ಹೊಸ ವಾಹನಗಳ ಖರೀದಿಸಲು ಪೊಲೀಸ್ ಇಲಾಖೆಗೆ 100 ಕೋಟಿ ರೂ. ಅನುದಾನ: ಸಿಎಂ ಸಿದ್ದರಾಮಯ್ಯ
ʻʻಸುಳ್ಳು ಸುದ್ದಿ ಹರಡುವವರ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿʻʻ
ಬೆಂಗಳೂರು ಸೆ 15: ‘ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಹೊಸ ವಾಹನಗಳ ಖರೀದಿಸಲು ಪೊಲೀಸ್ ಇಲಾಖೆಗೆ 100 ಕೋಟಿ ರೂ.ಅನುದಾನಕ್ಕೆ ಅನುಮೋದನೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶುಕ್ರವಾರ ನಗರದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ನೈತಿಕ ಪೊಲೀಸ್‍ಗಿರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದರು.
ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್‍ಐಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಚಾಳಿಬಿದ್ದ ರೌಡಿಗಳನ್ನು ಗಡಿಪಾರು ಮಾಡುವುದು ಹೆಚ್ಚು ಕ್ರಿಯಾಶೀಲವಾಗಿ ನಡೆಯಬೇಕು. ಅವರಿಗೆ ಸಲೀಸಾಗಿ ಜಾಮೀನು ಸಿಗುವಂಥಾಗಬಾರದು. ದೂರುದಾರರಿಗೆ ಧೈರ್ಯ ನೀಡುವ ಕೆಲಸ ಪೊಲೀಸ್ ಠಾಣೆಗಳಲ್ಲಿ ಆಗಬೇಕು. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಿರಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಲಾಢ್ಯರು ಮಾತ್ರ ಬದುಕಬೇಕು, ಶಕ್ತಿ ಇದ್ದವರಿಗೆ ಮಾತ್ರ ನ್ಯಾಯ ಸಿಗಬೇಕು ಎನ್ನುವ ಡಾರ್ವಿನ್ ಸಿದ್ಧಾಂತದ ಮನಸ್ಥಿತಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆಯ ಮೇಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವಾರ್ಷಿಕ ಸಮಾವೇಶದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಇದ್ದರು....
‘ಶೀಘ್ರವೇ ಪೊಲೀಸ್ ಅಧಿಕಾರಿಗಳು ಸೇರಿದಂತೆ 2,454 ವಿವಿಧ ಹಂತದ ಪೊಲೀಸ್ ಹುದ್ದೆ ಭರ್ತಿ ಮಾಡುತ್ತೇವೆ. ಇದರ ಜೊತೆಗೆ ಬೆಂಗಳೂರು ನಗರದಲ್ಲಿ ಹೊಸದಾಗಿ 5 ಸಂಚಾರಿ ಠಾಣೆ, 6 ಮಹಿಳಾ ಠಾಣೆ ತೆರೆಯಲಾಗುವುದು. ಸಿಸಿಬಿಯನ್ನು ಇನ್ನಷ್ಟು ಸದೃಢಗೊಳಿಸಲು 230 ಸಿಬ್ಬಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಸಿಬ್ಬಂದಿಗೆ ಅಗತ್ಯವಿದ್ದರೆ ಹೊಸ ಕಟ್ಟಡ ಒದಗಿಸಲಾಗುವುದು’
-ಸಿದ್ದರಾಮಯ್ಯ ಮುಖ್ಯಮಂತ್ರಿ
ಡಿಸಿಪಿ-ಎಸ್‍ಪಿಗಳೇ ಹೊಣೆ: ‘ಆಯಾ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು, ಕಾನೂನುಬಾಹಿರ ಸಂಘಟಿತ ಅಪರಾಧಗಳು ನಿಯಂತ್ರಣ ಆಗದಿದ್ದರೆ ಡಿಸಿಪಿ, ಎಸ್‍ಪಿ ಮಟ್ಟದ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರಕಾರ ಕೇವಲ ಕೆಳಹಂತದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಕೈ ತೊಳೆದುಕೊಳ್ಳುವುದಿಲ್ಲ, ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.