16 ವರ್ಷಗಳ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ವಿಂಡೀಸ್
ಬ್ರಿಜ್ಟೌನ್ (ವೆಸ್ಟ್ ಇಂಡೀಸ್): ಶನಿವಾರ ನಡೆದ ಮಳೆ ಬಾಧಿತ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಇಂಗ್ಲೆಂಡ್ ತಂಡವನ್ನು ಡಕ್ವರ್ತ್-ಲೂಯಿಸ್ ನಿಯಮದ ಆಧಾರದಲ್ಲಿ ನಾಲ್ಕು ವಿಕೆಟ್ ಗಳಿಂದ ಸೋಲಿಸಿದೆ. ಇದರೊಂದಿಗೆ ವೆಸ್ಟ್ ಇಂಡೀಸ್ ಇಂಗ್ಲೆಂಡ್ ತಂಡದ ವಿರುದ್ಧ 16 ವರ್ಷಗಳಲ್ಲೇ ಮೊದಲ ಏಕದಿನ ಸರಣಿಯನ್ನು ಗೆದ್ದಿದೆ.
ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೆಸ್ಟ್ ಇಂಡೀಸ್ 2-1ರಿಂದ ಗೆದ್ದಿದೆ.
ಅದೂ ಅಲ್ಲದೆ, ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಏಕದಿನ ಸರಣಿಯೊಂದನ್ನು ಗೆದ್ದಿರುವುದು 1998ರ ಬಳಿಕ ಇದೇ ಮೊದಲ ಬಾರಿಯಾಗಿದೆ.
ಕೀಚಿ ಕಾರ್ಟಿಯ ಅರ್ಧ ಶತಕ ಮತ್ತು ಮ್ಯಾಥ್ಯೂ ಫೋರ್ಡ್ ಉರುಳಿಸಿದ ಮೂರು ವಿಕೆಟ್ ಗಳು ಆತಿಥೇಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರೋಫಿಯನ್ನು ಸ್ವೀಕರಿಸಿದ ಬಳಿಕ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಅದನ್ನು ಚೊಚ್ಚಲ ಪಂದ್ಯವಾಡಿದ ಮ್ಯಾಥ್ಯೂ ಫೋರ್ಡ್ ಗೆ ಹಸ್ತಾಂತರಿಸಿದರು. “ಫೋರ್ಡ್, ಇದು ನಿಮಗೆ ಸೇರಬೇಕಾಗಿದೆ'' ಎಂದು ಅವರು ಹೇಳಿದರು.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಎದುರಾಳಿಯನ್ನು ಬ್ಯಾಟಿಂಗೆ ಇಳಿಸಿತು. ಮಳೆ ಬಾಧಿತ ಪಂದ್ಯದಲ್ಲಿ, ಇಂಗ್ಲೆಂಡ್ ಬೆನ್ ಡಕೆಟ್ರ ಅರ್ಧ ಶತಕದ ನೆರವಿನಿಂದ 40 ಓವರುಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 206 ರನ್ ಗಳನ್ನು ಗಳಿಸಿತು.
ಬೆನ್ ಡಕೆಟ್ 73 ಎಸೆತಗಳಲ್ಲಿ 71 ರನ್ ಗಳನ್ನು ಗಳಿಸಿದರು. ಬಳಿಕ ತಂಡಕ್ಕೆ ಗಮನಾರ್ಹ ಕೊಡುಗೆ ನೀಡಿದ್ದು 45 ರನ್ ಗಳಿಸಿದ ಲಿಯಮ್ ಲಿವಿಂಗ್ಸ್ಟೋನ್.
ಇಂಗ್ಲೆಂಡ್ ಪರವಾಗಿ ಮ್ಯಾಥ್ಯೂ ಫೋರ್ಡ್ ಮತ್ತು ಅಲ್ಝಾರಿ ಜೋಸೆಫ್ ತಲಾ ಮೂರು ವಿಕೆಟ್ ಗಳನ್ನು ಉರುಳಿಸಿದರು.
ಇನ್ನಷ್ಟು ಮಳೆ ಸುರಿದ ಹಿನ್ನೆಲೆಯಲ್ಲಿ, ವೆಸ್ಟ್ ಇಂಡೀಸ್ ಗೆಲುವಿಗೆ 34 ಓವರುಗಳಲ್ಲಿ 188 ರನ್ ಗಳನ್ನು ಗಳಿಸಬೇಕಾದ ಹೊಸ ಗುರಿಯನ್ನು ನಿಗದಿಪಡಿಸಲಾಯಿತು.
ಕ್ಯಾಸಿ ಕಾರ್ಟಿ (58 ಎಸೆತಗಳಲ್ಲಿ 50 ರನ್) ಮತ್ತು ಆರಂಭಿಕ ಆಟಗಾರ ಅಲಿಕ್ ಅಲ್ತನಾಝ್ (51 ಎಸೆತಗಳಲ್ಲಿ 45 ರನ್) 75 ರನ್ ಗಳ ಭವ್ಯ ಭಾಗೀದಾರಿಕೆಯನ್ನು ನಿಭಾಯಿಸಿದರು.
ಆದರೂ, ಇಂಗ್ಲೆಂಡ್ ಸ್ಪಿನ್ನರ್ ವಿಲ್ ಜಾಕ್ಸ್ (3-22) ದಾಳಿಗೆ ಇಳಿದಾಗ ವೆಸ್ಟ್ ಇಂಡೀಸ್ನ ಮಧ್ಯಮ ಕ್ರಮಾಂಕವು ಕುಸಿತಕ್ಕೆ ಒಳಗಾಯಿತು. ಜಾಕ್ಸ್ ಮೂರು ಪ್ರಮುಖ ವಿಕೆಟ್ ಗಳನ್ನು ಉರುಳಿಸಿದರು. ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ ಒಂದು ವಿಕೆಟ್ ನಷ್ಟಕ್ಕೆ 78 ಇದ್ದಲ್ಲಿಂದ 6 ವಿಕೆಟ್ ನಷ್ಟಕ್ಕೆ 135ಕ್ಕೆ ಕುಸಿಯಿತು.
ಆದರೆ, ಬಳಿಕ ರೊಮಾರಿಯೊ ಶೆಫರ್ಡ್ ತಂಡದ ರಕ್ಷಣೆಗೆ ಧಾವಿಸಿದರು. ಅವರು 28 ಎಸೆತಗಳಲ್ಲಿ 41 ರನ್ ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು.
ಅದರೊಂದಿಗೆ ವೆಸ್ಟ್ ಇಂಡೀಸ್ ಇನ್ನೂ 14 ಎಸೆತಗಳು ಬಾಕಿಯಿರುವಂತೆಯೇ ಗೆಲುವನ್ನು ಘೋಷಿಸಿತು. ಅದು 6 ವಿಕೆಟ್ ಗಳ ನಷ್ಟಕ್ಕೆ 191 ರನ್ ಗಳಿಸಿತು.
ಮ್ಯಾಥ್ಯೂ ಫೋರ್ಡ್ 13 ರನ್ ಗಳಿಸಿ ಅಜೇಯರಾಗಿ ಉಳಿದರು.