ಸಚಿವೆಯರ ದೇಹದ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿದ ಆರೋಪ: ವಿಶ್ವೇಶ್ವರ ಭಟ್‌ ವಿರುದ್ಧ ಪ್ರಕರಣ ದಾಖಲು

Update: 2023-08-24 13:42 GMT

ಬೆಂಗಳೂರು: ಮಹಿಳೆಯರ ವಸ್ತ್ರಧಾರಣೆಯ ಬಗ್ಗೆ ಅವಹೇಳನಕಾರಿ ಫೇಸ್ಬುಕ್‌ ಪೋಸ್ಟ್‌ ಹಾಕಿದ್ದ ಅರೋಪದಲ್ಲಿ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣುಮಕ್ಕಳ ವಸ್ತ್ರಧಾರಣೆಯ ಬಗ್ಗೆ ಓದುಗರೊಬ್ಬರಿಗೆ ಫೇಸ್‌ ಬುಕ್‌ ನಲ್ಲಿ ನೀಡಲಾದ ಸಲಹೆಯಲ್ಲಿ ವಿಶ್ವೇಶ್ವರ್‌ ಭಟ್‌ ಅವರು ಲೇಖಕಿಯರು ಹಾಗೂ ಸಚಿವೆಯರ ಬಗ್ಗೆ ‘ಬಾಡಿ ಶೇಮಿಂಗ್‌’ ಹಾಗೂ ಮಹಿಳಾ ವಿರೋಧಿ ಪೋಸ್ಟ್‌ ಹಾಕಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕೆ ಟೀಕೆ ವ್ಯಕ್ತವಾಗಿತ್ತು.

ವಿಶ್ವೇಶ್ವರ ಭಟ್‌ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾನೂನು ವಿಭಾಗದ ಉಪಾಧ್ಯಕ್ಷರಾದ ವಕೀಲ ಮಂಜುನಾಥ ನಾಯಕ್ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ʻʻಮಮತಾ ಬ್ಯಾನರ್ಜಿ, ಮೋಟಮ್ಮಾ, ಲಕ್ಷ್ಮೀ ಹೆಬ್ಬಾಳ್ಕರ್‌, ಸೌಮ್ಯಾ ರೆಡ್ಡಿ ಮೊದಲಾದ ಮಹಿಳಾ ನಾಯಕರನ್ನು ಉಲ್ಲೇಖಿಸಿರುವ ವಿಶ್ವೇಶ್ವರ್‌ ಭಟ್‌ “ಇವರು ಅಂಥ ಡ್ರೆಸ್ (ಬಿಗಿಯಾದ ಉಡುಪು) ಧರಿಸಿದರೆ, ಬರಿಗಣ್ಣಿನಿಂದ ನೋಡಲು ಸಾಧ್ಯವಾ?” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. 

“ಹೆಣ್ಣುಮಕ್ಕಳು ಯಾವ ಡ್ರೆಸ್ಸನ್ನೂ ಬಹಳ ದಿನಗಳ ಕಾಲ ಇಷ್ಟಪಡುವುದಿಲ್ಲ. ಅಂದರೆ ಟೈಟ್ ಡ್ರೆಸ್ಸನ್ನು ಯಾವತ್ತೂ ಧರಿಸುವುದಿಲ್ಲ. ಆಗೊಮ್ಮೆ-ಈಗೊಮ್ಮೆ ಧರಿಸಿದಾಗ, ಮನೆಯಲ್ಲಿ 'ಸದನ ಸದೃಶ' ವಾತಾವರಣ ನಿರ್ಮಿಸಬಾರದು. ಕೆಲ ದಿನಗಳ ಬಳಿಕ ಮಗಳಿಗೆ ನೀವು ಅಂಥ ಡ್ರೆಸ್ ಧರಿಸು ಅಂದರೂ ಧರಿಸುವುದಿಲ್ಲ. ಅಷ್ಟಕ್ಕೂ ಆ ವಯಸ್ಸಿನ ಮಕ್ಕಳು ಟೈಟ್ ಡ್ರೆಸ್ ಧರಿಸಿದರೇ ಚೆಂದ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ, ಶೋಭಾ ಕರಂದ್ಲಾಜೆ, ಉಚಾ ಕತ್ತೆಮನೆ, ಪ್ರತಿಭಾ ನಂದಕುಮಾರ, ಮೋಟಮ್ಮ, ಮಮತಾ ಬ್ಯಾನರ್ಜಿ ಅಂಥ ಡ್ರೆಸ್ ಧರಿಸಿದರೆ ಬರಿಗಣ್ಣಿನಿಂದ ನೋಡಲು ಸಾಧ್ಯವಾ?” ಎಂದು ವಿಶ್ವೇಶ್ವರ್‌ ಭಟ್‌ ತಮ್ಮ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದರು. 

 

 

 

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News