ರಾಜ್ಯ ಬಜೆಟ್ 2023-24 | ಅಲ್ಪಸಂಖ್ಯಾತರ ಕಲ್ಯಾಣಕ್ಕೆ 2101 ಕೋಟಿ ರೂ.ಅನುದಾನ
ಬೆಂಗಳೂರು, ಜು.7: 2023-24ನೆ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗೆ 2101.19 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದೆ. ಈ ಪೈಕಿ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ 1815.14 ಕೋಟಿ ರೂ., ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 110ಕೋಟಿ ರೂ., ರಾಜ್ಯ ವಕ್ಫ್ ಮಂಡಳಿಗೆ 127.13 ಕೋಟಿ ರೂ., ರಾಜ್ಯ ಉರ್ದು ಅಕಾಡೆಮಿಗೆ 1 ಲಕ್ಷ ರೂ., ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ 1 ಲಕ್ಷ ರೂ. ಹಾಗೂ ಖಾಲಿ ಹುದ್ದೆಗಳಿಗಾಗಿ 48.90 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ಕೇಂದ್ರ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು (1 ರಿಂದ 8ನೇ ತರಗತಿಯವರೆಗೆ) ಸ್ಥಗಿತಗೊಳಿಸಿದ್ದು, ಈ ಯೋಜನೆಯನ್ನು ಮುಂದುವರೆಸಲು 60 ಕೋಟಿ ರೂ.ಅನುದಾನ. 62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು 6ನೆ ತರಗತಿಯಿಂದ 12ನೆ ತರಗತಿಯವರೆಗೆ ಇಂಟೆಗ್ರೇಟೆಡ್ ಶಾಲೆಗಳನ್ನಾಗಿ ಉನ್ನತೀಕರಣ. ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 30 ಕೋಟಿ ರೂ.ಅನುದಾನ.
50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿಯನ್ನು ದ್ವಿಗುಣಗೊಳಿಸುವ ಮೂಲಕ ಹೆಚ್ಚುವರಿಯಾಗಿ 12,500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು 23 ಕೋಟಿ ರೂ.ಅನುದಾನ. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 10 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಪ್ರಾರಂಭ. ಮೌಲಾನಾ ಆಝಾದ್ ಶಾಲೆಗಳ ಶಿಕ್ಷಣದ ಗುಣಮಟ್ಟ ಇನ್ನಷ್ಟು ಹೆಚ್ಚಿಸಲು ಹಾಗೂ ಸ್ವಂತ ಕಟ್ಟಡ ಇಲ್ಲದೇ ಇರುವ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಅರಿವು ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ ಸಿ.ಇ.ಟಿ ಮೂಲಕ ಪ್ರವೇಶ ಪಡೆದ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ 28 ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ಶೇ.2 ರ ಬಡ್ಡಿ ದರದಲ್ಲಿ ವಾರ್ಷಿಕ ಒಂದು ಲಕ್ಷ ರೂ.ಗಳವರೆಗೆ ಸಾಲ ಮಂಜೂರು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 75 ಕೋಟಿ ರೂ. ಮೀಸಲಿಡಲಾಗುವುದು.
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಕನ್ನಡ ಮತ್ತು ಆಂಗ್ಲ ಭಾಷಾ ಜ್ಞಾನವನ್ನು ಉತ್ತಮಪಡಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯಗಳನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ. ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಯುವಜನರಿಗೆ ಕೌಶಲ್ಯ ತರಬೇತಿಯನ್ನು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭ.
ಅಲ್ಪಸಂಖ್ಯಾತರ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಿಂದಲೇ ನೀಟ್, ಜೆಇಇ, ಸಿಇಟಿ ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ಎರಡು ವರ್ಷಗಳ ತರಬೇತಿಯನ್ನು ನೀಡಲು ಎಂಟು ಕೋಟಿ ರೂ.ಅನುದಾನ. ಬೆಂಗಳೂರಿನ ಹಜ್ ಭವನದಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಅಲ್ಪಸಂಖ್ಯಾತರ ಯುವ ಜನರಿಗೆ 10 ತಿಂಗಳ ವಸತಿಸಹಿತ ಐಎಎಸ್/ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ 250 ರೊಳಗೆ ಯುನಿವರ್ಸಿಟಿ ರ‍್ಯಾಂಕಿಂಗ್ ಹೊಂದಿರುವ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ಸಾಲ ಸೌಲಭ್ಯ. ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 10 ಸಾವಿರ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅವಕಾಶವನ್ನು ಕಲ್ಪಿಸುವ ಸಲುವಾಗಿ ಬ್ಯಾಂಕ್‍ಗಳಿಂದ ಪಡೆಯುವ ಸಾಲ ಮೊತ್ತದ ಶೇ.20 ರಷ್ಟು ಅಥವಾ ಗರಿಷ್ಠ ಒಂದು ಲಕ್ಷ ರೂ.ವರೆಗೆ ಸಹಾಯಧನ.
ʻಸ್ವಾವಲಂಬಿ ಸಾರಥಿʼ ಯೋಜನೆಯಡಿ, ಅಲ್ಪಸಂಖ್ಯಾತ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50 ರಷ್ಟು, ಗರಿಷ್ಠ 3 ಲಕ್ಷ ರೂ.ಗಳ ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ. ಅಪೂರ್ಣಗೊಂಡಿರುವ 126 ಶಾದಿ ಮಹಲ್ ಮತ್ತು ಸಮುದಾಯ ಭವನಗಳ ನಿರ್ಮಾಣ ಕಾರ್ಯಕ್ಕೆ 54 ಕೋಟಿ ರೂ.ಅನುದಾನ. ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಕರ್ನಾಟಕ ಇನಾಮ್ ರದ್ದಿಯಾತಿ ಅಧಿನಿಯಮದನ್ವಯ ನೀಡಲಾಗುತ್ತಿರುವ ತಸ್ತಿಕ್ ಮೊತ್ತವನ್ನು 48 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳಿಗೆ ಹೆಚ್ಚಳ. ಇದರಿಂದ ತಸ್ತಿಕ್ ಪಡೆಯುತ್ತಿರುವ 868 ಸಂಸ್ಥೆಗಳಿಗೆ ಅನುಕೂಲ.
ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಮತ್ತು ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ 360 ಕೋಟಿ ರೂ.ಮೀಸಲು. ಜೈನರ ಪ್ರಮುಖ ಪುಣ್ಯಕ್ಷೇತ್ರಗಳ ಅಭಿವೃದ್ಧಿಗಾಗಿ 25 ಕೋಟಿ ರೂ.ಅನುದಾನ. ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ.ಅನುದಾನ ನೀಡಲಾಗುವುದು. ರಾಜ್ಯದಲ್ಲಿ 40 ಸಾವಿರಕ್ಕಿಂತಲೂ ಅಧಿಕ ವಕ್ಛ್ ಆಸ್ತಿಗಳಿದ್ದು, ಇವುಗಳ ಸಂರಕ್ಷಣೆ ಮತ್ತು ಅಭಿವೃದ್ದಿಗಾಗಿ 2023-24ನೇ ಸಾಲಿನಲ್ಲಿ 50 ಕೋಟಿ ರೂ.ಅನುದಾನ.
ಹಲಸೂರಿನಲ್ಲಿರುವ ಗುರುದ್ವಾರದ ಅಭಿವೃದ್ಧಿಗೆ 25 ಕೋಟಿ ರೂ., ಮೈಸೂರು, ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿರುವ ಗುರುದ್ವಾರಗಳ ಅಭಿವೃದ್ಧಿಗೆ ಐದು ಕೋಟಿ ರೂ.ಗಳನ್ನು ಒದಗಿಸಲಾಗುವುದು. ಅಲ್ಲದೆ, ಗುರುದ್ವಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಿಗಳಿಗೆ ಅವರ ದೈನಂದಿನ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಮಾಸಿಕ ಗೌರವ ಧನ ನೀಡಲಾಗುವುದು.