200 ಯೂನಿಟ್ ಉಚಿತ ವಿದ್ಯುತ್ ಯೋಜನೆ ‘ಗೃಹ ಜ್ಯೋತಿ’ಗೆ ಚಾಲನೆ
ಕಲಬುರಗಿ, ಆ.5: ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ 'ಐದು ಗ್ಯಾರಂಟಿ' ಯೋಜನೆಗಳ ಪೈಕಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ‘ಗೃಹ ಜ್ಯೋತಿ’ಗೆ ಇಂದು ಚಾಲನೆ ನೀಡಲಾಗಿದೆ.
ನಗರದ ನೂತನ ವಿದ್ಯಾಲಯ (ಎನ್ ವಿ) ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವೇದಿಕೆಯ ಮೇಲೆ ನಿರ್ಮಿಸಲಾದ ಮಾದರಿ ಮನೆಯ ವಿದ್ಯುತ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಇದೇವೇಳೆ ಹತ್ತು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ದರದ ವಿದ್ಯುತ್ ಬಿಲ್ ವಿತರಿಸಲಾಯಿತು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್, ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ, ಡಾ ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ, ರಹೀಂಖಾನ್, ಶಾಸಕರಾದ ಎಂ ವೈ ಪಾಟೀಲ, ಬಿ.ಆರ್.ಪಾಟೀಲ, ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ,ವೆಂಕಟಪ್ಪ ನಾಯಕ, ಚೆನ್ನಾರೆಡ್ಡಿ ಪಾಟೀಲ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಮಾಜಿ ಉಪಸಭಾಪತಿ ಡೇವಿಡ್ ಸಿಮೇಯೋನ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಸುಭಾಷ್ ರಾಠೋಡ, ಪಂಕಜಕುಮಾರ ಪಾಂಡೆ, ಪ್ರಾದೇಶಿಕ ಆಯುಕ್ತ ಕೃಷ್ಣ ವಾಜಪೇಯಿ, ಡಿಐಜಿ ಅನಪಮ್ ಅಗರವಾಲ್ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿಒಓ ಭಂವರ್ ಕುಮಾರ ಮೀನಾ, ಜೆಸ್ಕಾಂ ಎಂ ಡಿ ರಾಹುಲ್ ಪಾಂಡ್ವೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ಸೇರಿ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಗೃಹ ಜ್ಯೋತಿ’ ಯೋಜನೆಯಡಿ ನೋಂದಾಯಿತ 1.41 ಕೋಟಿ ಮನೆಗಳಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಯ ಶೂನ್ಯ ದರದ ವಿದ್ಯುತ್ ಬಿಲ್ ನೀಡಲಾಗುತ್ತಿದೆ. ಜುಲೈ 25ರ ವೇಳೆಗೆ ಜೆಸ್ಕಾಂನಲ್ಲಿ 20.21 ಲಕ್ಷ, ಬೆಸ್ಕಾಂನಲ್ಲಿ 54.99 ಲಕ್ಷ, ಚೆಸ್ಕಾಂನಲ್ಲಿ 20.49 ಲಕ್ಷ, ಹೆಸ್ಕಾಂನಲ್ಲಿ 30.66 ಲಕ್ಷ, ಮೆಸ್ಕಾಂನಲ್ಲಿ 14.53 ಲಕ್ಷ ಮತ್ತು ಎಚ್ಆರ್ಇಸಿಎಸ್ನಲ್ಲಿ 76,562 ಮನೆಗಳು ಯೋಜನೆಯಡಿ ನೋಂದಣಿಯಾಗಿವೆ. ಆಗಸ್ಟ್ ತಿಂಗಳಲ್ಲಿ ನೋಂದಾಯಿಸಿದವರಿಗೂ ಮುಂದಿನ ತಿಂಗಳಿಂದ ಗೃಹ ಜ್ಯೋತಿಯ ಸೌಲಭ್ಯ ಲಭಿಸಲಿದೆ.