ವಾಲ್ಮೀಕಿ ಜಯಂತಿ ಜಾಹೀರಾತಿನಲ್ಲಿ ‘ಸತ್ಯಮೇವ ಜಯತೇ ನಾಪತ್ತೆ’: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ

Update: 2024-10-17 15:36 GMT

ಬೆಂಗಳೂರು: ರಾಜ್ಯ ಸರಕಾರ ಜಾಹೀರಾತುಗಳಿಂದ ಜಾಹೀರಾತುಗೊಸ್ಕರವೇ ನಡೆಯುತ್ತಿರುವ ಸರಕಾರ. ಅಚ್ಚರಿ ಎಂದರೆ ಇಂದಿನ ವಾಲ್ಮೀಕಿ ಜಯಂತಿ ಜಾಹೀರಾತಿನಲ್ಲಿ ‘ಸತ್ಯಮೇವ ಜಯತೇ’ ವಾಕ್ಯ ನಾಪತ್ತೆಯಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಗುರುವಾರ ನಗರದಲ್ಲಿರುವ ಜೆಡಿಎಸ್ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಳೆಯ ಅನಾಹುತದಿಂದ ಜನರು ಕಂಗೆಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬೆಳೆಗಳು ಹಾಳಾಗಿವೆ. ಹಿಂಗಾರು ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಜನರ ನೆರವಿಗೆ ಸರಕಾರ ಧಾವಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ಬೆಂಗಳೂರು ನಗರವೇ ಪ್ರವಾಹದಲ್ಲಿ ಮುಳುಗಿತು. ಆದರೆ, ಮುಖ್ಯಮಂತ್ರಿಯಾಗಲಿ, ಯಾವೊಬ್ಬ ಸಚಿವರೂ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟ ವಿಚಾರಿಸಲಿಲ್ಲ. ಜನರಿಗೆ ಊಟ ಇಲ್ಲ, ಮಲಗಲು ಜಾಗ ಇಲ್ಲ, ಮನೆಗಳಲ್ಲಿ ನೀರು ತುಂಬಿದೆ. ಹೊಟೇಲ್‍ನಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಇದೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದವರು ಬೆಂಗಳೂರು ನಗರವನ್ನು ಮಳೆಯಲ್ಲಿ ಮುಳುಗಿಸಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

110 ಹಳ್ಳಿಗೆ ನೀರು ನೀಡುತ್ತಿದ್ದೇವೆ ಅಂತ ಬಡಾಯಿ ಕೊಚ್ಚಿಕೊಂಡಿದ್ದಾರೆ. ಕೇಂದ್ರ ಸರಕಾರದ ಜೆಎನ್ ನರ್ಮ್ ಯೋಜನೆ ಮೂಲಕ ಬೆಂಗಳೂರಿನ ಹೊರ ವಲಯದ 110 ಹಳ್ಳಿಗಳನ್ನು, 7 ನಗರ ಸಭೆಗಳನ್ನು ಬಿಬಿಎಂಪಿಗೆ ಸೇರಿಸುವ ಕೆಲಸ ಮಾಡಿದ್ದೇ ನಾನು. 2007ರಲ್ಲಿಯೇ ಬಿಬಿಎಂಪಿಗೆ 9 ಸಾವಿರ ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಡಿಸಿಎಂ ಹೊಸದಾಗಿ ಯಾರಿಗಾಗಿ ಟೌನ್‍ಶಿಪ್ ಮಾಡಲು ಹೊರಟಿದ್ದಾರೆ? ತನಗೆ ಬೇಕಾದ ರಿಯಲ್ ಎಸ್ಟೇಟ್ ಕುಳಗಳನ್ನು ಉದ್ಧಾರ ಮಾಡುವುದಕ್ಕೆ ಈ ಟೌನ್‍ಶಿಪ್ ಮಾಡಲಾಗುತ್ತಿದೆಯಾ? ಬ್ರ್ಯಾಂಡ್ ಬೆಂಗಳೂರು ಮಾಡುತ್ತಾರಂತೆ, ಇವರ ಯೋಗ್ಯತೆಗೆ ಐದು ಪೈಸೆ ಅನುದಾನ ಇಟ್ಟಿಲ್ಲ. ಬರುವ ಹಣವನ್ನೆಲ್ಲಾ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನೈಸ್ ರಸ್ತೆಯ ಬಗ್ಗೆ ಸದನ ಸಮಿತಿ ವರದಿ ಏನು ಮಾಡಿದ್ದೀರಿ?: ದೇವೇಗೌಡರು ಅಡ್ಡಿ ಮಾಡಿದ್ದರಿಂದ ನೈಸ್ ರಸ್ತೆ ಅಗಲಿಲ್ಲವಂತೆ. ಯಾರು ಮಾಡಬೇಡಿ ಅಂತ ಹೇಳಿದ್ದು ಇವರಿಗೆ? ಇಷ್ಟು ದಿನ ಯಾಕೆ ಸುಮ್ಮನೆ ಇದ್ದರು? ನೈಸ್‍ಗೆ ವಶಪಡಿಸಿಕೊಂಡಿದ್ದ ರೈತರ ಭೂಮಿಯನ್ನು ಕಬಳಿಕೆ ಮಾಡಿ ಡೈನೋಟಿಫೈ ಮಾಡಿಕೊಂಡವರು ಯಾರು? ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ನೀಡಿದ್ದ ವರದಿಯನ್ನು ಏನು ಮಾಡಿದ್ದೀರಿ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನೈಸ್ ಅಕ್ರಮವನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಜಯಚಂದ್ರ ಶಿಫಾರಸು ಮಾಡಿದ್ದರು. ಆದರೆ ಸಿಎಂ, ಡಿಸಿಎಂಗೆ ಜಾಣ ಕಿವುಡು. ಧೈರ್ಯ ಮಾಡಿ ಜಯಚಂದ್ರ ವರದಿ ಕೊಟ್ಟರೆ ಅವರಿಗೆ ಜೀವ ಬೆದರಿಕೆ ಹಾಕಲಾಯಿತು. ಯಾರು ಜೀವ ಬೆದರಿಕೆ ಹಾಕಿದ್ದು? ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆಗೆ ಕುಮಾರಸ್ವಾಮಿ ಅನುಮತಿ ಕೊಡಸಬೇಕು ಎಂದು ಸಿಎಂ, ಡಿಸಿಎಂ, ಸಚಿವರು ಹೇಳುತ್ತಿದ್ದಾರೆ. ಪಾದಯಾತ್ರೆ ಮಾಡಿಕೊಂಡು ಡ್ಯಾನ್ಸ್ ಮಾಡಿದ್ರಲ್ಲಪ್ಪ? ಕೇಂದ್ರ ಸರಕಾರದ ಬಳಿ ಯಾವ ರೀತಿ ಅನುಮತಿ ಪಡೆಯಬೇಕು ಅಂತ ಪರಿಜ್ಞಾನ ಇಲ್ಲವೇ ನಿಮಗೆ? ತಮಿಳುನಾಡಿನಲ್ಲಿರುವ ನಿಮ್ಮ ಮಿತ್ರ ಪಕ್ಷ ಡಿಎಂಕೆ ಮನವೊಲಿಕೆ ಮಾಡಿ, ಆನಂತರ ನಮ್ಮ ಬಳಿಗೆ ಬರಲಿ ಅವರು ಹೇಳಿದರು.

ಜೆಡಿಎಸ್ ಸಂಸದರ ಬಗ್ಗೆ ತಾರತಮ್ಯ: ಜೆಡಿಎಸ್ ಸಂಸದರ ಬಗ್ಗೆ ರಾಜ್ಯ ಸರಕಾರ ತಾರತಮ್ಯ ಅನುಸರಿಸುತ್ತಿದೆ. ರಾಜ್ಯದ ಎಲ್ಲ ಸಂಸದರಿಗೂ ಹೊಸ ಕಾರು ಕೊಡಲಾಗಿದೆ. ಆದರೆ, ನನಗೆ ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಅವರಿಗೆ ಮಾತ್ರ ಹೊಸ ಕಾರು ಕೊಟ್ಟಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News