ರಾಜಸ್ವ ಸ್ವೀಕೃತಿಯಲ್ಲಿ ಶೇ.17.19ರಷ್ಟು ಹೆಚ್ಚಳ : ಸಿಎಜಿ ವರದಿ

Update: 2024-07-23 16:15 GMT

ಬೆಂಗಳೂರು : ರಾಜ್ಯದ ಆಂತರಿಕ ಉತ್ಪನ್ನ ದರ ಶೇ.11.13 ಹಾಗೂ ರಾಜಸ್ವ ಸ್ವೀಕೃತಿಯಲ್ಲಿ ಶೇ.17.19ರಷ್ಟು ಹೆಚ್ಚಳವಾಗಿದೆ. ಇದರ ಜತೆಗೆ ರಾಜಸ್ವ-ಬಂಡವಾಳ ತಪ್ಪು ವರ್ಗೀಕರಣ 2022-23ನೆ ಸಾಲಿನಲ್ಲಿ ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚವನ್ನು ತಪ್ಪು ವರ್ಗೀಕರಿಸಲಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ವರದಿಯನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದರು.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಅಕೌಂಟೆಂಟ್ ಜನರಲ್ ಎಸ್.ಶಾಂತಿಪ್ರಿಯಾ, ಕೋವಿಡ್-19 ಸೋಂಕಿನ ಬಳಿಕ 2022-23ರಲ್ಲಿ ಹಿಂದಿನ ವರ್ಷಕ್ಕಿಂತ ರಾಜ್ಯದ ಆಂತರಿಕ ಉತ್ಪನ್ನ ದರ ಶೇ. 11.13 ಹಾಗೂ ರಾಜಸ್ವ ಸ್ವೀಕೃತಿಯಲ್ಲಿ ಶೇ. 17.19ರಷ್ಟು ಹೆಚ್ಚಳವಾಗಿದೆ. ಆದರೂ, ರಾಜಸ್ವ ಮತ್ತು ಬಂಡವಾಳ ನಡುವಿನ ತಪ್ಪು ವರ್ಗೀಕರಣ ಹಾಗೂ ನಿಗದಿತ ಅನುದಾನಕ್ಕಿಂತ ಹೆಚ್ಚುವರಿ ವೆಚ್ಚವನ್ನು ಸಕ್ರಮಗೊಳಿಸದಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿ, ರಾಜ್ಯ ಸರ್ಕಾರ ಅದನ್ನು ಸರಿಪಡಿಸುವಂತೆ ಸೂಚಿಸಲಾಗಿದೆ ಎಂದು ವಿವರ ನೀಡಿದರು.

ರಾಜಸ್ವ-ಬಂಡವಾಳ ತಪ್ಪು ವರ್ಗೀಕರಣ: 2022-23ನೆ ಸಾಲಿನಲ್ಲಿ ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚವನ್ನು ತಪ್ಪು ವರ್ಗೀಕರಿಸಲಾಗಿದೆ. ಅದರಂತೆ 51.10ಕೋಟಿ ರೂ. ರಾಜಸ್ವ ವೆಚ್ಚವನ್ನು ಬಂಡವಾಳ ವೆಚ್ಚವನ್ನಾಗಿ ಹಾಗೂ 75ಲಕ್ಷ ರೂ. ಬಂಡವಾಳ ವೆಚ್ಚವನ್ನು ರಾಜಸ್ವ ವೆಚ್ಚವನ್ನಾಗಿ ವರ್ಗೀಕರಿಸಲಾಗಿದೆ. ಅದರ ಪರಿಣಾಮ ರಾಜಸ್ವ ವೆಚ್ಚ 50.35 ಕೋಟಿ ರೂ.ಕಡಿಮೆಯಾಗಿದೆ ಎಂದು ವಿವರಿಸಿದರು.

ಹಾಗೆಯೇ, ತೆರಿಗೆ ವಂಚನೆ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ 2023ರ ಮಾರ್ಚ್ 31ರ ಅಂತ್ಯಕ್ಕೆ 19,826 ತೆರಿಗೆ ವಂಚನೆ ಪ್ರಕರಣಗಳು ಪತ್ತೆ ಮಾಡಲಾಗಿತ್ತು. ಆದರೆ, ಅದರಲ್ಲಿ 9,530 ಪ್ರಕರಣಗಳನ್ನು ಮಾತ್ರ ಇತ್ಯರ್ಥಗೊಳಿಸಿ 1,320.18 ಕೋಟಿ ರೂ. ದಂಡ ವಸೂಲಿ ಮಾಡಲಷ್ಟೇ ಸರಕಾರ ಶಕ್ತವಾಗಿದೆ ಎಂದರು.

ಸಹಾಯಧನಗಳ ಹೆಚ್ಚಳ: ಬದ್ಧವಲ್ಲದ ವೆಚ್ಚದಲ್ಲಿ ಸಹಾಯಧನಗಳ ಪ್ರಮಾಣ ಹೆಚ್ಚುತ್ತಿರುವುದನ್ನು ಲೆಕ್ಕಪರಿಶೋಧನಾ ವರದಿಯಲ್ಲಿ ಕಂಡು ಹಿಡಿಯಲಾಗಿದೆ. 2018-19ರಲ್ಲಿ 15,400 ಕೋಟಿ ರೂ.ಗಳಷ್ಟು ಸಹಾಯಧನದ ಪ್ರಮಾಣ 2022-23ರಲ್ಲಿ 22,754 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅದರಂತೆ ರಾಜಸ್ವ ವೆಚ್ಚದಲ್ಲಿ ಶೇ.10.55ರಷ್ಟು ಸಹಾಯಧನದ ಪಾಲಾಗಿದೆ. ಅದರಲ್ಲಿ ವಿದ್ಯುತ್ ಸಹಾಯಧನವೇ ಶೇ. 49ರಿಂದ 52ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ವೇಳೆ ವರ್ಷದಿಂದ ವರ್ಷಕ್ಕೆ ಅಪೂರ್ಣ ಯೋಜನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2021-22ರಲ್ಲಿ 1 ಕೋಟಿ ರೂಗಳಿ.ಗೂ ಹೆಚ್ಚಿನ ಮೊತ್ತದ 1,208 ಯೋಜನೆಗಳ ಕಾಮಗಾರಿ ಚಾಲನೆಗೊಂಡು ಅಪೂರ್ಣಗೊಂಡಿದ್ದವು. ಅದೇ 2022-23ರಲ್ಲಿ ಆ ಸಂಖ್ಯೆ 1,864ಕ್ಕೆ ಏರಿಕೆಯಾಗಿದೆ ಎಂದು ಅವರು ಅಂಕಿ-ಸಂಖ್ಯೆಗಳನ್ನು ನೀಡಿದರು.

40 ಉದ್ಯಮಗಳ ಮೌಲ್ಯ ಶೂನ್ಯ: ರಾಜ್ಯದಲ್ಲಿನ ಆರು ಶಾಸನಬದ್ಧ ನಿಗಮಗಳು ಸೇರಿದಂತೆ 127 ಸಾರ್ವಜನಿಕ ವಲಯ ಉದ್ಯಮಗಳಿದ್ದು, ಅವುಗಳು 1.12 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ ಸರಕಾರದಿಂದ 12,684 ಕೋಟಿ ರೂ. ದೀರ್ಘಾವಧಿ ಸಾಲ ಹೊಂದಿದ್ದವು. ಆ ಸಾರ್ವಜನಿಕ ವಲಯ ಉದ್ಯಮಗಳಲ್ಲಿ 60 ಉದ್ಯಮಗಳು ನಷ್ಟದಲ್ಲಿದ್ದು, ಅದರಲ್ಲೂ 40 ಉದ್ಯಮಗಳು ನಿವ್ವಳ ಮೌಲ್ಯ ಶೂನ್ಯವನ್ನು ಹೊಂದಿವೆ. ಅಲ್ಲದೆ, 96 ಸರಕಾರಿ ಸಂಸ್ಥೆಗಳು 233 ಲೆಕ್ಕಗಳ ಬಾಕಿಯನ್ನು ಈವರೆಗೆ ಲೆಕ್ಕಪರಿಶೋಧನೆಗೆ ಸಲ್ಲಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಅವರು ವಿವರಿಸಿದರು.

2022-23ರಲ್ಲಿ ಕೋವಿಡ್ ಸೋಂಕಿನ ಅವಧಿ ನಂತರದಲ್ಲಿ ಸಾಲ ಪ್ರಮಾಣ ಕಡಿಮೆಯಾದ ವರ್ಷವಾಗಿದೆ. 2022-23ರ ವೇಳೆಗೆ ರಾಜ್ಯ ಸರಕಾರವು 5.53 ಲಕ್ಷ ಕೋಟಿ ರೂ. ವಿತ್ತೀಯ ಹೊಣೆಗಾರಿಕೆಯನ್ನು ಹೊಂದಿತ್ತು. ಅದರಲ್ಲಿ ಸಾರ್ವಜನಿಕ ಲೆಕ್ಕ ಹೊಣೆಗಾರಿಕೆ 1.33 ಲಕ್ಷ ಕೋಟಿ ರೂ. ಗಳಷ್ಟಿದ್ದರೆ, ಆಂತರಿಕ ಹೊಣೆಗಾರಿಕೆ 3.53 ಲಕ್ಷಕೋಟಿ ರೂ. ಗಳಾಗಿದೆ. ಉಳಿದಂದೆ ಕೇಂದ್ರ ಸರಕಾರದ ಸಾಲ 49ಸಾವಿರ ಕೋಟಿ ರೂ. ಹಾಗೂ ಆಯವ್ಯಯೇತರ ಸಾಲ 17ಸಾವಿರ ಕೋಟಿ ರೂ.ಗಳಾಗಿದೆ. ಅಲ್ಲದೆ, 2022-23ರಲ್ಲಿ ಕೇವಲ 44 ಸಾವಿರ ಕೋಟಿ ರೂ. ಸಾಲ ಪಡೆದಿತ್ತು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News