ಕೊಹ್ಲಿ ಗುಣಮಟ್ಟ ತಂಡಕ್ಕೆ ಹೊರೆಯಾಗಿದೆ: ವಿವಾದ ಹುಟ್ಟುಹಾಕಿದ ಅಂಬಟಿ ರಾಯುಡು ಹೇಳಿಕೆ

Update: 2024-05-28 03:14 GMT

PC: X

ಹೊಸದಿಲ್ಲಿ: ಪ್ರಸಕ್ತ ಸಾಲಿನ ಐಪಿಎಲ್ ಫೈನಲ್ ಮುಗಿದ ಬಳಿಕವೂ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ನೀಡಿದ ಹೇಳಿಕೆ ಮತ್ತೆ ವಿವಾದಕ್ಕೆ ಕಾರಣವಾಗಿದೆ.

ಕೊಹ್ಲಿ ಅವರ ಅದ್ಭುತ ಪ್ರದರ್ಶನದ ನಡುವೆಯೂ ಸ್ಟಾರ್ ಬ್ಯಾಟರ್ ನ ನಿರಂತರತೆ ತಂಡಕ್ಕೆ ಹೊರೆಯಾಗಿದೆ ಎಂದು ರಾಯುಡು ಹೇಳಿದ್ದಾರೆ.

ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರೂ ಕೊಹ್ಲಿ ಬಗ್ಗೆ ನೀಡಿರುವ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕೆವಿನ್ ಪೀಟರ್ ಸನ್ ಮತ್ತು ಮಯಾಂತಿ ಲ್ಯಾಂಜರ್ ಜತೆಗೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ವಿಶ್ಲೇಷಣೆಯ ವೇಳೆ ಮಾತನಾಡಿದ ರಾಯುಡು, ಕೊಹ್ಲಿಯವರ ಉತ್ಕೃಷ್ಟತೆ ಆರ್ ಸಿಬಿಯಂಥ ತಂಡದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಚರ್ಚಿಸಿದರು. "ಅತ್ಯುನ್ನತ ಗುಣಮಟ್ಟದ ಮಾನದಂಡ ಹುಟ್ಟುಹಾಕಿದ ಸ್ಟಾರ್ ಕ್ರಿಕೆಟಿಗ ದಂತಕಥೆ ಎನಿಸಿದ ವಿರಾಟ್ ಕೊಹ್ಲಿಯಂಥ ಆಟಗಾರರು ನಿಮ್ಮಲ್ಲಿದ್ದಾರೆ. ಅಂಥ ತಂಡದಲ್ಲಿ ಯುವಕರು ಇರುವುದು , ಅಂಥ ಗುಣಮಟ್ಟವನ್ನು ಸಾಧಿಸುವುದು ಕಷ್ಟಸಾಧ್ಯ. ಏಕೆಂದರೆ ಅವರು ಆ ಹಂತದ ಸಾಧನೆ ಬಯಸುತ್ತಾರೆ" ಎಂದು ಹೇಳಿದ್ದಾರೆ.

ಇದು ಯುವಕರಿಗೆ ಒಳ್ಳೆಯದಲ್ಲವೇ ಎಂಬ ಪೀಟರ್ ಸನ್ ವಾದವನ್ನು ಅಲ್ಲಗಳೆದ ರಾಯುಡು, ವಿರಾಟ್ ಕೊಹ್ಲಿಯಂತೆ ಆಗಬೇಕು ಎಂಬ ಪ್ರಯತ್ನ ಕೆಲವೊಮ್ಮೆ ಹೊರೆಯಾಗುತ್ತದೆ. ಏಕೆಂದರೆ ಅವರ ಮಟ್ಟವನ್ನು ತಲುಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಆದರೆ ರಜತ್ ಪಾಟಿದಾರ್ ಸಾಧನೆ ಮಾಡಿದ್ದಾರಲ್ಲ ಎಂಬ ಲ್ಯಾಂಜರ್ ಅಭಿಪ್ರಾಯಕ್ಕೂ ಸಹಮತ ವ್ಯಕ್ತಪಡಿಸದ ರಾಯುಡು, "ಪಾಟಿದಾರ್ ಕೇವಲ ಪಾಟಿದಾರ್ ಅಗಿಯೇ ಇರುತ್ತಾರೆ. ವಿರಾಟ್ ಕೊಹ್ಲಿ ಆಗಲು ಸಾಧ್ಯವಿಲ್ಲ. ತಂಡದಲ್ಲಿ 11 ಮಂದಿ ವಿರಾಟ್ ಕೊಹ್ಲಿಯವರು ಇರಲು ಸಾಧ್ಯವಿಲ್ಲ ಎನ್ನುವುದನ್ನು ತಂಡದ ವ್ಯವಸ್ಥಾಪಕರು ಅರ್ಥಮಾಡಿಕೊಳ್ಳಬೇಕು. ಒಬ್ಬ ವಿರಾಟ್ ಕೊಹ್ಲಿ ಹಾಗೂ ತಮ್ಮದೇ ಬಲ ಹಾಗೂ ದೌರ್ಬಲ್ಯಗಳನ್ನು ಹೊಂದಿರುವ ಇತರ 10 ಮಂದಿ ಆಟಗಾರರು ಇರಲು ಸಾಧ್ಯ. ಸಂಪನ್ಮೂಲ ವಿಚಾರದಲ್ಲಿ ಅವರನ್ನು ಬಳಸಿಕೊಳ್ಳುವುದು ಅಗತ್ಯ. ಮೊದಲ ಸೀಸನ್ ನಲ್ಲೇ ಪಂದ್ಯ ಗೆಲ್ಲಬೇಕು ಎಂದು ನಿರೀಕ್ಷಿಸಲಾಗದು. ಮ್ಯಾಚ್ವಿನ್ನರ್ ಆಗಿ ಬೆಳೆಯಲು ಅವಕಾಶ ನೀಡಬೇಕು. ಯುವಕರನ್ನು ಬೆಳೆಸುವ, ಬೆಳೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಕೂಡಾ ತಮ್ಮ ಗುಣಮಟ್ಟವನ್ನು ಸಲೀಸಾಗಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ರಾಯುಡು ಈ ಹಿಂದೆ ಕೂಡಾ ಕೆಕೆಆರ್ ಗೆಲುವಿನ ಸಂದರ್ಭದಲ್ಲಿ ಆರ್ ಸಿಬಿಯನ್ನು ಟೀಕಿಸಿದ್ದರು. ಆರೆಂಜ್ ಕ್ಯಾಪ್ ನಂಥ ವೈಯಕ್ತಿಕ ಗೌರವಗಳು ತಂಡಕ್ಕೆ ಐಪಿಲ್ ಪ್ರಶಸ್ತಿ ಗೆದ್ದುಕೊಡಲಾರವು. ಇದರ ಬದಲು ಸಾಂಘಿಕ ಪ್ರಯತ್ನವಷ್ಟೇ ಯಶಸ್ಸಿನ ರಹದಾರಿ ಎಂದು ಹೇಳಿದ್ದರು. ರಾಯುಡು ಅಭಿಪ್ರಾಯಗಳು ಕ್ರಿಕೆಟ್ ಸಮುದಾಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು. ವೈಯಕ್ತಿಕ ಸಾಧನೆಯನ್ನು ತಂಡದ ಯಶಸ್ಸಾಗಿ ಪರಿವರ್ತಿಸುವಲ್ಲಿ ವಿಫಲವಾದ ಅರ್ಸಿಬಿ ತಂಡದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News