ಹಾವೇರಿ| ಬಿಜೆಪಿಯಿಂದ ಸಂತ್ರಸ್ತೆಗೆ 25ಸಾವಿರ ರೂ.ಪರಿಹಾರ: ಬಿ.ಸಿ. ಪಾಟೀಲ್
ಹಾವೇರಿ: ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಸಂತ್ರಸ್ತೆಗೆ ಜಿಲ್ಲೆಯ ಬಿಜೆಪಿ ವತಿಯಿಂದ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣದಲ್ಲಿ ರಾಜಿ ಮಾಡಲು ಬಂದವರನ್ನೂ ಆರೋಪಿಗಳನ್ನಾಗಿ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸಂತ್ರಸ್ತೆಗೆ ಕನಿಷ್ಟ ಸಾಂತ್ವನ ಹೇಳಿಲ್ಲ. ಆ ಸಹೋದರಿಯನ್ನು ನಾವು ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಗ್ಯಾರಂಟಿಯೂ ಇದೆ. ಇದು ಸರಕಾರದ ಆರನೇ ಗ್ಯಾರಂಟಿ ಅನಿಸುತ್ತದೆ. ಕಾಂಗ್ರೆಸ್‍ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದಾರೆ. ಆರೋಪಿಗಳನ್ನು ಭೇಟಿಯಾಗಲು ಮುಖಂಡರನ್ನು ಬಿಡುತ್ತಾರೆ ಎಂದರೆ ಪೊಲೀಸರು ಶಾಮೀಲಿದಾರೆ ಎಂದು ಕಿಡಿಕಾರಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸುಮಾರು 7 ಜನ ಆರೋಪಿಗಳು ಲಾಡ್ಜ್ ಗೆ ನುಗ್ಗಿ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿದಾರೆಂದು ಆರೋಪ ಮಾಡಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕುವ ಕೆಲಸ ಪೊಲೀಸರು ಮಾಡಿದಾರೆ. ಈ ದುಷ್ಕೃತ್ಯಗಳಿಗೆ ಕಾಂಗ್ರೆಸ್ ಪಕ್ಷ ನಾಯಕರು ಬೆಂಬಲ ನೀಡಿದಾರೆ ಎಂದು ದೂರಿದರು.