ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ, ಸತ್ಯಾಂಶ ಶೋಧಿಸಿ ಬರೆಯಿರಿ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2025-01-11 18:04 GMT

ಡಿ.ಕೆ. ಶಿವಕುಮಾರ್ (Photo:X)

ಬೆಂಗಳೂರು: "ಮಾಧ್ಯಮಗಳು ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ. ಆದರೆ ಸತ್ಯಾಂಶ ಶೋಧಿಸಿ ಬರೆಯಿರಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಕಿವಿಮಾತು ಹೇಳಿದರು.

ಬೆಂಗಳೂರು ಪ್ರೆಸ್ ಕ್ಲಬ್ ಶನಿವಾರದಂದು ಏರ್ಪಡಿಸಿದ್ದ 'ಪ್ರೈಡ್ ಆಫ್ ಕರ್ನಾಟಕ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

"ನಾನು ಚುನಾವಣಾ ರಾಜಕೀಯಕ್ಕೆ ಬಂದು 40 ವರ್ಷಗಳು ಕಳೆದಿವೆ. ಆದರೆ ಒಂದು ದಿನವೂ ಪ್ರೆಸ್ ಕ್ಲಬ್ ಗೆ ಕಾಲಿಟ್ಟಿರಲಿಲ್ಲ. ಕಳೆದ ವರ್ಷ ನನ್ನನ್ನು ಕರೆಸಿ ವರ್ಷದ ವ್ಯಕ್ತಿ ಪ್ರಶಸ್ತಿ ಕೊಟ್ಟಿದ್ದೀರಿ" ಎಂದರು.

"ನನ್ನ ರಾಜಕೀಯ ಜೀವನದ ಹಾದಿಯಲ್ಲಿ ಮಾಧ್ಯಮದವರು ನನಗೆ ಸಕಾರಾತ್ಮಕ ಪ್ರಚಾರವನ್ನು ನೀಡಿದ್ದೀರಿ, ನಕಾರಾತ್ಮಕ ಪ್ರಚಾರವನ್ನು ನೀಡಿದ್ದೀರಿ. ಈ ಹಿಂದೆ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಪೆಂಗ್ಯೋಂಗ್ ನಲ್ಲಿ ನಡೆದಿದ್ದ ವಿಶ್ವ ಯುವ ಸಮ್ಮೇಳನಕ್ಕೆ ಕಳುಹಿಸಿಕೊಟ್ಟಿದ್ದರು. ಆ ಸಮಯದಲ್ಲಿ ವೆಂಕಟಸುಬ್ಬಯ್ಯ ಅವರು ರಾಜ್ಯಪಾಲರಾಗಿದ್ದರು. ಇಲ್ಲಿ ದೊಡ್ಡ ಸಮಾವೇಶ ನಡೆದ ನಂತರ ನಾನು ಕಬ್ಬನ್ ಪಾರ್ಕ್ ನಲ್ಲಿ ಬಂದು ಕೂತಿದ್ದೆ. ಪೊಲೀಸ್ ಆಯುಕ್ತರು ಒಬ್ಬರನ್ನು ಕಳುಹಿಸಿ ನನ್ನನ್ನು ಕರೆಸಿಕೊಂಡರು. ನಿಮ್ಮನ್ನು ವಿಶ್ವ ಯುವ ಸಮ್ಮೇಳನಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ಭಾಗವಹಿಸಲು ವಿಸಾಗೆ 3 ಸಾವಿರ ಕಟ್ಟಬೇಕು ಎಂದು ಹೇಳಿದ್ದರು. ಆಗ ನನ್ನ ಬಳಿ ದುಡ್ಡು ಇರಲಿಲ್ಲ. ನನ್ನ ಕತ್ತಿನಲ್ಲಿ ಇದ್ದ ಚಿನ್ನದ ಸರ ಅಡವಿಟ್ಟು ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿ ಹಣ ಪಾವತಿಸಿದ್ದೆ. ಒಂದು ದಿನದ ನಂತರ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಬಗ್ಗೆ ನನಗೆ ಟೆಲಿಗ್ರಾಮ್ ಬಂತು.

ಆಗ ಹೊರಡುವ ಮುನ್ನ 5 ಜನ ಸಂಸದರು ನೀವು ಇಂತಹ ಗೂಂಡಾಗಳನ್ನು ಕಳುಹಿಸುತ್ತಿದ್ದೀರಿ ಎಂದು ರಾಜೀವ್ ಗಾಂಧಿ ಅವರಿಗೆ ಹೇಳಿದರು. ಅಷ್ಟು ಹೊತ್ತಿಗೆ ನಾನು ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ನಾವು ಹೊರಡುವ ಮುನ್ನ ನಮಗೆ ಔತಣ ಕೂಟ ನೀಡಿ ಕೆಲವು ಮಾರ್ಗದರ್ಶನ ನೀಡಿ ಕಳುಹಿಸಿದರು. ಅಂದು 5 ಸಂಸದರ ದೂರಿನ ಮೇರೆಗೆ ರಾಜೀವ್ ಗಾಂಧಿ ಅವರು ರಾಜ್ಯಪಾಲರಿಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದರು. ಅವರು ಏನು ಹೇಳಿದರೊ ಗೊತ್ತಿಲ್ಲ. ರಾಜೀವ್ ಗಾಂಧಿ ಅವರು 5 ಸಂಸದರು ಹಾಗೂ ನನ್ನನ್ನು ಕರೆಸಿ ವಿವಾದಾತ್ಮಕ ನಾಯಕರೇ ಹೆಚ್ಚು ಯಶಸ್ವಿಯಾಗುತ್ತಾರೆ ಎಂದು ಹೇಳಿ, ಹಣ ಕೊಟ್ಟು ನನ್ನನ್ನು ಸಮ್ಮೇಳನಕ್ಕೆ ಕಳುಹಿಸಿಕೊಟ್ಟಿದ್ದರು" ಎಂದು ಸ್ಮರಿಸಿದರು.

ಮೀಡಿಯಾ ಸ್ಕೂಲ್ ಆರಂಭಿಸಲು ತೀರ್ಮಾನ:

"ಈಗಿನ ಮಾಧ್ಯಮಗಳು ಸತ್ಯವನ್ನು ಬರೆಯುವುದಕ್ಕಿಂತ ಹೆಚ್ಚಾಗಿ ವಿವಾದಾತ್ಮಕ ಸುದ್ದಿಯನ್ನೇ ಪ್ರಕಟಿಸುತ್ತೀರಿ. ನಾನು ಕಳೆದ 25 ವರ್ಷಗಳಿಂದ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೆ. ಈಗ ಆ ಸಂಸ್ಥೆಗೆ ರಾಜೀನಾಮೆ ನೀಡಿ ಅದರ ಜವಾಬ್ದಾರಿಯನ್ನು ನನ್ನ ಕುಟುಂಬದವರಿಗೆ ನೀಡಿದ್ದೇನೆ. ಈಗಿನ ಮಾಧ್ಯಮಗಳನ್ನು ನೋಡಿ ನನ್ನ ಮಗಳು ಒಂದು ಮೀಡಿಯಾ ಸ್ಕೂಲ್ ಆರಂಭಿಸಬೇಕು ಎಂದು ಹೇಳಿದಳು. ನಾನು ಕೂಡ ಇದನ್ನು ಆರಂಭಿಸಲು ತೀರ್ಮಾನಿಸಿದ್ದೇನೆ" ಎಂದರು.

ನಾನು ದೇವಸ್ಥಾನಕ್ಕೆ ಹೋದರೂ ಪ್ರಶ್ನೆ ಮಾಡುತ್ತಾರೆ. ಎಲ್ಲರೂ ತಮ್ಮದೇ ಆದ ಧರ್ಮ ಪಾಲನೆ ಮಾಡುತ್ತಾರೆ. ನನ್ನ ಹೆಸರಿನಲ್ಲಿ ಶಿವ ಇದೆ. ನಾನು ಹುಟ್ಟುವಾಗ ಇದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ನಾವು ಜಾತಿ ಧರ್ಮ ಬೇಡ ಎಂದರೂ ನಾವು ಹುಟ್ಟಿದಾಗ ಹಾಗೂ ಸತ್ತಾಗ ನಮ್ಮ ಸಂಪ್ರದಾಯ, ಆಚರಣೆಗಳು ನಮ್ಮ ಜಾತಿ ಧರ್ಮವನ್ನು ಬಿಡುವುದಿಲ್ಲ. ಅದೇ ರೀತಿ ಮಾಧ್ಯಮಗಳು ಬೇಡ ಎಂದರೂ ರಾಜಕಾರಣಿಗಳು ಮಾಧ್ಯಮಗಳನ್ನು ಬಿಡಲು ಆಗುವುದಿಲ್ಲ. ಹೀಗಾಗಿ ಶೃಂಗೇರಿ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಇಲ್ಲಿಗೆ ಆಗಮಿಸಿದ್ದೇನೆ. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಬಂದಿದ್ದೇನೆ" ಎಂದು ತಿಳಿಸಿದರು.

ಪ್ರಶಸ್ತಿ ಪಡೆಯುತ್ತಿರುವವರ ಪಟ್ಟಿ ನೋಡಿ ಸಂತೋಷವಾಗಿದೆ. ಈ ಹಾರ ಬಹಳ ಭಾರ. ಸನ್ಮಾನ ಮಾಡಿಸಿಕೊಂಡ ನಂತರ ಜವಾಬ್ದಾರಿ ಹೆಚ್ಚುತ್ತದೆ. ಈ ಜವಾಬ್ದಾರಿ ಭಾರ ಹೊತ್ತು ಸಮಾಜಕ್ಕೆ ಮತ್ತಷ್ಟು ಸೇವೆ ಮಾಡಲಿ ಎಂದು ಶುಭಕೋರುತ್ತೇನೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News