ಅಮಿತ್ ಶಾ ಹೆಸರಿನಲ್ಲಿ ಕನಕಗಿರಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 21 ಲಕ್ಷ ರೂ. ವಂಚನೆ ಆರೋಪ: ಎಫ್‍ಐಆರ್ ದಾಖಲು
ಬೆಂಗಳೂರು, ಸೆ.15: ಕುಂದಾಪುರ ಟಿಕೆಟ್ ಕೊಡಿಸುವ ನೆಪದಲ್ಲಿ ವಂಚನೆ ಪ್ರಕರಣದ ಬೆನ್ನಲ್ಲೆ ಕೊಪ್ಪಳದ ಕನಕಗಿರಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪದಡಿ ಮೂವರ ವಿರುದ್ಧ ಇಲ್ಲಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ತಿಮ್ಮಾರೆಡ್ಡಿ ಎಂಬುವರು ನೀಡಿರುವ ದೂರಿನ ಮೇರೆಗೆ ಜುಲೈ 19ರಂದು ಈ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯತ್ರಿ ಎಂಬುವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪತ್ನಿಗೆ ಬಿಜೆಪಿ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದ ಗಾಯತ್ರಿ ಪತಿ ತಿಮ್ಮಾರೆಡ್ಡಿ ಅವರಿಗೆ ತನ್ನ ಸ್ನೇಹಿತನಾದ ಬೆಂಗಳೂರಿನ ಜೀತು ಎಂಬುವರ ಮೂಲಕ ದೆಹಲಿ ಮೂಲದ ವಿಶಾಲನಾಗ್ ಎಂಬ ವ್ಯಕ್ತಿ ಪರಿಚಯವಾಗಿದ್ದ. ವಿಶಾಲನಾಗ್ ತನ್ನನ್ನು ಬಿಜೆಪಿಯ ಸೆಂಟ್ರಲ್ ಸರ್ವೆ ತಂಡದ ಮುಖಸ್ಥ ಎಂದು ಪರಿಚಯ ಮಾಡಿಕೊಂಡಿದ್ದ.
ಬಿಜೆಪಿ ಟಿಕೆಟ್ ನೀಡುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಂದ ಈ ಸರ್ವೆ ನಡೆಯುತ್ತಿದೆ. ಸರ್ವೆಯಲ್ಲಿ ನಿಮ್ಮ ಪತ್ನಿಯ ಹೆಸರು ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೆ ತಂದು ಟಿಕೆಟ್ ಕೊಡಿಸುವ ಅವಕಾಶ ನನ್ನ ಕೈಯಲ್ಲಿದೆ. ಪಕ್ಷದ ವರಿಷ್ಠರಿಗೆ ಸಲ್ಲಿಸುವ ಅಂತಿಮ ವರದಿಯಲ್ಲಿ ಗಾಯತ್ರಿ ಹೆಸರು ಮೊದಲ ಸ್ಥಾನದಲ್ಲಿ ಬರಲಿದೆ. ಇದಕ್ಕಾಗಿ ನಮ್ಮ ಸರ್ವೆ ತಂಡದ ಹುಡುಗರಿಗೆ ಹಣ ನೀಡಬೇಕು ಎಂದಿದ್ದ. ಇದನ್ನೇ ನಿಜವೆಂದು ನಂಬಿದ್ದ ತಿಮ್ಮಾರೆಡ್ಡಿ, 2ಲಕ್ಷ ರೂ.ಬ್ಯಾಂಕ್ ಖಾತೆ ಮೂಲಕ ಮತ್ತು 19ಲಕ್ಷ ರೂ.ನಗದು ನೀಡಿದ್ದರು.
ಈ ಸಂಬಂಧ ವಿಶಾಲನಾಗ್, ಗೌರವ್ ಮತ್ತು ಜೀತು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕ್ರಮ ಜರುಗಿಸಲಾಗಿದೆ ಎಂದು ಅಶೋಕನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ದೂರುದಾರ ತಿಮ್ಮಾರೆಡ್ಡಿ, ಬೆಂಗಳೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ವಿಶಾಲನಾಗ್‍ನಿಗೆ ಹಣವನ್ನು ನೀಡಿದ್ದೆ. ಟಿಕೆಟ್ ಸಲುವಾಗಿ ವಿಶಾಲನಾಗ್ ಕರೆದ ಕಾರಣಕ್ಕೆ ದಿಲ್ಲಿಯಲ್ಲೂ ನಾಲ್ಕು ದಿನ ಉಳಿದುಕೊಂಡಿದ್ದೆ. ಅಂತಿಮವಾಗಿ ಟಿಕೆಟ್ ಘೋಷಣೆಯಾದಾಗ ನನ್ನ ಪತ್ನಿಯ ಹೆಸರು ಇರಲಿಲ್ಲ. ಈ ಬಗ್ಗೆ ಕೇಳಲು ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಬಳಿಕ ಕೆಲ ದಿನ ಬಿಟ್ಟು ಹಣ ಕೊಡುತ್ತೇನೆ ಎಂದು ಹೇಳಿದ. ಇದುವರೆಗೂ ಹಣ ನೀಡಿಲ್ಲ. ಇಬ್ಬರ ನಡುವೆ ಮಾತುಕತೆಯಾಗಿದ್ದು ಹಣ ವಾಪಸ್ ಕೊಡುವುದಾಗಿ ಹೇಳುತ್ತಿದ್ದಾರೆ. ಹಣ ಕೊಡುವ ನಿರೀಕ್ಷೆಯಿದೆ ಎಂದು ತಿಮ್ಮಾರೆಡ್ಡಿ ತಿಳಿಸಿದ್ದಾರೆ.