ವಿಶ್ವಕಪ್ ಕ್ರಿಕೆಟ್ 2023: ಫೈನಲ್ ಪಂದ್ಯಕ್ಕೂ ಮುನ್ನ ‘ಶುಭ್’ರ ಬಾಲ್ಯವನ್ನು ಸ್ಮರಿಸಿದ ಅಜ್ಜ-ಅಜ್ಜಿಯರು

Update: 2023-11-19 07:50 GMT

Photo :PTI,indianexpress.com

ಹೊಸದಿಲ್ಲಿ: ಮೋಡ ಮುಸುಕಿದ ನವೆಂಬರ್ ತಿಂಗಳಲ್ಲಿ ಎಳೆ ಬಿಸಿಲನ್ನು ಆಸ್ವಾದಿಸುತ್ತಾ, ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಹಾಕಿರುವ ಮಂಚದ ಮೇಲೆ ಒರಗಿಕೊಂಡಿದ್ದ 87 ವರ್ಷದ ಸರ್ದಾರ್ ದೀದರ್ ಸಿಂಗ್, ತಮ್ಮ ಮೊಮ್ಮಗ ಶುಭಮನ್ ಗಿಲ್ ವಿಶ್ವಕಪ್ ನಲ್ಲಿ ಬೌಲರ್ ಗಳ ಬಾಲನ್ನು ದಂಡಿಸುತ್ತಿರುವ ವಿಡಿಯೊವೊಂದನ್ನು ವೀಕ್ಷಿಸುತ್ತಿದ್ದರು. ಅದು ಅವರ ಪಾಲಿಗೆ ಸಮಯ ಕಳೆಯುವ ಅಚ್ಚುಮೆಚ್ಚಿನ ಹವ್ಯಾಸವಾಗಿದೆ ಎಂದು indianexpress.com ವರದಿ ಮಾಡಿದೆ.

ಪಾಕಿಸ್ತಾನದ ಗಡಿಯಿಂದ 8 ಕಿಮೀ ದೂರವಷ್ಟೇ ಇರುವ ಪಂಜಾಬ್ ನ ಗ್ರಾಮವೊಂದರಲ್ಲಿ ನೆಲೆಸಿರುವ ತೆಳ್ಳಗೆ, ನೇರ ನಿಲುವಿನ ಈ ರೈತ, ಶುಭಮನ್ ಗಿಲ್ ತಮಗೆ ಮೂರು ವರ್ಷ ವಯಸ್ಸಾಗಿದ್ದಾಗಲೇ ಹೇಗೆ ಬ್ಯಾಟ್ ಬಗ್ಗೆ ವ್ಯಾಮೋಹ ಬೆಳೆಸಿಕೊಂಡಿದ್ದರು ಎಂಬುದನ್ನು ವಿವರಿಸಿದರು.

ವಿಸ್ತಾರವಾದ ಗ್ರಾಮೀಣ ಮನೆಯನ್ನು ಹೊಂದಿರುವ ಭೂಮಾಲಕ ಗಿಲ್ ಕುಟುಂಬದಲ್ಲಿ ಎಲ್ಲ ಬಗೆಯ ಆಧುನಿಕ ಸಾಧನಗಳಿವೆ. ಆದರೆ, ಭಾರತದ ಬ್ಯಾಟಿಂಗ್ ತಾರೆಯಾಗಿ ಬೆಳೆದು ನಿಂತಿರುವ, ರವಿವಾರ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾರೊಂದಿಗೆ ಬ್ಯಾಟಿಂಗ್ ಆರಂಭಿಸಲಿರುವ ಶುಭಮನ್ ಗಿಲ್ ಬಗ್ಗೆ ಅವರ 75 ವರ್ಷದ ಅಜ್ಜಿ ಗುರ್ಮೈಲ್ ಅವರಿಗೆ ಮಾತ್ರ ಶುಭಮನ್ ಗಿಲ್ ರ ಬಾಲ್ಯದ ನೆನಪುಗಳು ಬಿಡಿಬಿಡಿಯಾಗಿ ಇವೆ.

“ಬಹುಶಃ ಆತ ಆರು ವರ್ಷದವನಿರಬಹುದು ಅನ್ನಿಸುತ್ತದೆ. ಆ ಹೊತ್ತಿಗಾಗಲೇ ಆತ ಅಡುಗೆ ಕೋಣೆಯಲ್ಲಿ ಸಾಕಷ್ಟು ಹಾನಿ ಮಾಡಿದ್ದ. ಅದಕ್ಕೆ ಆತನ ಅಜ್ಜಿಯು ಈತನನ್ನು ಕ್ರಿಕೆಟಿಗನನ್ನಾಗಿಸಿ ಎಂದು ಸಲಹೆ ನೀಡಿದ್ದರು. ಅದರ ಮುಂದಿನ ವಾರ ನಾನು ಜಲಂಧರ್ ನಲ್ಲಿ ರೈತ ಸಂಘಟನೆಯ ಸಭೆಯಲ್ಲಿ ಭಾಗವಹಿಸಲು ತೆರಳಿದ್ದೆ. ಅಲ್ಲಿಂದ ನಾನು ಒಂದು ನೆಟ್, ಮೂರು ಬ್ಯಾಟ್ ಗಳು, ಪ್ಯಾಡ್ ಗಳು ಹಾಗೂ ಒಂದು ಡಝನ್ ಲೆದರ್ ಬಾಲ್ ತಂದಿದ್ದೆ” ಎಂದು ದೀದರ್ ಸ್ಮರಿಸಿಕೊಳ್ಳುತ್ತಾರೆ. ತಮ್ಮ ಮನೆಯಲ್ಲಿದ್ದ ಹಲವರು ಚಂಡೀಗಢಕ್ಕೆ ಸ್ಥಳಾಂತರಗೊಂಡರೂ, ಅವರೊಂದಿಗೆ ತೆರಳಲು ನಿರಾಕರಿಸಿದ ದೀದರ್, ಈಗಲೂ ತಮ್ಮ ಪತ್ನಿಯೊಂದಿಗೆ ತಮ್ಮ ಸ್ವಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ತಮ್ಮ ಸ್ವಗ್ರಾಮದಲ್ಲಿ ಉಳಿದಿರುವುದಕ್ಕೆ ಹರ್ಷ ವ್ಯಕ್ತಪಡಿಸುವ ದೀದರ್, ವಿಶ್ವದಾದ್ಯಂತ ಪ್ರಸಾರವಾಗುವ ತಮ್ಮ ಮೊಮ್ಮಗನ ಬ್ಯಾಟಿಂಗ್ ಅನ್ನು ಟಿವಿಯ ಮೂಲಕವೇ ಕಣ್ತುಂಬಿಕೊಳ್ಳುತ್ತಾರೆ.

ರವಿವಾರ ಅವರ ಪಾಲಿಗೆ ವಿಭಿನ್ನವಾಗಿದ್ದು, ಗುರ್ಮೈಲ್ ಈಗಾಗಲೇ ಕಾರ್ಯತಂತ್ರವನ್ನೂ ರೂಪಿಸಿಕೊಂಡಿದ್ದಾರೆ. “ನಾನೀಗಾಗಲೇ ನನ್ನ ಪತಿಗೆ ಒಮ್ಮೆ ಪಂದ್ಯ ಪ್ರಾರಂಭವಾದರೆ ನನ್ನ ಕುರ್ಚಿಯನ್ನು ಬಿಟ್ಟೇಳುವುದಿಲ್ಲ ಎಂದು ಹೇಳಿದ್ದೇನೆ. ಅವರು ತಮಗೆ ತಾವೇ ಟೀ ಮಾಡಿಕೊಳ್ಳಬೇಕು” ಎಂದು ತುಂಟತನದ ಮಾತಾಡಿದರು.

ಹಾಗಂತ ಶುಭಮನ್ ಗಿಲ್ ರ ಅಜ್ಜ-ಅಜ್ಜಿ ಅವರ ಆಟವನ್ನು ನೇರವಾಗಿ ನೋಡಿಯೇ ಇಲ್ಲವೆಂದಲ್ಲ. ಹಿಂದೆ ಅಹಮದಾಬಾದ್ ನಲ್ಲಿ ನಡೆದಿದ್ದ ಐಪಿಲ್ ಫೈನಲ್ ಪಂದ್ಯ ವೀಕ್ಷಿಸಲು ಅಲ್ಲಿಗೆ ತೆರಳಿದ್ದರಾದರೂ, ಅವರಿಗಲ್ಲಿ ಒಳ್ಳೆಯ ಅನುಭವವಾಗಿರಲಿಲ್ಲ. “ನಾವು ಆತನ ಮುಖವನ್ನು ಸರಿಯಾಗಿ ನೋಡಲಾಗಲಿಲ್ಲ” ಎಂದು ಹೇಳುವ ಗುರ್ಮೈಲ್, ಟಿವಿಯಲ್ಲೇ ಆತನ ಮುಖ ಸ್ಪಷ್ಟವಾಗಿ ಕಾಣುತ್ತದೆ ಎಂಬುದನ್ನು ಹೇಳಲು ಮರೆಯಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News