಿ-20 ಮಾದರಿ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.
ರಶೀದ್ ಖಾನ್ ಅನುಪಸ್ಥಿತಿಯನ್ನು ಹೊರತುಪಡಿಸಿ ಅಫ್ಘಾನಿಸ್ತಾನ ತಂಡ ಸಂಪೂರ್ಣ ಬಲದೊಂದಿಗೆ ಕಣಕ್ಕಿಳಿಯಲಿದೆ. ಮುಜೀಬ್ ಝದ್ರಾನ್, ನವೀನ್ ಉಲ್ ಹಕ್ ಹಾಗೂ ಫಝಲ್‌ಹಕ್ ಫಾರೂಕಿ ದೇಶದ ಕ್ರಿಕೆಟ್ ಮಂಡಳಿಯೊಂದಿಗಿನ ಗುತ್ತಿಗೆಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಕೇಶ್ ಕುಮಾರ್.
ಅಫ್ಘಾನಿಸ್ತಾನ: ಇಬ್ರಾಹೀಂ ಝದ್ರಾನ್(ನಾಯಕ), ರಹಮಾನುಲ್ಲಾ ಗುರ್ಬಾಝ್(ವಿಕೆಟ್‌ಕೀಪರ್), ಇಕ್ರಮ್ ಅಲಿಖಿಲ್(ವಿಕೆಟ್‌ಕೀಪರ್), ಹಝ್ರತುಲ್ಲಾ ಝಝೈ, ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮುಹಮ್ಮದ್ ನಬಿ, ಕರೀಂ ಜನತ್, ಅಝ್ಮತುಲ್ಲಾ ಒಮರ್ಝೈ, ಶರಾಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾನ್, ಫಝಲ್‌ಹಕ್ ಫಾರೂಕಿ, ಫರೀದ್ ಅಹ್ಮದ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮುಹಮ್ಮದ್ ಸಲೀಮ್, ಖೈಸ್ ಅಹ್ಮದ್, ಗುಲ್ಬದ್ದೀನ್ ನೈಬ್.
ಪಂದ್ಯ ಆರಂಭದ ಸಮಯ: ಸಂಜೆ 7:00