ಬೆಂಗಳೂರು | ನಾಯಿ ಬೊಗಳಿದ್ದಕ್ಕೆ ಮಾಲಕನೆಂದು ಭಾವಿಸಿ ಪಾದಚಾರಿಯ ಮೇಲೆ ಹಲ್ಲೆ: ಆರೋಪಿ ಸೆರೆ

Update: 2023-08-28 16:20 GMT

ಬೆಂಗಳೂರು, ಆ.28: ರಸ್ತೆಯಲ್ಲಿ ನಾಯಿ ಬೊಗಳಿದ್ದಕ್ಕೆ ಸಿಟ್ಟಿಗೆದ್ದು ಅದರ ಮಾಲಕನೆಂದು ಭಾವಿಸಿ ಬೇರೊಬ್ಬ ವ್ಯಕ್ತಿಗೆ ಹಲ್ಲೆ ಮಾಡಿದ್ದ ಆರೋಪಿಯನ್ನು ನಗರದ ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಾಲಸುಬ್ರಹ್ಮಣ್ಯ ಎಂಬಾತನಿಗೆ ಹಲ್ಲೆಗೈದ ಆರೋಪಿ ರಾಜು ಎಂಬಾತ ಬಂಧಿತನಾಗಿದ್ದು, ಆ.21ರ ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶ್ವರಂನ 8ನೇ ಮುಖ್ಯ ರಸ್ತೆಯ ಗಣೇಶ ದೇವಸ್ಥಾನದ ಬಳಿ ಬಾಲಸುಬ್ರಹ್ಮಣ್ಯ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅವರ ಹಿಂದೆ ಬರುತ್ತಿದ್ದ ಬೀದಿ ನಾಯಿ, ಎದುರಿಗೆ ಬರುತ್ತಿದ್ದ ರಾಜುನನ್ನು ನೋಡಿ ಬೊಗಳಿತ್ತು. ಇದರಿಂದ ಸಿಟ್ಟಿಗೆದ್ದ ರಾಜು ಬಾಲಸುಬ್ರಹ್ಮಣ್ಯರನ್ನೇ ನಾಯಿಯ ಮಾಲಕನೆಂದು ಭಾವಿಸಿ ಕ್ಯಾತೆ ತೆಗೆದಿದ್ದ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ಈ ವೇಳೆ ಆರೋಪಿ ರಾಜು ಏಕಾಏಕಿ ಬಾಲಸುಬ್ರಹ್ಮಣ್ಯರ ಕೆನ್ನೆ, ಕಿರುಬೆರಳಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಗಾಯಗೊಂಡಿದ್ದ ಬಾಲಸುಬ್ರಹ್ಮಣ್ಯ ಚಿಕಿತ್ಸೆ ಪಡೆದು ಬಳಿಕ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಆರೋಪಿ ರಾಜುನನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News