ಆಸಿಸ್ ವಿರುದ್ಧದ 2ನೇ ಟೆಸ್ಟ್ ಗೆ ವ್ಯಾಗ್ನರ್ ನಿವೃತ್ತಿಯಿಂದ ಮರಳುವರೇ?
ವೆಲಿಂಗ್ಟನ್ : ನ್ಯೂಝಿಲ್ಯಾಂಡ್ ನ ವೇಗಿ ವಿಲ್ ಓ’ರೂರ್ಕ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯ ವಿರುದ್ಧದ ಎರಡನೇ ಹಾಗೂ ಕೊನೆಯ ಟೆಸ್ಟ್ ನಲ್ಲಿ ಆಡುವಂತೆ ನಿವೃತ್ತ ವೇಗಿ ನೀಲ್ ವ್ಯಾಗ್ನರ್ ಗೆ ತಂಡವು ಕರೆ ನೀಡುವ ಸಾಧ್ಯತೆಯಿದೆ.
ಮೊದಲ ಟೆಸ್ಟ್ ನಲ್ಲಿ ಆತಿಥೇಯ ತಂಡವು ರವಿವಾರ 172 ರನ್ ಗಳ ಬೃಹತ್ ಸೋಲನುಭವಿಸಿ ಜರ್ಝರಿತವಾಗಿದೆ.
ವ್ಯಾಗ್ನರ್ ಗೆ ತಂಡದ ಬಾಗಿಲು ಮುಚ್ಚಿಲ್ಲ ಎಂದು ನಾಯಕ ಟಿಮ್ ಸೌತೀ ಹೇಳಿದ್ದಾರೆ. ವ್ಯಾಗ್ನರ್ ಕಳೆದ ವಾರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಣ್ಣೀರ ವಿದಾಯ ಕೋರಿದ್ದರು. ಅವರು 64 ಟೆಸ್ಟ್ ಪಂದ್ಯಗಳಲ್ಲಿ ಆಡಿ 260 ವಿಕೆಟ್ ಗಳನ್ನು ಗಳಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಆಡಲು ತನಗೆ ಅವಕಾಶ ನೀಡಲಾಗುವುದಿಲ್ಲ ಎನ್ನುವುದನ್ನು ಅರಿತು ದಕ್ಷಿಣ ಆಫ್ರಿಕ ಸಂಜಾತ ವೇಗಿ ನಿವೃತ್ತಿ ಘೋಷಿಸಿದ್ದರು.
“ಈ ವಿಷಯದಲ್ಲಿ ನಾವು ಸಾಕಷ್ಟು ಮಾತುಕತೆಗಳನ್ನು ಇನ್ನೂ ನಡೆಸಿಲ್ಲ. ವಿಲ್ ಓ’ರೂರ್ಕ್ರ ಸ್ಥಿತಿ ಏನು ಎನ್ನುವುದನ್ನು ಅರಿತು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಮುಂದಿನ ಎರಡು ದಿನಗಳಲ್ಲಿ ವಿಲ್ ಹೇಗೆ ಚೇತರಿಸುತ್ತಾರೆ ಎನ್ನುವುದನ್ನು ನಾವು ಗಮನಿಸುತ್ತೇವೆ ಮತ್ತು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ’’ ಎಂದರು.