ಮುಹಮ್ಮದ್ ಶಮಿ ತಮ್ಮ ತವರು ರಾಜ್ಯದ ಪರ ಎಂದೂ ಆಡಿಲ್ಲವೇಕೆ?
ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ಪರ ಸಾಧನೆ ಮಾಡಿದ ತಾರಾ ಆಟಗಾರರ ಪೈಕಿ ಮುಹಮ್ಮದ್ ಶಮಿ ಕೂಡಾ ಒಬ್ಬರು. ಈ ಬಾರಿಯ ವಿಶ್ವಕಪ್ನಲ್ಲಿ ಅವರು ಅತ್ಯಧಿಕ 24 ವಿಕೆಟ್ ಕಿತ್ತರು. ಮುಹಮ್ಮದ್ ಶಮಿಯ ಕುರಿತ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ, ಅವರು ಭಾರತ ತಂಡದ ಪರ ಮೊದಲ ಐದು ಪಂದ್ಯಗಳಲ್ಲಿ ಆಟವನ್ನೇ ಆಡಿರಲಿಲ್ಲ. ಆದರೆ, ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ತಂಡಕ್ಕೆ ಸೇರ್ಪಡೆಯಾದ ಮುಹಮ್ಮದ್ ಶಮಿ, ಅದ್ಭುತವಾದ ಸಾಧನೆಯನ್ನೇ ಮಾಡಿದರು. ಈ ವಿಶ್ವಕಪ್ ಕ್ರೀಡಾಕೂಟದಲ್ಲಿ 7 ವಿಕೆಟ್ ಕಿತ್ತ ಸಾಧನೆಯನ್ನೂ ಮಾಡಿದ ಅವರು, ಏಕದಿನ ಪಂದ್ಯಗಳಲ್ಲಿ ಅಂತಹ ಸಾಧನೆ ಮಾಡಿದ ಪ್ರಪ್ರಥಮ ಭಾರತೀಯ ಬೌಲರ್ ಎಂಬ ಹಿರಿಮೆಗೂ ಭಾಜನರಾದರು ಎಂದು ndtv.com ವರದಿ ಮಾಡಿದೆ.
ಹಲವಾರು ಭಾರತೀಯ ಕ್ರಿಕೆಟ್ ಪಟುಗಳಂತೆ ಮುಹಮ್ಮದ್ ಶಮಿ ಪಾಲಿಗೂ ಆರಂಭಿಕ ದಿನಗಳು ಅಷ್ಟೇನೂ ಆಹ್ಲಾದಕರವಾಗಿರಲಿಲ್ಲ. ಅವರ ತವರು ರಾಜ್ಯ ಉತ್ತರ ಪ್ರದೇಶವಾಗಿದ್ದರೂ, ಅವರು ತಮ್ಮ ದೇಶೀಯ ಕ್ರಿಕೆಟ್ ಆಡಿದ್ದು ಮಾತ್ರ ಪಶ್ಚಿಮ ಬಂಗಾಳ ತಂಡದ ಪರವಾಗಿ.
ಖಾಸಗಿ ಯೂಟ್ಯೂಬ್ ವಾಹಿನಿಗೆ ಇತ್ತೀಚೆಗೆ ಸಂದರ್ಶನ ನೀಡಿರುವ ಮುಹಮ್ಮದ್ ಶಮಿ, ನಾನು ಯುವ ಆಟಗಾರನಾಗಿದ್ದಾಗ ನಾನು ನಿರಾಕರಿಸಲ್ಪಟ್ಟಿದ್ದೆ. ಉತ್ತರ ಪ್ರದೇಶ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುವಾಗ, ನನ್ನ ಸಹೋದರ ಉತ್ತರ ಪ್ರದೇಶದ ಮುಖ್ಯ ಆಯ್ಕೆದಾರರೊಂದಿಗೆ ಮಾತನಾಡಿದನಾದರೂ, ಅವರ ಉತ್ತರ ನಮ್ಮಿಬ್ಬರನ್ನೂ ಸ್ತಂಭೀಭೂತರನ್ನಾಗಿಸಿತು ಎಂದು ಬಹಿರಂಗಪಡಿಸಿದ್ದಾರೆ.
“ಒಂದು ವೇಳೆ ನನ್ನ ಕುರ್ಚಿಯನ್ನು ನೀನು ಕದಲಿಸಲು ಸಾಧ್ಯವಾದರೆ, ನಿನ್ನ ಸಹೋದರನನ್ನು ಆಯ್ಕೆ ಮಾಡುತ್ತೇನೆ ಎಂದು ಉತ್ತರ ಪ್ರದೇಶ ತಂಡದ ಮುಖ್ಯ ಆಯ್ಕೆಗಾರರು ನನ್ನ ಸಹೋದರನಿಗೆ ಸವಾಲು ಒಡ್ಡಿದರು. ಇದರಿಂದ ಸಿಟ್ಟಿಗೆದ್ದ ನನ್ನ ಸಹೋದರ, ನಾನು ನಿಮ್ಮ ಕುರ್ಚಿಯನ್ನು ಕದಲಿಸುವುದನ್ನು ಮರೆತು ಬಿಡಿ. ನಾನು ನಿಮ್ಮ ಕುರ್ಚಿಯನ್ನೇ ಬುಡಮೇಲು ಮಾಡಬಲ್ಲೆ. ನನ್ನ ಬಳಿ ಅಷ್ಟು ಶಕ್ತಿಯಿದೆ” ಎಂದು ಉತ್ತರಿಸಿದ್ದ. ಆದರೆ, ನನಗೆ ಅದೆಲ್ಲ ಬೇಕಿರಲಿಲ್ಲ. ನನ್ನಲ್ಲಿ ಸಾಮರ್ಥ್ಯವಿದ್ದರೆ ನಾನು ಆಯ್ಕೆಯಾಗುತ್ತೇನೆ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ, ಸಾಮರ್ಥ್ಯ ಹೊಂದಿರುವ ಜನರು ಇಲ್ಲಿ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ನನ್ನ ಸಹೋದರನಿಗೆ ಹೇಳಲಾಯಿತು. ಆಗ ಅರ್ಜಿಯನ್ನು ಹರಿದೆಸೆದ ನನ್ನ ಸಹೋದರನು, ಇನ್ನು ಮುಂದೆ ನಾವು ಉತ್ತರ ಪ್ರದೇಶ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರಿಗೆ ಹೇಳಿದ. ಉತ್ತರ ಪ್ರದೇಶ ಕ್ರಿಕೆಟ್ ನಲ್ಲಿ ಅದೇ ನನ್ನ ಕೊನೆಯ ದಿನವಾಯಿತು” ಎಂದು ಮುಹಮ್ಮದ್ ಶಮಿ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದಾರೆ.