ಧಾರವಾಡದಲ್ಲಿ 17.98 ಕೋಟಿ ರೂ.ನಗದು ವಶ : ರಾಜ್ಯ ಮುಖ್ಯ ಚುನಾವಣಾಧಿಕಾರಿ

Update: 2024-04-18 15:22 GMT

ಬೆಂಗಳೂರು: ಧಾರವಾಡದ ದಾಸನಕೊಪ್ಪ ವೃತ್ತದಲ್ಲಿರುವ ನಿವಾಸವೊಂದರಲ್ಲಿ 17.98 ಕೋಟಿ ರೂ.ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ರಾಯಚೂರು ಜಿಲ್ಲೆಯ ವಾಡಿ ರೈಲ್ವೆ ನಿಲ್ದಾಣದಲ್ಲಿ ರಾಜ್ಯ ರೈಲ್ವೆ ಪೊಲೀಸರ ತಂಡವು 22.50 ಲಕ್ಷ ರೂ.ಮೌಲ್ಯದ 22.585 ಕೆಜಿ ಗಾಂಜಾ, ಉತ್ತರ ಕನ್ನಡ ಜಿಲ್ಲೆಯ ಕರವಾರದಲ್ಲಿ 69.98 ಲಕ್ಷ ರೂ.ಮೌಲ್ಯದ 0.89 ಕೆಜಿ ಚಿನ್ನ, 4.01 ಲಕ್ಷ ರೂ.ಮೌಲ್ಯದ 4.754 ಕೆಜಿ ಬೆಳ್ಳಿ, ತುಮಕೂರಿನ ಚಿಕ್ಕತೊಟ್ಟಿಲುಕೆರೆ ಗ್ರಾಮದಲ್ಲಿ 19.70 ಲಕ್ಷ ರೂ.ಮೌಲ್ಯದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಇಲಾಖೆಯವರು ದೇವನಹಳ್ಳಿಯಲ್ಲಿ ತಾಲೂಕಿನ ಕೆಎಸ್‍ಡಬ್ಲ್ಯುಸಿ ಗೋದಾಮಿನಲ್ಲಿ 28.65 ಲಕ್ಷ ರೂ.ಮೌಲ್ಯದ 10,134 ಲೀಟರ್ ಬಿಯರ್, 46.14 ಲಕ್ಷ ರೂ.ಮೌಲ್ಯದ 13,800 ಲೀಟರ್ ಬಿಯರ್, ಚಿಕ್ಕೋಡಿಯಲ್ಲಿ 59 ಲಕ್ಷ ರೂ.ಮೌಲ್ಯದ 14,688 ಲೀಟರ್ ಮದ್ಯ, ಹಾವೇರಿಯ ಶಿಗ್ಗಾಂವಿ ತಾಲೂಕಿನಲ್ಲಿ 51.06 ಲಕ್ಷ ರೂ.ಮೌಲ್ಯದ 7,344 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,872 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.

ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 2,523 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 3,440 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 139 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 19,813 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1,578 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News