ಸದ್ಯಕ್ಕೆ ಹೊಸ ಎಪಿಎಲ್, ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ: ಸಚಿವ ಕೆ.ಎಚ್​.ಮುನಿಯಪ್ಪ

Update: 2023-08-18 12:37 GMT

ಬೆಂಗಳೂರು, ಆ.17: ಮತ್ತಷ್ಟು ದಿನಗಳ ಕಾಲ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯಕ್ಕೆ ಎಪಿಎಲ್, ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲ್ಲ. ಯಾಕೆ ಎಂಬುದಕ್ಕೆ ಸದ್ಯದಲ್ಲಿಯೇ ಕಾರಣವನ್ನು ಹೇಳುತ್ತೇವೆ. ಇನ್ನೂ, ಮುಂದಿನ ತಿಂಗಳು ಅನ್ನಭಾಗ್ಯದಡಿ 5 ಕೆಜಿ ಅಕ್ಕಿ ವಿತರಿಸುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ಮುಂದುವರೆದಿದೆ. ಸದ್ಯಕ್ಕೆ ಅಕ್ಕಿ ಕೊಡಲು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮುಂದೆ ಬಂದಿವೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯಡಿ ನೀಡುವ ಆಹಾರ ಪದಾರ್ಥಗಳಾದ ಅಕ್ಕಿ, ರಾಗಿ, ಜೋಳದ ಗುಣಮಟ್ಟ ಪರಿಶೀಲಿಸಿ 15 ದಿನ ವಿಳಂಬವಾದರೂ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಿ ಅಕ್ಕಿ ಬಳಕೆ ಮಾಡುವುದಿಲ್ಲವೋ ಅಲ್ಲಿ ರಾಗಿ ಅಥವಾ ಜೋಳ ಪೂರೈಕೆ ಮಾಡಲು ಚರ್ಚೆ ನಡೆದಿದೆ. ಎಲ್ಲೆಲ್ಲಿ ರಾಗಿ ಎಷ್ಟು ಬಳಸುತ್ತಾರೋ ಜೋಳ ಬಳಕೆಯ ಮಾಹಿತಿ ಪಡೆದು, ಅದಕ್ಕನುಸಾರವಾಗಿ ಅಕ್ಕಿ ಬದಲಿಗೆ ಪೂರೈಕೆ ಮಾಡಲು ಮಾರ್ಗದರ್ಶನ ನೀಡಲಾಗಿದೆ. ಎಲ್ಲೆಲ್ಲಿ ಜೋಳ,ರಾಗಿ, ಅಕ್ಕಿ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.

ಡಿಬಿಟಿ ವಿಷಯದಲ್ಲಿ ಕಳೆದ ತಿಂಗಳು ಹಣ ಪಾವತಿಗೆ ತಡವಾಯಿತು. ಈ ತಿಂಗಳ ಆ.25, 26ರೊಳಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ. ರಾಜ್ಯದಲ್ಲಿರುವ 1.28 ಕೋಟಿ ಕಾರ್ಡುಗಳ ಪೈಕಿ 1 ಕೋಟಿ ಚೀಟಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಉಳಿದಂತೆ, ಸುಮಾರು 21 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆ ಹೊಂದಾಣಿಕೆ ಆಗುತ್ತಿಲ್ಲ. ಆ ಪೈಕಿ 7 ಲಕ್ಷ ಕಾರ್ಡುಗಳ ಸಮಸ್ಯೆ ಸರಿಪಡಿಸಲಾಗಿದೆ ಎಂದು ಮುನಿಯಪ್ಪ ಮಾಹಿತಿ ನೀಡಿದರು.

2,181 ಹುದ್ದೆಗಳ ಭರ್ತಿಗೆ ಸೂಚನೆ

ಆಹಾರ ಇಲಾಖೆಯಲ್ಲಿ ಖಾಲಿ ಇರುವ 2,181 ಹುದ್ದೆಗಳ ಭರ್ತಿಗೆ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ, ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಆಹಾರ ಇಲಾಖೆ ಕಚೇರಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News