2028ರಲ್ಲೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ: ಡಿ.ಕೆ. ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಶಕ್ತಿ ತುಂಬಲು ಅನೇಕ ಕಾರ್ಯಕ್ರಮ ರೂಪಿಸಿದೆ. ಪಕ್ಷದ ಆಚಾರ, ವಿಚಾರ ಹಾಗೂ ಯೋಜನೆಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡಿ, ಆಗ 2028ರಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳ ಫಲಾನುಭವಿಗಳಿಗೆ ಕಾಂಗ್ರೆಸ್ ಸರಕಾರದ ಕೊಡುಗೆಗಳನ್ನು ಮನದಟ್ಟು ಮಾಡಿ. ಆ ಮೂಲಕ ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿ. ಆಗ ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ 2028ಕ್ಕೆ ನಮ್ಮದೇ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ಶಿವಕುಮಾರ್ ತಿಳಿಸಿದರು.
ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು. ನಮ್ಮ ಗುರಿ 2028ರ ಚುನಾವಣೆ. ಆನಂತರ 2029ರ ಚುನಾವಣೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕು. ನಾನು ಎಷ್ಟು ದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಇರುತ್ತೇನೋ ಗೊತ್ತಿಲ್ಲ. ಆದರೆ ಅಧಿಕಾರದಲ್ಲಿ ಇರುವಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಶಿವಕುಮಾರ್ ತಿಳಿಸಿದರು.
ಯಾವ ರೀತಿ ರಾಜಕಾರಣ ಮಾಡಬೇಕು, ಅವರು ಏನೇ ಚದುರಂಗ ಆಟವಾಡಿದರೂ ಹೇಗೆ ಚೆಕ್ ಮೇಟ್ ನೀಡಬೇಕು ಎಂದು ನನಗೆ ಗೊತ್ತಿದೆ. ನೀವು ಪಂಚಾಯ್ತಿ, ಬೂತ್ ಮಟ್ಟದಲ್ಲಿ ಮಹಿಳೆಯರನ್ನು ಸಂಘಟನೆ ಮಾಡಿ. ಮತ್ತೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಯಾಕೆ ಬರುವುದಿಲ್ಲ ನೋಡುತ್ತೇನೆ ಎಂದು ಅವರು ತಿಳಿಸಿದರು.
ಮಹಿಳೆ ಹುಟ್ಟುತ್ತಲೇ ನಾಯಕತ್ವ ಗುಣ ಹೊಂದಿರುತ್ತಾಳೆ ಎಂದು ನಾವು ‘ನಾ ನಾಯಕಿ’ ಕಾರ್ಯಕ್ರಮ ಮಾಡಿದ್ದೇವೆ. ನೀವು ರಾಜಕೀಯಕ್ಕೆ ಬರಲು ಎಷ್ಟು ಕಷ್ಟವಿದೆ ಎಂದು ನನಗೆ ಅರಿವಿದೆ. ಮುಂದೆ ಮಹಿಳೆಯರಿಗೆ ರಾಜಕೀಯ ಮೀಸಲಾತಿ ದೊರೆಯಲಿದ್ದು, ಅದಕ್ಕೆ ನಾನು ಅಡಿಪಾಯ ಹಾಕಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ನಾವು ನಾಲ್ಕೈದು ಹೆಸರು ಚರ್ಚೆ ಮಾಡಿದ್ದೆವು. ನಾನು ಸೌಮ್ಯಾರೆಡ್ಡಿ ಹೆಸರು ಸೂಚಿಸುವಾಗ ಆಕೆಯ ಜತೆಗಾಗಲಿ, ಅವರ ತಂದೆ ರಾಮಲಿಂಗಾ ರೆಡ್ಡಿ ಅವರ ಜತೆಗಾಗಲಿ ಚರ್ಚೆ ಮಾಡಲಿಲ್ಲ. ಸೌಮ್ಯಾ ರೆಡ್ಡಿ ಲೋಕಸಭೆ ಟಿಕೆಟ್ ಕೇಳಿರಲಿಲ್ಲ. ನಾನು, ಮುಖ್ಯಮಂತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಲವಂತ ಮಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದೆವು ಎಂದು ಅವರು ತಿಳಿಸಿದರು.
ಸೌಮ್ಯಾರೆಡ್ಡಿಯನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅನೇಕರು ಟೀಕೆ ಮಾಡಿದರು. ಆದರೂ ನೀಡಿದ್ದೇವೆ. ಕಾರಣ ಬೆಂಗಳೂರಿನಲ್ಲಿ ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ. ಪಕ್ಷಕ್ಕಾಗಿ ಅವರಿಗೆ ಜವಾಬ್ದಾರಿ ನೀಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನಾವು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಸರಕಾರ ಹಾಗೂ ಪಕ್ಷದ ವತಿಯಿಂದ ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ. ಈಗಾಗಲೇ ಗಾಂಧಿ ಭಾರತ ಹಾಗೂ ಗಾಂಧಿ ನಡಿಗೆ ಕಾರ್ಯಕ್ರಮ ನಡೆಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ನಮ್ಮ ಗ್ಯಾರಂಟಿ ಯೋಜನೆಯಿಂದ ದೇಶ ನಾಶವಾಗುತ್ತದೆ ಎಂದು ಹೇಳುತ್ತಿದ್ದ ಬಿಜೆಪಿಯವರು ಬೇರೆ ರಾಜ್ಯಗಳ ಚುನಾವಣೆಯಲ್ಲಿ ಘೋಷಣೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಮೂರು ತಿಂಗಳು ಹಣವನ್ನು ಹಾಕಿದ್ದಾರೆ. ನಾವು ಮಹಿಳೆಯರಿಗೆ ನೀಡಿರುವ ಕಾರ್ಯಕ್ರಮವನ್ನು ಜನರಿಗೆ ತಲುಪಿಸಬೇಕು. ಇದಕ್ಕೆ ರಚಿಸಿರುವ ಸಮಿತಿಗೆ ಪುಷ್ಪಾ ಅಮರನಾಥ್ ಉಪಾಧ್ಯಕ್ಷರಾಗಿದ್ದಾರೆ. ನೀವು ಜನರಿಗೆ ಈ ಯೋಜನೆಗಳ ಬಗ್ಗೆ ಪದೇ ಪದೆ ವಿಚಾರ ತಿಳಿಸಿ ಕಾಂಗ್ರೆಸ್ ಪಕ್ಷದ ಕಡೆ ಅವರ ಒಲವು ಮೂಡುವಂತೆ ಮಾಡಬೇಕು ಎಂದು ಶಿವಕುಮಾರ್ ಸೂಚಿಸಿದರು. ಮಹಿಳಾ ಕಾಂಗ್ರೆಸ್ ಸದಸ್ಯತ್ವವನ್ನು ಯಾರು ಹೆಚ್ಚಿಗೆ ಮಾಡುತ್ತೀರೋ ಅವರಿಗೆ ಸ್ಥಾನಮಾನ ನೀಡಲಾಗುವುದು. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರ ನೀಡುತ್ತಿದ್ದೇವೆ. ಪ್ರತಿ ಮೂವರಲ್ಲಿ ಓಬ್ಬ ಮಹಿಳೆಗೆ ಅಧಿಕಾರ ನೀಡಲು ಸಿಎಂ ಹಾಗೂ ನಾನು ತೀರ್ಮಾನಿಸಿದ್ದೇವೆ. ಬ್ಲಾಕ್ ಮಟ್ಟದಿಂದ ಮಂತ್ರಿ ಸ್ಥಾನದವರೆಗೆ ಬೆಳೆಯಲು ನಿಮಗೆ ಸಾಮಥ್ರ್ಯವಿದೆ. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮೋನೋತ್ಸವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 100 ಬ್ಲಾಕ್ ಮಟ್ಟದ ಕಾಂಗ್ರೆಸ್ ಕಚೇರಿ ನಿರ್ಮಿಸಲು ತೀರ್ಮಾನ ಮಾಡಿದ್ದೇವೆ. ಸಚಿವರು, ಶಾಸಕರಿಗೆ ಜವಾಬ್ದಾರಿ ವಹಿಸಿದ್ದೇನೆ. ಈ ಕಚೇರಿಗಳು ನಮ್ಮ ಪಾಲಿಗೆ ದೇವಾಲಯವಾಗಿದೆ. ಅವುಗಳ ನಿರ್ಮಾಣದ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಅವರು ಹೇಳಿದರು.
ಸೌಮ್ಯಾರೆಡ್ಡಿ ಶುಭಗಳಿಗೆಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಕಾಂಗ್ರೆಸ್ ಪಕ್ಷ ಯಾವುದೇ ಕಾರ್ಯಕ್ರಮ ಮಾಡಿದರು ಅದು ಮಹಿಳೆಯರ ಪರವಾದ ಯೋಜನೆಯಾಗಿರುತ್ತದೆ. ನೀವು ಧೈರ್ಯವಾಗಿ ನುಗ್ಗಿ ಪಕ್ಷ ಸಂಘಟನೆ ಮಾಡಿ ಎಂದು ಶಿವಕುಮಾರ್ ಕರೆ ನೀಡಿದರು.