ರಾಜ್ಯದಲ್ಲಿ 13.87 ಲಕ್ಷ ಅನರ್ಹ ಪಡಿತರ ಚೀಟಿಗಳು ಪತ್ತೆ: ಸಚಿವ ಕೆ.ಎಚ್. ಮುನಿಯಪ್ಪ

Update: 2024-10-21 15:09 GMT

ಬೆಂಗಳೂರು: ರಾಜ್ಯದಲ್ಲಿ 13,87,639 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ ಆರು ತಿಂಗಳಿನಿಂದ ಪಡಿತರ ಪಡೆಯದ 2,75,667, ಆದಾಯ ತೆರಿಗೆ ಪಾವತಿ ಮಾಡುವ 98,485, ಆದಾಯ ಮಿತಿ ಹೆಚ್ಚಿರುವ 10,09,478 ಪಡಿತರ ಚೀಟಿಗಳು ಸೇರಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆದಾಯ ಮಿತಿ ಹೆಚ್ಚಿರುವ 10,09,478 ಪಡಿತರ ಚೀಟಿಗಳ ಪೈಕಿ 16,068 ಪಡಿತರ ಚೀಟಿಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ ಎಂದು ಹೇಳಿದರು.

16,951 ಪಡಿತರ ಚೀಟಿಗಳನ್ನು ಅಮಾನತ್ತುನಲ್ಲಿಡಲಾಗಿದೆ. 1,572 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. 6,09,277 ಪಡಿತರ ಚೀಟಿಗಳನ್ನು ಸದ್ಯಕ್ಕೆ ಉಳಿಸಿಕೊಳ್ಳಲಾಗಿದೆ. 2023-24ನೆ ಸಾಲಿನಲ್ಲಿ ಹೊಸ ಪಡಿತರ ಚೀಟಿ ಕೋರಿ 2,95,986 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 2,30,549 ಅರ್ಹ ಅರ್ಜಿಗಳಿದ್ದವು. 1,48,533 ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಿದ್ದೇವೆ. 65,437 ಅರ್ಜಿಗಳನ್ನು ತಿರಸ್ಕರಿಸಿದ್ದೇವೆ. 82,016 ವಿತರಣೆಗೆ ಬಾಕಿಯಿವೆ ಎಂದು ಮುನಿಯಪ್ಪ ಮಾಹಿತಿ ನೀಡಿದರು.

ಆರು ತಿಂಗಳುಗಳಿಂದ ಪಡಿತರ ಪಡೆಯದಿರುವುದು, ಒಂದು ವರ್ಷದಿಂದ ಡಿಬಿಟಿ ಸ್ವೀಕೃತವಾಗದೆ ಇರುವುದು, ಆದಾಯ ತೆರಿಗೆ ಪಾವತಿ ಮಾಡುತ್ತಿರುವ, ಆಹಾರ ಭದ್ರತಾ ಕಾಯ್ದೆಯ ಮಾನದಂಡಗಳಿಗೆ ಅನುಗುಣವಾಗಿ ವಾರ್ಷಿಕ ವರಮಾನ ಹೆಚ್ಚಿರುವುದು ಸೇರಿದಂತೆ ಮತ್ತಿತರ ಕಾರಣಗಳಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ಅನರ್ಹ ಕಾರ್ಡುಗಳು ಇತರಬಹುದು ಎಂದು ಅಂದಾಜಿಸಲಾಗಿದೆ ಎಂದು ಮುನಿಯಪ್ಪ ಹೇಳಿದರು.

ಇವುಗಳನ್ನು ಪರಿಶೀಲಿಸಿದರೆ ಕನಿಷ್ಠ 10 ರಿಂದ 12 ಲಕ್ಷ ಅನರ್ಹ ಪಡಿತರ ಚೀಟಿ ಪತ್ತೆಯಾಗಬಹುದು. ಆನಂತರ ಅನರ್ಹ ಕಾರ್ಡುಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಕಾರ್ಡುಗಳನ್ನು ನೀಡಲು ಮುಂದಿನ ದಿನಗಳಲ್ಲಿ ಹೊಸ ಅರ್ಜಿಯನ್ನು ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.

2024-25ರಲ್ಲಿ ಹೊಸ ಪಡಿತರ ಚೀಟಿ ಕೋರಿ 97,464 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ವೈದ್ಯಕೀಯ ಉದ್ದೇಶಕ್ಕಾಗಿ 809 ಹೊಸ ಕಾರ್ಡುಗಳನ್ನು ಮಾತ್ರ ವಿತರಣೆ ಮಾಡಿದ್ದೇವೆ. 96,655 ವಿತರಣೆಗೆ ಬಾಕಿಯಿವೆ. ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ನೀಡಬೇಕಾಗಿರುವ ಅಕ್ಕಿ ಬದಲಾಗಿ ಡಿಬಿಟಿ ಮೂಲಕ ಹಣ ಪಾವತಿ ಮಾಡುವುದನ್ನು ಮುಂದುವರೆಸಲಾಗುವುದು ಎಂದು ಮುನಿಯಪ್ಪ ಹೇಳಿದರು.

ಅನ್ನ ಸುವಿಧಾ: 2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅನ್ನು ಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದ ಒಎಂಎಸ್‍ಎಸ್(ಡಿ) ಯೋಜನೆಯಡಿ ರಾಜ್ಯ ಸರಕಾರದ ಹೆಚ್ಚುವರಿ ಕಾರ್ಡುಗಳಿಗೆ ಬೇಕಾಗುವ 20 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತಿ ಕೆಜಿಗೆ 28 ರೂ.ಗಳ ದರದಲ್ಲಿ ಎಫ್‍ಸಿಐ ಮೂಲಕ ಖರೀದಿಸಲು ತೀರ್ಮಾನಿಸಲಾಗಿದೆ. ಹೊಟೇಲ್ ಮತ್ತು ಕಲ್ಯಾಣ ಮಂಟಪಗಳಲ್ಲಿ ಸಾಕಷ್ಟು ಆಹಾರ ವ್ಯರ್ಥವಾಗುವುದನ್ನು ತಡೆಯಲು ಕಾನೂನು ರೂಪಿಸಲು ನಿರ್ದೇಶನ ನೀಡಲಾಗಿದೆ ಎಂದು ಮುನಿಯಪ್ಪ ತಿಳಿಸಿದರು.

ಪಡಿತರ ಚೀಟಿಗಳ ವಿವರ: ಅಂತ್ಯೋದಯ ಅನ್ನ ಯೋಜನೆ(ಎಎವೈ): 10,68,662, ಆದ್ಯತಾ ಕುಟುಂಬ(ಪಿಎಚ್‍ಎಚ್/ಬಿಪಿಎಲ್-ಕೇಂದ್ರ ಸರಕಾರ):1,02,83,655, ಆದ್ಯತಾ ಕುಟುಂಬ (ಪಿಎಚ್‍ಎಚ್/ಬಿಪಿಎಲ್-ಕೇಂದ್ರ ಸರಕಾರ): 12,22,204, ರಾಜ್ಯದ ಆದ್ಯತೇತರ ಕುಟುಂಬ(ಎನ್‍ಪಿಎಚ್‍ಎಚ್/ಎಪಿಎಲ್): 25,47,946 ಪಡಿತರ ಚೀಟಿಗಳು ಇವೆ. ಒಟ್ಟಾರೆ ರಾಜ್ಯದಲ್ಲಿ 1,51,22,467 ಪಡಿತರ ಚೀಟಿಗಳನ್ನು ವಿತರಿಸಿದ್ದು, ಇವು 5,22,71,817 ಸದಸ್ಯರನ್ನು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ನಗರ ಪ್ರದೇಶದಲ್ಲಿ ಶೇ.50 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.75ರಷ್ಟು ಅಂತ್ಯೋದಯ/ಬಿಪಿಎಲ್ ಕಾರ್ಡುಗಳನ್ನು ವಿತರಣೆ ಮಾಡಲು ಅವಕಾಶವಿದೆ. ರಾಜ್ಯದ ಜನಸಂಖ್ಯೆ 2011ರ ಜನಗಣತಿ ಪ್ರಕಾರ ನಗರ ಹಾಗೂ ಗ್ರಾಮೀಣ ಸೇರಿ ಶೇ.65.96 ಮಂದಿಗೆ ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ಕೇರಳದಲ್ಲಿ ಶೇ.45.59, ತಮಿಳುನಾಡಿನಲ್ಲಿ ಶೇ.48.81, ತೆಲಂಗಾಣದಲ್ಲಿ ಶೇ.53.93, ಆಂಧ್ರಪ್ರದೇಶದಲ್ಲಿ ಶೇ.63.79 ಹಾಗೂ ಮಹಾರಾಷ್ಟ್ರದಲ್ಲಿ ಶೇ.58.47ರಷ್ಟು ಮಂದಿಗೆ ಅಂತ್ಯೋದಯ/ಬಿಪಿಎಲ್ ಕಾರ್ಡುಗಳನ್ನು ವಿತರಣೆ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೆ ಅತೀ ಹೆಚ್ಚು ಕಾರ್ಡುಗಳನ್ನು ವಿತರಣೆ ಮಾಡಲಾಗಿದೆ ಎಂದು ಮುನಿಯಪ್ಪ ತಿಳಿಸಿದರು.

ಸಭೆಯಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಟಿ.ಎಂ.ಎಚ್.ಕುಮಾರ್, ಆಯುಕ್ತೆ ವಾಸಿರೆಡ್ಡಿ ವಿಜಯ ಜೋತ್ಸ್ನಾ, ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ್, ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಕಿ ಅನಿತಾ ಲಕ್ಷ್ಮೀ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

2,964 ಸರಕಾರಿ ನೌಕರರ ಬಿಪಿಎಲ್ ಕಾರ್ಡು ರದ್ದು: ಪಡಿತರ ಚೀಟಿಗಳ ಪರಿಷ್ಕರಣೆ ವೇಳೆ 4034 ಸರಕಾರಿ ನೌಕರರು ಬಿಪಿಎಲ್ ಕಾರ್ಡು ಹೊಂದಿರುವುದು ಪತ್ತೆಯಾಗಿದೆ. ಈ ಪೈಕಿ 2964 ಕಾರ್ಡುಗಳನ್ನು ರದ್ದು ಮಾಡಿ, ದಂಡ ವಿಧಿಸಲಾಗಿದೆ. ಉಳಿದ 1070 ಕಾರ್ಡುಗಳನ್ನು ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಕೆ.ಎಚ್.ಮುನಿಯಪ್ಪ, ಆಹಾರ ಸಚಿವ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News