ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಶೇ.35 ವಿದ್ಯಾರ್ಥಿಗಳು ಉತ್ತೀರ್ಣ
ಬೆಂಗಳೂರು, ಸೆ.12: ಆಗಸ್ಟ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯನ್ನು ಬರೆದವರ ಪೈಕಿ ಶೇ.35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಯನ್ನು ಆ.21ರಿಂದ ಸೆ.2ರವರೆಗೆ 274 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಬೆಂಗಳೂರು ನಗರದಲ್ಲಿನ ಒಟ್ಟು 10 ಮೌಲ್ಯಮಾಪನ ಶಿಬಿರಗಳಲ್ಲಿ ಸೆ.7ರಿಂದ ಸೆ.10ರವರೆಗೆ 4022 ಮೌಲ್ಯಮಾಪಕರಿಂದ ನಡೆಸಲಾಯಿತು. ಪರೀಕ್ಷೆಗೆ 1,21,179 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 1,19,183 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 41,961 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಯಲ್ಲಿ ಬಾಲಕರು ಶೇ.32.7ರಷ್ಟು ಮಂದಿ ಉತ್ತೀರ್ಣರಾಗಿದ್ದು, ಬಾಲಕಿಯರು ಶೇ.39ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದಲ್ಲಿ ಶೇ.34ರಷ್ಟು ಮಂದಿ, ಗ್ರಾಮಾಂತರ ಪ್ರದೇಶದಲ್ಲಿ ಶೇ.36.11ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಶೇ.36, ವಾಣಿಜ್ಯ ವಿಭಾಗದಲ್ಲಿ ಶೇ.27 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.43ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶೇ.35ರಷ್ಟು ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಶೇ.34ರಷ್ಟು ಫಲಿತಾಂಶ ದಾಖಲಾಗಿದೆ.
ಮರುಮೌಲ್ಯಮಾಪನ: ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಸೆ.12ರಿಂದ ಸೆ.15ರವೆರೆಗೆ ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ಸೆ.16ರಿಂದ ಸೆ.18ರವರೆಗೆ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಸ್ಕ್ಯಾನಿಂಗ್ ಪ್ರತಿಯನ್ನು ಪಡೆದವರಿಗೆ ಮಾತ್ರ ಮರುಮೌಲ್ಯಮಾಪನ ಹಾಗೂ ಮರುಎಣಿಕೆಗೆ ಅವಕಾಶ ನೀಡಲಾಗಿದ್ದು, ಸೆ.16ರಿಂದ ಸೆ.18ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸ್ಕ್ಯಾನಿಂಗ್ ಪ್ರತಿಯನ್ನು ಪಡೆಯಲು ಪ್ರತಿ ವಿಷಯಕ್ಕೆ 530 ರೂ.ಗಳನ್ನು ಮತ್ತು ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂ.ಗಳನ್ನು ನಿಗಧಿಪಡಿಸಲಾಗಿದೆ. ಅಂಕಗಳ ಮರು ಎಣಿಕೆಗೆ ಯಾವುದೇ ಶುಲ್ಕವಿರುವುದಿಲ್ಲ.