4,071 ಕೋಟಿ ರೂ.ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಒಪ್ಪಿಗೆ: ಸಚಿವ ಎಂ.ಬಿ. ಪಾಟೀಲ್

Update: 2024-09-27 16:27 GMT

ಬೆಂಗಳೂರು: ಐವತ್ತು ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆಯ 14 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳು ಸೇರಿದಂತೆ ಒಟ್ಟು 88 ಯೋಜನೆಗಳಿಂದ 4,071.11 ಕೋಟಿ ರೂ.ಬಂಡವಾಳ ಹೂಡಿಕೆಯ ಹಾಗೂ 10,585 ಜನರಿಗೆ ಉದ್ಯೋಗವಕಾಶ ಲಭಿಸುವ ಯೋಜನೆಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ಆನೇಕಲ್‍ನ ವೀರಸಂದ್ರ ಗ್ರಾಮದಲ್ಲಿ 485 ಕೋಟಿ ರೂ.ಹೂಡಿಕೆಯೊಂದಿಗೆ ಒಂದು ಸಾವಿರ ಮಂದಿಗೆ ಐಟಿ ಮತ್ತು ಐಟಿಇಎಸ್ ಕ್ಷೇತ್ರದಲ್ಲಿ ಉದ್ಯೋಗ ನೀಡುವ ಅರಾಟ್ ಒನ್ ವಲ್ರ್ಡ್ ಪ್ರೈ.ಲಿ., (ಈ ಹಿಂದಿನ ಆರ್‍ಜಿಆರ್ ಟೆಕ್‍ಪಾರ್ಕ್ ಪ್ರೈ.ಲಿ.) ಕಂಪನಿಗೆ ಅನುಮತಿ ನೀಡಲಾಗಿದೆ.

ಡೇರಿ ಕ್ಲಾಸಿಕ್ ಐಸ್ ಕ್ರೀಂ ಸಂಸ್ಥೆಯು, ಕಲಬುರಗಿ ಜಿಲ್ಲೆಯ ನಂದೂರು ಕಾಸರಟಗಿ ಕೈಗಾರಿಕಾ ಪ್ರದೇಶದಲ್ಲಿ 285 ಕೋಟಿ ರೂ.ವೆಚ್ಚದಲ್ಲಿ ಐಸ್ ಕ್ರೀಂ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು ಇದರಿಂದ 900 ಜನರಿಗೆ ಉದ್ಯೋಗ ಸಿಗಲಿದೆ. ಫ್ರೋಜನ್ ಡೆಸರ್ಟ್, ಕುಲ್ಫಿ ಇತ್ಯಾದಿ ಕೋಲ್ಡ್ ಸ್ಟೋರೇಜ್ ಸಹಿತ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ 14 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 2,031.76 ಕೋಟಿ ರೂ.ಬಂಡವಾಳ ಹೂಡಿಕೆಯಾಗಲಿದೆ ಹಾಗೂ 3,302 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

15 ಕೋಟಿಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 68 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 1,355.07 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 5,049 ಜನರಿಗೆ ಉದ್ಯೋಗವಕಾಶ ಸಿಗಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಹೆಚ್ಚುವರಿ ಬಂಡವಾಳ ಹೂಡಿಕೆಯ 6 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 684.28 ಕೋಟಿ ರೂ. ಬಂಡವಾಳ ಹರಿದು ಬರಲಿದೆ ಹಾಗೂ ಅಂದಾಜು 2,234 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮಹೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News